* ಕೈಗಾರಿಕಾ ಆದಾಲತ್‌ನಲ್ಲಿ ಸಚಿವ ನಿರಾಣಿ ಮಹತ್ವದ ಘೋಷಣೆ
* ವಿಳಂಬ ತಪ್ಪಿಸಲು ಇಲಾಖೆಯಿಂದ ದಿಟ್ಟ ಕ್ರಮ
* ಕೈಗಾರಿಕಾ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಿದ 10 ರಿಂದ 15 ದಿನದೊಳಗೆ ಸೇಲ್‌ಡೀಡ್
ಬೆಂಗಳೂರು, (ಅ.12): ಕೈಗಾರಿಕಾ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಿದ 10 ರಿಂದ 15 ದಿನದೊಳಗೆ ಸೇಲ್‌ಡೀಡ್ ( Sale Deed ) ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ (Murugesh Nirani) ಘೋಷಣೆ ಮಾಡಿದರು.
ಇಂದು (ಅ.12) ಬೆಂಗಳೂರಿನ ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (Industrial department) ವತಿಯಿಂದ ನಡೆದ' ಕೈಗಾರಿಕಾ ಆದಾಲತ್ ' ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದರು.
undefined
ಆಭರಣ ವಲಯದಲ್ಲಿ ಬಂಡವಾಳ ಹೂಡುವವರಿಗೆ ರಿಯಾಯ್ತಿ ಘೋಷಿಸಿದ ಸಚಿವ ನಿರಾಣಿ
ಈ ಹಿಂದೆ ಕೈಗಾರಿಕಾ ಯೋಜನೆಗಳು ಪೂರ್ಣಗೊಳಿಸಿದರೂ ವರ್ಷಗಟ್ಟಲೆ ಸೇಲ್‌ಡೀಡ್ ನೀಡದೆ ವಿಳಂಬ ಮಾಡುತ್ತಿದ್ದ ಕಾರಣ, ಯೋಜನೆಗಳು ಅನುಷ್ಠಾನವಾಗಲು ತಡವಾಗುತ್ತಿತ್ತು. ಇದನ್ನು ತಪ್ಪಿಸಲು ಇನ್ನು ಮುಂದೆ ಶೀಘ್ರದಲ್ಲಿ ನೀಡಲು ಚಿಂತನೆ ನಡೆಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಕೈಗಾರಿಕೋದ್ಯಮಿಗಳು ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲಾಗುವುದು. ಸ್ವತಃ ಒಬ್ಬ ಕೈಗಾರಿಕೋದ್ಯಮಿಯಾಗಿರುವ ಕಾರಣ, ಉದ್ಯಮೆದಾರರ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆಶ್ವಾಸನೆ ನೀಡಿದರು. ಉದ್ಯಮಿದಾರರ ಸಮುದಾಯವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಭಯ ಮತ್ತು ಆತಂಕಗಳನ್ನು ನಿವಾರಿಸಿ, ಕೈಗಾರಿಕೆಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. 'ಉದ್ಯಮಸ್ನೇಹಿ ಕರ್ನಾಟಕ' ನಮ್ಮ ಮುಂದಿನ ಗುರಿ ಎಂದರು.
"ವಿದ್ಯುತ್, ನೀರು ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಕೈಗಾರಿಕೋದ್ಯಮಿಗಳು ಎತ್ತಿರುವ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ಪರಿಹರಿಸುತ್ತದೆ. ಸುಲಭವಾಗಿ ವ್ಯಾಪಾರ- ವಹಿವಾಟು ನಡೆಸುವಂತೆ ಮಾಡುವುದು, ಹಾಗೂ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಕಾಪಾಡುವುದು ನಮ್ಮ ಕರ್ತವ್ಯ. ಮೂಲಭೂತ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ”ಎಂದು ಭರವಸೆ ಕೊಟ್ಟರು.
ಇದೇ ಸಂದರ್ಭದಲ್ಲಿ ಸಚಿವ ನಿರಾಣಿ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸುವ ಅಗತ್ಯವನ್ನು ಪ್ರಸ್ತಾಪಿಸಿ, ಕೈಗಾರಿಕಾ ಘಟಕಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. "ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ಮತ್ತು ನಿಬಂಧನೆಗಳು ಕಠಿಣವಾಗುತ್ತಿವೆ, ನಮ್ಮ ಕೈಗಾರಿಕೆಗಳಪರಿಸರ ಸ್ನೇಹಿಯಾಗಬೇಕು. ಮಾಲಿನ್ಯವನ್ನು ಕಡಿಮೆ ಮಾಡಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಉದ್ಯಮಿದಾರರಿಗೆ ಕಿವಿಮಾತು ಹೇಳಿದರು.
ಪರಿವರ್ತತ ಭೂಮಿಯನ್ನು ಮೂಲ ದರಗಿಂತ ಶೇ 15 ರಿಂದ 20 ಕ್ಕಿಂತ ದರ ಹೆಚ್ಚಳ ಮಾಡದಂತೆ ನಿಯಮಗಳನ್ನು ಜಾರಿ ಮಾಡಲಾಗುವುದು.ಜೊತೆಗೆ ತೆರಿಗೆ ಮತ್ತು ಗಣಿಗಾರಿಕೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಕೈಗಾರಿಕೋದ್ಯಮಿಗಳು ಮತ್ತು ಉದ್ಯಮ ಸಂಸ್ಥೆಗಳ ಪ್ರತಿಕ್ರಿಯೆಗಾಗಿ ಧನ್ಯವಾದಗಳನ್ನು ಸಲ್ಲಿಸುತ್ತಾ ನಿರಾಣಿ ಅವರು, ಈ ವರೆಗೂ
ಅಧಿಕಾರಿಗಳು 233 ಅರ್ಜಿಗಳನ್ನು ಸ್ವೀಕರಿಸಿದ್ದು ಅದು 29 ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಲೇಖಿಸಿದೆ. ಸಚಿವರ ಪತ್ರಕ್ಕೆ 16 ಕ್ಕೂ ಹೆಚ್ಚು ಕೈಗಾರಿಕಾ ಸಂಘಗಳು ಪ್ರತಿಕ್ರಿಯಿಸಿವೆ ಎಂದು ಹೇಳಿದರು.
‘ಉದ್ಯಮಿಯಾಗು, ಉದ್ಯೋಗ ನೀಡು’ ಮತ್ತು ‘ಕೈಗಾರಿಕಾ ಅದಾಲತ್’ ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಸಚಿವೆ ನಿರಾಣಿ, ಎರಡು ದಿನಗಳ ಕಾರ್ಯಕ್ರಮವನ್ನು ರಾಜ್ಯದ ಇತರ ಭಾಗಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.