
ಬೆಂಗಳೂರು (ಮಾ.7): ಅದು ಸಿನಿಮಾ ತಾರೆಗಳು, ರಾಜಕಾರಣಿಗಳಿಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ದಿನಗಳು. ತಮಿಳುನಾಡಿನಲ್ಲಿ ಈ ಜನಪ್ರಿಯತೆಯ ಲಾಭ ಪಡೆದುಕೊಂಡ ಎಂಜಿ ರಾಮಚಂದ್ರನ್ (ಎಂಜಿಆರ್), ರಾಜಕೀಯಕ್ಕೆ ಇಳಿದು ರಾಜ್ಯದ ಮುಖ್ಯಮಂತ್ರಿಯಾದರು. ಇನ್ನೊಂಡೆದೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಎನ್‌ಟಿ ರಾಮರಾವ್ ಇದನ್ನೇ ಪುನರಾವರ್ತನೆ ಮಾಡಿದರು. ಈ ವೇಳೆ ಕರ್ನಾಟಕದ ಕಣ್ಮಣಿಯಾಗಿದ್ದ ಡಾ.ರಾಜ್‌ಕುಮಾರ್ ಕೂಡ ರಾಜಕೀಯಕ್ಕೆ ಇಳಿದು ಕರ್ನಾಟಕದ ಸಿಎಂ ಆಗಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡಿದ್ದರು. ಆದರೆ, ಅಣ್ಣಾವ್ರು ಎನ್ನುವ ಹೆಸರಿನಿಂದಲೇ ಜನಪ್ರಿಯರಾಗಿದ್ದ ಡಾ.ರಾಜ್‌ಕುಮಾರ್, ರಾಜಕೀಯಕ್ಕೆ ಇಳಿಯದೇ ಇರುವ ನಿರ್ಧಾರಕ್ಕೆ ಅಚಲವಾಗಿದ್ದರು. ಜನತಾ ಪಕ್ಷವು 1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ಸ್ಯಾಂಡಲ್‌ವುಡ್ ತಾರೆ ರಾಜ್‌ಕುಮಾರ್ ಸ್ಪರ್ಧಿಸಬೇಕೆಂದು ತೀವ್ರವಾಗಿ ಬಯಸಿತ್ತು. ಹಾಗೇನಾದರೂ ರಾಜ್‌ಕುಮಾರ್ ಸ್ಪರ್ಧೆ ಮಾಡಿದ್ದರೆ, ಅವರು ಗೆಲುವು ಕಷ್ಟವೂ ಆಗಿರಲಿಲ್ಲ. ಇಂದಿರಾಗಾಂಧಿ ವಿರುದ್ಧದ ಗೆಲುವು ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಹಾಯ ಮಾಡುತ್ತಿತ್ತು. ಆದರೆ, ರಾಜ್‌ಕುಮಾರ್ ಮಾತ್ರ ಸುತಾರಾಂ ಇದಕ್ಕೆ ಒಪ್ಪಿರಲಿಲ್ಲ.
ಮಾಜಿ ಕೇಂದ್ರ ಸಚಿವ ಮತ್ತು ಜನತಾ ಪಕ್ಷದ ವರಿಷ್ಠ ಜಾರ್ಜ್ ಫೆರ್ನಾಂಡಿಸ್ ಹಾಗೂ ಅನೇಕ ರಾಜ್ಯ ನಾಯಕರು ರಾಜ್‌ಕುಮಾರ್ ಅವರ ಮನವೊಲಿಸಲು ಬಂದಿದ್ದವು. ರಾಜಕೀಯ ವಿಶ್ಲೇಷಕ ಎಂಕೆ ಭಾಸ್ಕರ್ ರಾವ್ ಅರ ಪ್ರಕಾರ, ಮಾಜಿ ಸಿಎಂ ಜೆಎಚ್ ಪಟೇಲ್ ಅಂದು ರಾಜ್‌ಕುಮಾರ್ ಅವರನ್ನು ಚೆನ್ನೈ ನಿವಾಸದಲ್ಲಿ ಭೇಟಿಯಾಗಿದ್ದರು. ಆದರೆ, ರಾಜ್‌ಕುಮಾರ್ ಮಾತ್ರ ಯಾವುದಕ್ಕೂ ಒಪ್ಪಿರಲಿಲ್ಲ. ಆದರೆ, ತಮಗೆ ಒತ್ತಾಯ ಮಾಡುತ್ತಿರುವವರು ತಮಗಿಂತ ಹಿರಿಯರು ಹಾಗೂ ಪ್ರಭಾವಿ ರಾಜಕಾರಣಿಗಳು ಎನ್ನುವುದನ್ನು ಅರಿತುಕೊಂಡಿದ್ದ ರಾಜ್‌ಕುಮಾರ್, ಕೊನೆ ಕೊನೆಗೆ ಅವರ ಮಾತಿಗೆ ಒಲ್ಲೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಂಡರು. ಚುನಾವಣೆಗೆ ನಿಲ್ಲುವ ಒತ್ತಡ ಹೆಚ್ಚಾಗತೊಡಗಿದಂತೆ, ರಾಜಕೀಯಕ್ಕೆ ಇಳಿಯುವ ಬದಲು ನಾಪತ್ತೆಯಾಗಿ ಹೋಗುವ ಪ್ಲ್ಯಾನ್ ಮಾಡಿದ್ದರು.
ಶೌಚಾಲಯಗಳನ್ನೂ ಬಿಡದೆ ಹುಡುಕಿದರು: ಇಂದಿರಾಗಾಂಧಿ ವಿರುದ್ಧ ರಾಜ್‌ಕುಮಾರ್‌ರನ್ನು ಕಣಕ್ಕಿಳಿಸಲೇಬೇಕು ಎಂದುಕೊಂಡಿದ್ದ ಜನತಾ ಪಕ್ಷದ ನಾಯಕರಿಗೆ ರಾಜ್‌ಕುಮಾರ್ ನಾಪತ್ತೆಯಾಗಿದ್ದು ಅಚ್ಚರಿ ಮೂಡಿಸಿತು. ಇತ್ತೀಚೆಗೆ ನಿಧನರಾದ ನಿರ್ಮಾಪಕ ಎಸ್‌ಕೆ ಭಗವಾನ್ ಕೂಡ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. 'ರಾಜ್‌ಕುಮಾರ್‌ಗಾಗಿ ಅವರು ಬೆಂಗಳೂರಿನ ನನ್ನ ಮನೆಯ ಇಂಚಿಂಚೂ ತಡಕಾಡಿದ್ದರು. ಶೌಚಾಲಯಗಳನ್ನೂ ಬಿಟ್ಟಿರಲಿಲ್ಲ. ಮನೆಯಲ್ಲಿದ್ದ ಕರ್ಟನ್‌ಗಳು, ಮೊದಲ ಮಹಡಿಯಲ್ಲಿದ್ದ ಥಿಯೇಟರ್‌ಗಳನ್ನು ತಡಕಾಡಿದರೂ ರಾಜ್‌ಕುಮಾರ್ ಸಿಕ್ಕಿರಲಿಲ್ಲ' ಎಂದು ನೆನಪಿಸಿಕೊಂಡಿದ್ದರು. ಆದರೆ, ರಾಜ್‌ಕುಮಾರ್ ಮಾತ್ರ ರಾಣಿಪೇಟೆಯ ಸಮೀಪದ ತಮ್ಮ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದರು. ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಗಿದ ಬಳಿಕವೇ ಅವರು ಎಲ್ಲರ ಎದುರು ಕಾಣಿಸಿಕೊಂಡಿದ್ದರು. ಅಚ್ಚರಿಯೆಂದರೆ, ಆ ಬಳಿಕ ರಾಜ್‌ಕುಮಾರ್ ಎಲ್ಲೂ 1978ರ ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಇಂದಿರಾಗಾಂಧಿ ವಿರುದ್ಧ ಸ್ಪರ್ಧೆ ಮಾಡುವ ನಿರ್ಧಾರದಿಂದ ಹೊರಗುಳಿದ ಬಗ್ಗೆ ಎಲ್ಲೆಲ್ಲೂ ಮಾತನಾಡಿರಲಿಲ್ಲ.
ಆದರೆ. 2018ರಲ್ಲಿ ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ದೀರ್ಘಕಾಲದ ರಹಸ್ಯವನ್ನು ತಿಳಿಸಿದ್ದರು. 'ನಾನು ಆಗ ತಾನೆ ಪಿಯುಸಿ ಮುಗಿಸಿ ವೈದ್ಯಕೀಯ ಕಾಲೇಜಿಗೆ ಸೇರಲು ಸಿದ್ಧತೆ ಮಾಡುತ್ತಿದ್ದೆ. ಆದರೆ, ಈ ವಿಚಾರದ ಬಗ್ಗೆ ನನಗೆ ಅವರಿಂದಲೇ ಕೇಳಬೇಕು ಎಂದು ಬಹಳ ಸಾರಿ ಅನಿಸಿತ್ತು. ಅದಕ್ಕೆ ಅವರ ಬಳಿಯೇ ಈ ವಿಚಾರ ಪ್ರಸ್ತಾಪಿಸಿದ್ದೆ. ಅದಕ್ಕೆ ಉತ್ತರ ನೀಡಿದ್ದ ಅಪ್ಪಾಜಿ, 'ಈ ವಿಷಯವನ್ನು ಅರ್ಥಮಾಡಿಕೊಳ್ಳವ ವಯಸ್ಸು ನಿನಗಿನ್ನೂ ಆಗಿಲ್ಲ. ಅದಲ್ಲದೆ, ನಿನಗೆ ಈ ರಹಸ್ಯವನ್ನು ಹೇಳುವ ಸಮಯವೂ ಅಲ್ಲ. ಸರಿಯಾದ ಸಮಯ ಬಂದಾಗ ನಾನೇ ಹೇಳುತ್ತೇನೆ. ನಿನಗೆ ಕವಿರತ್ನ ಕಾಳಿದಾಸ ಚಿತ್ರದ ಡೈಲಾಗ್ ಗೊತ್ತಲ್ಲವ? ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ' ಎಂದು ತಿಳಿಸಿದ್ದರು' ಇದನ್ನು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದರು.
ಪಾರ್ವತಮ್ಮ ರಾಜ್‌ಕುಮಾರ್ ಕೊಡಿಸಿದ ಬೈಕ್-ಕಾರು ಮಾರಿ ಲಕ್ ಮತ್ತು ಮನೆ ಕಳೆದುಕೊಂಡೆ: ನಟ ಬಾಲರಾಜ್
ಆದರೆ, ಅವರ ಸಾವಿಗೂ ಒಂದು ವರ್ಷಕ್ಕೂ ಮುನ್ನ ಸ್ವತಃ ಅಪ್ಪಾಜಿಯೇ, ಮಾಜಿ ಪ್ರಧಾನಿ ವಿರುದ್ಧ ಚುನಾವಣೆಗೆ ನಿಲ್ಲದೇ ಇರುವ ತಮ್ಮ ನಿರ್ಧಾರದ ರಹಸ್ಯವನ್ನು ತಿಳಿಸಿದ್ದರು. 'ಅದು 2005, ಚೆನ್ನೈನಲ್ಲಿ ಅವರು ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಾನು ಬಹಳ ವರ್ಷಗಳ ಹಿಂದೆ ಕೇಳಿದ್ದ ಆ ಪ್ರಶ್ನೆಯನ್ನೇ ಆಸ್ಪತ್ರೆಯ ರೂಮ್‌ನಲ್ಲಿ ನೆನಪಿಸಿದ್ದರು. ಅಮ್ಮ (ಪಾರ್ವತಮ್ಮ), ಅಣ್ಣ (ಶಿವರಾಜ್‌ಕುಮಾರ್), ತಮ್ಮ (ಪುನೀತ್) ಅಥವಾ ತಮಗೆ ಆಪ್ತರಾಗಿದ್ದ ಬರಗೂರು ರಾಮಚಂದ್ರಪ್ಪ ಯಾರಿಗೆ ಬೇಕಾದರೂ ಅವರು ಹೇಳಬಹುದಿತ್ತು. ಆದರೆ, ನನ್ನೊಬ್ಬನಿಗೆ ಕರೆದಿದ್ದರು. ಆಗ ಮಾತನಾಡಿದ್ದ ಅವರು, 'ರಾಜಕೀಯದಲ್ಲಿ ಸಕಾರಾತ್ಮಕ ಕೊಡುಗೆ ನೀಡುವ ಉದ್ದೇಶ ನನ್ನಲ್ಲಿ ಇದ್ದಿದ್ದರೆ, ಸ್ಪರ್ಧೆಯ ಬಗ್ಗೆ ಯೋಚನೆ ಮಾಡುತ್ತಿದ್ದೆ. ಆದರೆ, ನನ್ನನ್ನು ಅಸ್ತ್ರವನ್ನಾಗಿ ಬಳಸುವ ಉದ್ದೇಶ ಅದರ ಹಿಂದಿತ್ತು. ಗೋಕಾಕ್ ಚಳವಳಿಗೆ ಸೇರಲು ನನ್ನನ್ನು ಕೇಳಿದಾಗ [ 1978 ರ ಚುನಾವಣೆಯ ಐದು ವರ್ಷಗಳ ನಂತರ ಅವರು ಭಾಗವಹಿಸಿದ್ದರು], ನಾನು ಸಂತೋಷದಿಂದಲೇ ಭಾಗವಹಿಸುವ ತೀರ್ಮಾನ ಮಾಡಿದ್ದೆ. ನನ್ನ ಭಾಗವಹಿಸುವಿಕೆ ಅಗತ್ಯವಾಗಿತ್ತು ಮತ್ತು ನಾನು ಸಕಾರಾತ್ಮಕ ಕೊಡುಗೆ ನೀಡಬಲ್ಲೆ ಎಂದನಿಸಿತ್ತು. ಆ ಚುನಾವಣೆಗೆ ನಾನು ಅನಿವಾರ್ಯವಾಗಿರಲಿಲ್ಲ. ಯಾರನ್ನೋ ಸೋಲಿಸಲು ನಾನು ಅಗತ್ಯವಾಗಿತ್ತಷ್ಟೇ, ಹಾಗಿದ್ದಾಗ ನಾನು ಸ್ಪರ್ಧೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದನಿಸಿತ್ತು' ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದರು.
ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ, ಅತಿರೇಕ ಮಾಡ್ಬೇಡಿ; ಅಪ್ಪು ಮಾಲೆ ವಿರುದ್ಧ ಸಿಡಿದ್ದೆದ ಒಳ್ಳೆ ಹುಡುಗ ಪ್ರಥಮ್
ತಮ್ಮ ವೃತ್ತಿಜೀವನದುದ್ದಕ್ಕೂ ಡಾ. ರಾಜ್‌ಕುಮಾರ್ ಅವರನ್ನು ರಾಜಕೀಯದಿಂದ ದೂರವಿದ್ದರು ಅವರ ಈ ಗುಣವು ಅವರನ್ನು ಸಿನಿಮಾ ನಟರ ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡಿತು. ಅವರು ಚಲನಚಿತ್ರ ತಾರೆಯಾಗಿ ತಮ್ಮ ಜನಪ್ರಿಯತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ.70 ಮತ್ತು 80 ರ ದಶಕದಲ್ಲಿ ಚುನಾವಣೆಗೆ ನಿಲ್ಲುವ ಆಫರ್ ಬಂದಾಗ ಡಾ ರಾಜ್‌ಕುಮಾರ್ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು ಎಂಬುದು ಗಮನಿಸಬೇಕಾದ ಸಂಗತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ