ಸಮಾಜಕ್ಕೆ ಹೆಗ್ಗಡೆ ಕಲ್ಪವೃಕ್ಷ : ವರ್ಧಮಾನ ಸಾಗರ

By Web DeskFirst Published Feb 12, 2019, 11:14 AM IST
Highlights

ಶ್ರೀಕ್ಷೇತ್ರ ಧರ್ಮಸ್ಥಳ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಈ ಸಮಾರಂಭದಲ್ಲಿ ಮಾತನಾಡಿದ ಆಚಾರ್ಯ 108 ವರ್ಧಮಾನ ಸಾಗರ ಮುನಿ ಮಹಾರಾಜ್‌ ಧರ್ಮಸ್ಥಳವನ್ನು ಅವಲೋಕಿಸಿದರೆ ಇಲ್ಲಿ ಪ್ರಾಚೀನ ಶಿಕ್ಷಣ ಪದ್ಧತಿಯೂ ಮಿಳಿತವಾಗಿದೆ. ಡಾ.ಹೆಗ್ಗಡೆ ಅವರು ಸಮಾಜಕ್ಕೆ ಕಲ್ಪವೃಕ್ಷವಾಗಿದ್ದಾರೆ ಎಂದರು. 

ಧರ್ಮಸ್ಥಳ :  ಪ್ರಾಚೀನ ಕಾಲದ ಶಿಕ್ಷಣ ಪದ್ಧತಿ ಈಗ ಮರೆಯಾಗಿದೆ. ಆದರೆ, ಆದಿಕಾಲದ ವಿದ್ಯಾದಾನ ಸಮಾಜದ ಪಾಲಿಗೆ ಅತ್ಯುತ್ತಮವಾಗಿತ್ತು ಎಂದು ಆಚಾರ್ಯ 108 ವರ್ಧಮಾನ ಸಾಗರ ಮುನಿ ಮಹಾರಾಜ್‌ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಭಗವಾನ್‌ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಸಲುವಾಗಿ ಧರ್ಮಸ್ಥಳ ಸರ್ವತೋಭದ್ರ ರಾಜಾಂಗಣದಲ್ಲಿ ಸೋಮವಾರ ನಡೆದ ಮಂಗಲ ಪ್ರವಚನದಲ್ಲಿ ಮಾತನಾಡಿದ ಅವರು, ಧರ್ಮಸ್ಥಳವನ್ನು ಅವಲೋಕಿಸಿದರೆ ಇಲ್ಲಿ ಪ್ರಾಚೀನ ಶಿಕ್ಷಣ ಪದ್ಧತಿಯೂ ಮಿಳಿತವಾಗಿದೆ. ಡಾ.ಹೆಗ್ಗಡೆ ಅವರು ಸಮಾಜಕ್ಕೆ ಕಲ್ಪವೃಕ್ಷವಾಗಿದ್ದಾರೆ. 

ತಾಯಿಯ ಮಾತಿಗೆ ಮನ್ನಣೆ ನೀಡಿ ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ಚಾವುಂಡರಾಯ ನಿರ್ಮಿಸಿದಂತೆ, ಧರ್ಮಸ್ಥಳದಲ್ಲಿ ತಾಯಿ ರತ್ನಮ್ಮ ಅವರ ಕೋರಿಕೆಯನ್ನು ಈಡೇರಿಸಿ ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಆದ್ದರಿಂದ ಇಲ್ಲಿ ಬಾಹುಬಲಿ ಹೆಗ್ಗಡೇಶ್ವರ ಬಾಹುಬಲಿಯಾಗಿ ವಿರಾಜಮಾನನಾಗಿದ್ದಾನೆ ಎಂದು ಹೇಳಿದರು.

ಬ್ರಾಹ್ಮಣ ವರ್ಣ ಮೊದಲು:  ಆದಿನಾಥರಿಗಿಂತ ಮೊದಲು ಕ್ಷತ್ರಿಯ ವರ್ಣ ಇತ್ತು. ಈ ಮೂರು ವರ್ಣಗಳಲ್ಲಿ ಬ್ರಾಹ್ಮಣ ವರ್ಣವನ್ನು ಪ್ರಥಮ ಶ್ರೇಣಿಗೆ ತಂದವರು ಆದಿನಾಥರು ಎಂದು ಆಚಾರ್ಯ 105 ಧ್ಯಾನಸಾಗರ ಮುನಿ ಮಹಾರಾಜ್‌ ಹೇಳಿದರು.

ಹಿಂದೆ ವರ್ಣಗಳ ಮಧ್ಯೆ ವಿವಾಹ ಸಂಬಂಧ ಇತ್ತು. ನಂತರ ಜಾತಿ-ಜಾತಿಗಳ ಮಧ್ಯೆ ವಿವಾಹ ಏರ್ಪಟ್ಟಿತು. ಹೀಗಾದರೆ ಯಾವುದೇ ವಿವಾದಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಜಿನಮಣಿ ಮಾತಾಜಿ ಮಾತನಾಡಿ, ಆತ್ಮಕಲ್ಯಾಣ ಮಾಡದಿದ್ದರೆ ಪುನರಪಿ ಜನನ, ಪುನರಪಿ ಮರಣ ಬರುತ್ತದೆ. ಅದನ್ನು ತಡೆಯಲು ವಿರಕ್ತರಾಗಬೇಕು ಎಂದು ಹೇಳಿದರು.

108 ಕ್ಷೇಮಸಾಗರ ಮುನಿ ಮಹಾರಾಜ್‌ ಮಾತನಾಡಿ, ಇಂದ್ರಿಯವನ್ನು ನಿಗ್ರಹಿಸದಿದ್ದರೆ ಆತ್ಮಕ್ಕೆ ದುರ್ಗತಿ ಬರುತ್ತದೆ. ಸಾಮ್ಯಕ್‌ ದರ್ಶನ ಹಾಗೂ ಸಮ್ಯಕ್‌ ಜ್ಞಾನದಿಂದ ಆತ್ಮ ಪರಮಾತ್ಮನ ರೂಪವನ್ನು ಪಡೆಯಬಹುದು ಎಂದರು.

click me!