
ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.13): ಜಾರಿ ನಿರ್ದೇಶನಾಲಯ (ಇ.ಡಿ)ಗೆ ನನ್ನ ವಿರುದ್ಧ ದೂರು ನೀಡಿದವರು ಯಾರು ಎಂಬುದು ಗೊತ್ತಾಗಿದೆ. ಕಾಂಗ್ರೆಸ್ ಸಂಬಂದ ಇರುವ, ಆದರೆ ಬಿಜೆಪಿ ಮತದಾರನಾಗಿರುವ ಈ ವ್ಯಕ್ತಿ ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನದ್ದು ಮುಖ್ಯಮಂತ್ರಿಗಳು ಪರಿಶೀಲಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳೆ, ಇ.ಡಿಗೆ ದೂರು ನೀಡಿದವರು ಯಾವ ಪಕ್ಷದವರು ಎಂಬ ಪ್ರಶ್ನೆಗೆ ಉತ್ತರಿಸಿದರು.ನಾನು ಯಾವ ಪಕ್ಷದವರು ಎಂದು ಹೇಳಿಲ್ಲ. ಅವರು ನಮ್ಮ ಪಕ್ಷದವರೂ ಇರಬಹುದು ಅಥವಾ ಇಲ್ಲದಿರಬಹುದು. ಅವರ ಸಂಬಂಧ ಇರುವುದು ಕಾಂಗ್ರೆಸ್‌ನಲ್ಲಿ. ಆದರೆ ಅವರ ಮತದಾರರು ಬಿಜೆಪಿಯಲ್ಲಿದ್ದಾರೆ. 50-50 ಇದೆ. ಹೀಗಾಗಿ ಯಾವ ರೀತಿ ನಿರ್ಧಾರ ಮಾಡುವಿರಿ ನೋಡಿ ಎಂದು ಮುಖ್ಯಮಂತ್ರಿ ಅವರಿಗೆ ಹೇಳಿದ್ದೇನೆ. ಇದು ಎಲ್ಲಾ ಪಕ್ಷದಲ್ಲೂ ಇರುವುದೇ. ಅದನ್ನು ಮೀರಿ ಬೆಳೆಯಬೇಕು ಎಂದು ಜಾರಕಿಹೊಳಿ ಹೇಳಿದರು.
ಆಫ್ರಿಕಾ ಚಿನ್ನದ ಗಣಿಗಾರಿಕೆ ಕಂಪೆನಿಯಲ್ಲಿ ನನ್ನದು ಶೇ.40 ರಷ್ಟು ಪಾಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಇ.ಡಿ ಅವರ ಹೇಳಿಕೆಯಲ್ಲೂ ಗಣಿಗಾರಿಕೆ ಕಂಪೆನಿಯಲ್ಲಿ ನಮ್ಮ ಪಾಲಿದೆ ಎಂದಿದ್ದಾರೆ. ಅದು ಅನುಮಾನದ ಆರೋಪವೇ ಹೊರತು ಅಂತಿಮವಲ್ಲ. ಲಂಚದ ಬಗ್ಗೆಯೂ ಆರೋಪವಿದೆ ಎಂದಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಸಾಬೀತು ಮಾಡಲಿ. ನಮಗೆ ನೋಟಿಸ್ ನೀಡಿದರೆ ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಇ.ಡಿ ಪತ್ರಿಕಾ ಹೇಳಿಕೆಯಲ್ಲಿ ಹೂಡಿಕೆ, ಲೋಕೋಪಯೋಗಿ ಇಲಾಖೆಯ ಅಂಶಗಳ ಬಗ್ಗೆ ಇದೆ. ನಮಗೆ ನೋಟಿಸ್ ನೀಡಿದರೆ ನಮ್ಮ ದಾಖಲೆ ನಾವು ಕೊಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ. ಅದು ದೀರ್ಘ ಪ್ರಕ್ರಿಯೆ ಅವರು ಕರೆದರೆ ಎಲ್ಲದಕ್ಕೂ ನಮ್ಮ ಬಳಿ ಸ್ಪಷ್ಟೀಕರಣವಿದೆ ಎಂದರು.
ಇ.ಡಿ ದಾಳಿ ರಾಜಕೀಯ ಇಮೇಜಿಗೆ ಧಕ್ಕೆ ತರುತ್ತಾ ಎಂಬ ಪ್ರಶ್ನೆಗೆ, ಸಾಧಾರಣವಾಗಿ ಧಕ್ಕೆ ಆಗುತ್ತದೆ. ಶಂಕೆ ಅಂತ ಹೇಳಿದ್ದಾರೆ ನೋಡೋಣ. ನಮಗೆ ಇ.ಡಿಗೂ ಮೊದಲು ಸಾರ್ವಜನಿಕರು ಹಾಗೂ ನ್ಯಾಯಾಲಯ ಮುಖ್ಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ