ಮಣ್ಣು ಉಳಿಸಿ ಅಭಿಯಾನದ ನಡೆಸುತ್ತಿರುವ ಈಶಾ ಫೌಂಡೇಶನ್ ಸದ್ಗುರು ಯೂರೋಪ್, ಮಧ್ಯ ಏಷ್ಯಾದ 27 ರಾಷ್ಟ್ರಗಳು, ಭಾರತದ 9 ರಾಜ್ಯಗಳಲ್ಲಿ 26 ಸಾವಿರ ಕಿ.ಮೀ ಬೈಕ್ ಯಾತ್ರೆ ಪೂರ್ಣಗೊಳಿಸಿ ಶನಿವಾರ ಕರುನಾಡು ಪ್ರವೇಶ ಮಾಡಲಿದ್ದಾರೆ.
ಬೆಂಗಳೂರು (ಜೂ.18): ಮಣ್ಣು ಉಳಿಸಿ ಅಭಿಯಾನದ ನಡೆಸುತ್ತಿರುವ ಈಶಾ ಫೌಂಡೇಶನ್ ಸದ್ಗುರು ಯೂರೋಪ್, ಮಧ್ಯ ಏಷ್ಯಾದ 27 ರಾಷ್ಟ್ರಗಳು, ಭಾರತದ 9 ರಾಜ್ಯಗಳಲ್ಲಿ 26 ಸಾವಿರ ಕಿ.ಮೀ ಬೈಕ್ ಯಾತ್ರೆ ಪೂರ್ಣಗೊಳಿಸಿ ಶನಿವಾರ ಕರುನಾಡು ಪ್ರವೇಶ ಮಾಡಲಿದ್ದಾರೆ. ಶನಿವಾರ ಬೆಳಿಗ್ಗೆ ಚಿಕ್ಕಬಳ್ಳಾಪುರಕ್ಕೆ ಪ್ರವೇಶಿಸಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಸಂಜೆ ವೇಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಿಗ್ಗೆ 11ಕ್ಕೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಮೈಸೂರಿಗೆ ಸದ್ಗುರು ತೆರಳಲಿದ್ದು, ಸಂಜೆ 7.30ಕ್ಕೆ ಮಾನಸ ಗಂಗೋತ್ರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ಮಣ್ಣು ಉಳಿಸಿ ಅಭಿಯಾನದ 100 ದಿನಗಳ ಬೈಕ್ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ.
Save Soil Movement: ಮಣ್ಣು ಉಳಿಸಿ ಅಭಿಯಾನಕ್ಕೆ ಸದ್ಗುರು ಜತೆ ಮಹಾರಾಷ್ಟ್ರ ಒಪ್ಪಂದ
ಒಂಟಿ ಪ್ರಯಾಣ: ಮಾರ್ಚ್ 21 ರಂದು ಬೈಕ್‌ಯಾತ್ರೆ ಆರಂಭಿಸಿದ ಸದ್ಗುರು ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಾದ್ಯಂತ 27 ದೇಶಗಳಿಗೆ ಭೇಟಿ ನೀಡಿದ್ದಾರೆ. ಮೇ 29 ರಂದು ಗುಜರಾತ್‌ನ ಜಾಮ್‌ಕ್ಕೆ ಆಗಮಿಸಿ ಭಾರತ ಪ್ರವೇಶಿಸಿದರು. ಬಳಿಕ ರಾಜಸ್ಥಾನ, ಹರಿಯಾಣ, ನವದೆಹಲಿ, ಉತ್ತರಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ 9 ರಾಜ್ಯಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
74 ದೇಶ ಮಣ್ಣು ಉಳಿಸಲು ಒಪ್ಪಿಗೆ: ಇಲ್ಲಿಯವರೆಗೆ ಮಣ್ಣು ಉಳಿಸಿ ಅಭಿಯಾನವು ಕೋಟ್ಯಾಂತರ ಜನರನ್ನು ತಲುಪಿದ್ದು 74 ದೇಶಗಳು ತಮ್ಮ ದೇಶಗಳಲ್ಲಿ ಮಣ್ಣನ್ನು ಉಳಿಸಲು ಒಪ್ಪಿವೆ. ಸಾರ್ವಜನಿಕರ ಮನಸ್ಸಿನಲ್ಲಿ ಇಲ್ಲದ ಒಂದು ವಿಷಯಕ್ಕಾಗಿ, ಸದ್ಗುರುಗಳ 27 ದೇಶಗಳ ಪ್ರಯಾಣದ ಪ್ರಾರಂಭದಿಂದ ಇಲ್ಲಿಯವರೆಗೆ 300 ಕೋಟಿ ಜನರು ಮಣ್ಣಿನ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಸುಮಾರು 15 ಲಕ್ಷ ಮಕ್ಕಳು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದೇಶದ ಮಣ್ಣನ್ನು ಉಳಿಸುವ ಮೂಲಕ ತಮ್ಮ ಭವಿಷ್ಯವನ್ನು ಉಳಿಸುವಂತೆ ಕೋರಿದ್ದಾರೆ.
ಆಂಧ್ರ ಸರ್ಕಾರ ಬೆಂಬಲ: ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಮಣ್ಣು ಉಳಿಸಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಸದ್ಗುರು, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿನ ಸರ್ಕಾರಗಳು ಯಾವುದೇ ಕಾರ್ಯನೀತಿ ಜಾರಿಗೊಳಿಸಲು ಜನ ದನಿ ಮುಖ್ಯವಾಗುತ್ತದೆ. ಮಣ್ಣಿನ ಸಂರಕ್ಷಣೆ ಕಾನೂನು ಜಾರಿಯಾಗುವವರೆಗೂ ಸಾರ್ವಜನಿಕರು ದನಿಯನ್ನು ಎತ್ತಬೇಕು. ಈ ನಿಟ್ಟಿನಲ್ಲಿ ಇಡೀ ಪ್ರಪಂಚವೇ ಮಣ್ಣಿನ ಬಗ್ಗೆ ಮಾತನಾಡಬೇಕು. ಮಣ್ಣು ಪ್ರಪಂಚದ ಜನರ ಸಂಭಾಷಣೆಯಾಗಬೇಕು ಎಂದರು.
Save Soil: ಮಾನವನ ಸಂತೋಷದಿಂದ ಮಣ್ಣಿನ ಅವನತಿ: ಸದ್ಗುರು
ಆಂಧ್ರಪ್ರದೇಶದ ಕೃಷಿ ಸಚಿವ ಕಾಕಣಿ ಗೋವರ್ಧನ ರೆಡ್ಡಿ ಮಾತನಾಡಿ, ಮಣ್ಣು ಉಳಿಸಿ ಸಂದೇಶವನ್ನು ಕೇವಲ ಕೇಳಿಸಿಕೊಳ್ಳದೇ, ಅದನ್ನು ಎಲ್ಲ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಆಂಧ್ರಪ್ರದೇಶ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್, ಸಂಸದ ಅಬ್ದುಲ್ ಹಫೀಜ್ ಖಾನ್, ತಾಡಿಕೊಂಡ ಶಾಸಕ ಡಾ. ವುಂಡವಳ್ಳಿ ಶ್ರೀದೇವಿ, ಮಂತ್ರಾಲಯ ಶಾಸಕ ವೈ.ಬಾಲನಾಗಿ ರೆಡ್ಡಿ, ಟಿಡಿಪಿ ನಾಯಕ ರಾಮ್ ಗೋಪಾಲ್ ರೆಡ್ಡಿ, ಕರ್ನೂಲ್ ಮೇಯರ್ ಬಿ.ವೈ. ರಾಮಯ್ಯ ಮತ್ತಿತರ ಉಪಸ್ಥಿತರಿದ್ದರು.