100 ದಿನ ಮೈಲಿಗಲ್ಲು ಅಲ್ಲ. ಆದರೆ ಹಾದಿಯ ದಿಕ್ಸೂಚಿ: ಸಿಎಂ ಬೊಮ್ಮಾಯಿ!

By Kannadaprabha NewsFirst Published Nov 5, 2021, 6:50 AM IST
Highlights

* ದಿಟ್ಟ, ಭರವಸೆಯ 100 ದಿನ: ಸಿಎಂ ಬೊಮ್ಮಾಯಿ

* ರಾಜ್ಯ ಸರ್ಕಾರದ ಕಾರ್ಯವೈಖರಿ ತೃಪ್ತಿ ತಂದಿದೆ

* 100 ದಿನ ಮೈಲಿಗಲ್ಲು ಅಲ್ಲ. ಆದರೆ ಹಾದಿಯ ದಿಕ್ಸೂಚಿ

 ಹುಬ್ಬಳ್ಳಿ(ನ.05): ತಮ್ಮ ನೇತೃತ್ವದ ರಾಜ್ಯ ಸರ್ಕಾರಕ್ಕೆ 100 ದಿನ ಪೂರ್ಣವಾಗಿದೆ. ಈ ನೂರು ದಿನಗಳ ಆಡಳಿತದಲ್ಲಿ ದಿಟ್ಟ, ಭದ್ರ ಹಾಗೂ ಭರವಸೆಯ ಹೆಜ್ಜೆಗಳನ್ನು ಇಟ್ಟಿದ್ದೇವೆ. ಇದು ತಮಗೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ತಿಳಿಸಿದ್ದಾರೆ.

ಗುರುವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಡಳಿತದ 100 ದಿನ ಬಹಳ ದೊಡ್ಡ ಮೈಲಿಗಲ್ಲು ಏನಲ್ಲ. ಆದರೆ, ನಮ್ಮ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಸರ್ಕಾರದ ಹಾದಿಯು ದಿಕ್ಸೂಚಿಯಾಗಿದೆ ಎಂದರು.

100 ದಿನದಲ್ಲಿ ಹತ್ತಾರು ಕ್ರಮ ಕೈಗೊಂಡಿದ್ದೇವೆ. ಅಮೃತ ಯೋಜನೆ, ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್‌, ಬಡವರಿಗೆ ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಹೆಚ್ಚು ಮಾಡಲಾಗಿದೆ. ಹತ್ತಾರು ಭದ್ರ, ಭರವಸೆ ಹಾಗೂ ದಿಟ್ಟಹೆಜ್ಜೆಗಳನ್ನು ಇಟ್ಟಿದ್ದೇವೆ. ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಅಗತ್ಯವಿರುವ ನಿರ್ಣಯ ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಬಗ್ಗೆ ತೃಪ್ತಿ ತಂದಿದೆ ಎಂದ ಅವರು, ನಾವು ತೆಗೆದುಕೊಂಡಿರುವ ನಿರ್ಣಯಗಳು ಸರ್ಕಾರ ಸರಿ ದಾರಿಗೆ ಹೋಗುತ್ತಿದೆ ಎಂಬುದನ್ನು ತೋರಿಸುತ್ತಿದೆ ಎಂದರು.

ಇನ್ನು ನಮ್ಮ ಕನಸಿರುವುದು ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಜನರ ಹತ್ತಿರ ಸರ್ಕಾರ, ಸರ್ಕಾರದ ಸೇವೆಗಳು ತಲುಪುವಂತಾಗಬೇಕು. ಆರ್ಥಿಕತೆ ಈಗ ಚೇತರಿಸಿಕೊಳ್ಳುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಬಳಕೆಯಾಗಬೇಕು. ರಾಜ್ಯದ ತಲಾ ಆದಾಯ ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಮೊದಲ 5ನೇ ಸ್ಥಾನದಲ್ಲಿದ್ದರೂ, ಇದರಲ್ಲಿ ಎಲ್ಲ ಜನರ ಕೊಡುಗೆ ಇರಬೇಕು. ಆರ್ಥಿಕ ಬೆಳವಣಿಗೆಯಲ್ಲಿ ಎಸ್ಸಿ, ಎಸ್ಟಿಹಿಂದುಳಿದ ವರ್ಗ, ಬಡವರು ಸಹ ಪಾಲ್ಗೊಳ್ಳುವಂತಾಗಬೇಕು. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಿ, ಆರ್ಥಿಕ ನೆರವು ನೀಡಬೇಕು. ಅದರಲ್ಲೂ ಹೆಣ್ಣು ಮಕ್ಕಳನ್ನು ಕಾರ್ಯಕ್ರಮಗಳ ಭಾಗವಾಗಿಸುವುದು ನಮ್ಮ ಆಶಯ ಎಂದು ನುಡಿದರು.

ಇನ್ನು ಆಡಳಿತ ಸುಧಾರಣೆ ತರಬೇಕು. ಇದಕ್ಕಾಗಿ ಈಗಾಗಲೇ ಸಿಎಂ ಡ್ಯಾಷ್‌ಬೋರ್ಡ್‌ ಮಾಡಿದ್ದೇವೆ. ಎಲ್ಲ ಇಲಾಖೆಗಳ ಪ್ರಮುಖ ಯೋಜನೆಗಳ ವರದಿಯನ್ನು ಅದರಲ್ಲಿ ಅಪಲೋಡ್‌ ಮಾಡಲಾಗುತ್ತಿದೆ. ನಮ್ಮ ಅಧಿಕಾರಿ ವರ್ಗ ಪ್ರತಿದಿನ ಅದನ್ನು ನೋಡುತ್ತಾರೆ. ಆಡಳಿತ ಸುಧಾರಣೆಯನ್ನು ಮೇಲಿನಿಂದ ತಳಮಟ್ಟದ ವರೆಗೆ ತೆಗೆದುಕೊಂಡು ಹೋಗುವ ಪ್ರಯತ್ನವಿದು. ಪ್ರತಿ 15 ದಿನಕ್ಕೊಂದು ಬಾರಿ ಕೋರ್ಸ್‌ ಕರೆಕ್ಷನ್‌ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಸಿಎಂ ಡ್ಯಾಷ್‌ ಬೋರ್ಡ್‌ ಸೃಜಿಸಲಾಗಿದೆ ಎಂದು ವಿವರಿಸಿದರು.

ಜ.26ರಿಂದ ರಾಜ್ಯಾದ್ಯಂತ ಜನಸೇವಕ:

ಜನಸೇವಕ ಯೋಜನೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸದ್ಯ ಬೆಂಗಳೂರಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ತರಬೇತಿ ನೀಡಿ ಜನಸೇವಕರಾಗಿ ಪರಿವರ್ತಿಸಿ ಕೆಲಸ ಪ್ರಾರಂಭಿಸಲಾಗಿದೆ. ಜನವರಿ 26ರಿಂದ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ದೊಡ್ಡ ಸಂಖ್ಯೆಯಲ್ಲಿ ಜನಸೇವಕರಿಗೆ ತಾಂತ್ರಿಕ ತರಬೇತಿ ನೀಡಬೇಕು. ಮನೆಗೆ ಹೋಗಿ ಲ್ಯಾಪ್‌ಟಾಪ್‌ ಮೂಲಕವೇ ನೋಂದಣಿ, ಸ್ವೀಕೃತಿ, ಅರ್ಜಿ ಪಡೆದು ಸೌಲಭ್ಯ ವಿತರಿಸಬೇಕಿರುವುದರಿಂದ ತರಬೇತಿ ಅತ್ಯಗತ್ಯ ಎಂದು ನುಡಿದರು.

ತೈಲ ಬೆಲೆ ಇಳಿಕೆ ಚಿಂತನೆ ಇತ್ತು:

ಇಂಧನ ಬೆಲೆ .100 ದಾಟಿದಾಗಿನಿಂದಲೂ ಇಳಿಕೆ ಮಾಡಬೇಕೆಂಬ ಚಿಂತನೆ ಸರ್ಕಾರಕ್ಕಿತ್ತು. ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆ ಮಾಡುವ ಮೂಲಕ ದೀಪಾವಳಿ ಉಡುಗೊರೆ ನೀಡಿದೆ. ಅದಕ್ಕೆ ತಕ್ಕಂತೆ ರಾಜ್ಯದಲ್ಲೂ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ತಲಾ .7 ಕಡಿಮೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂಧನ ದರ ಇಳಿಕೆಯಿಂದ . 2100 ಕೋಟಿ ರಾಜ್ಯದ ಬೊಕ್ಕಸಕ್ಕೆ ಕೊರತೆಯಾಗಲಿದೆ. ಇದು ಅಂದಾಜು ಮಾತ್ರ. ನಿಖರವಾಗಿ ಎಷ್ಟುಕೊರತೆಯಾಗುತ್ತದೆ ಎಂಬುದು ನಂತರ ಲೆಕ್ಕ ಹಾಕಲಾಗುವುದು. ಡೀಸೆಲ್‌ ಹಾಗೂ ಪೆಟ್ರೋಲ್‌ ದರ ಇಳಿಕೆ ಮಾಡಿರುವುದರಿಂದ ಬೆಲೆಗಳು ಇಳಿಕೆಯಾಗಿದ್ದು ಆರ್ಥಿಕತೆ ಬೆಳವಣಿಗೆಗೂ ಅನುಕೂಲವಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬುಲಾವ್‌ ಬಂದಿಲ್ಲ, ದೆಹಲಿಗೆ ಹೋಗಲ್ಲ, ಸಂಪುಟ ವಿಸ್ತರಣೆ ಈಗಿಲ್ಲ

ಹೈಕಮಾಂಡ್‌ನಿಂದ ನಮಗೇನು ಬುಲಾವ್‌ ಬಂದಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿ ನ.7ರಂದು ಇರುವುದು ನಿಜ. ಆದರೆ ಅದಕ್ಕೆ ನಾನು ಹೋಗುತ್ತಿಲ್ಲ. ಬೆಂಗಳೂರಿನ ಪಕ್ಷದ ಕಚೇರಿಯಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜೊತೆಗೆ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

click me!