
ಬಳ್ಳಾರಿ: ಕೇರಳದ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇವಾಲಯ ಶಬರಿಮಲೆಯಲ್ಲಿ ನಡೆದಿರುವ ಚಿನ್ನ ನಾಪತ್ತೆ ಪ್ರಕರಣ ಇದೀಗ ಬಳ್ಳಾರಿಗೂ ತಲುಪಿದೆ. ಕೇರಳದ ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ಬಳ್ಳಾರಿಗೆ ಆಗಮಿಸಿ ರೊದ್ದಂ ಜ್ಯೂವೆಲರಿ ಅಂಗಡಿ ಹಾಗೂ ಅದರ ಮಾಲೀಕ ಗೋವರ್ಧನ ಅವರ ಮನೆ ಮೇಲೆ ದಾಳಿ ಮಾಡಿ ತಿವ್ರ ಶೋಧ ನಡೆಸಿತು.
ಮಾಹಿತಿಯ ಪ್ರಕಾರ, 2019ರಲ್ಲಿ ಶಬರಿಮಲೆ ದೇವಾಲಯದ ಹೊರಗಿನ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಮರುಲೇಪನ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸುಮಾರು ನಾಲ್ಕೂವರೆ ಕಿಲೋ ಚಿನ್ನದ ಕವಚಗಳನ್ನು ಮರುಲೇಪನಕ್ಕಾಗಿ ತೆಗೆದುಕೊಂಡು ಹೋದಾಗ ಅವು ನಾಪತ್ತೆಯಾಗಿದ್ದವು. ದೇವಾಲಯದ ಈ ಅಮೂಲ್ಯ ಬಂಗಾರದ ಕವಚಗಳು ಮಾಯವಾದ ಹಿನ್ನೆಲೆ ಕೇರಳ ಸರ್ಕಾರವು ಎಸ್ಐಟಿ ತಂಡ ರಚಿಸಿ ತನಿಖೆ ಆರಂಭಿಸಿತ್ತು.
ಈ ಪ್ರಕ್ರಿಯೆಯಲ್ಲಿ ಬಳ್ಳಾರಿ ಮೂಲದ ರೊದ್ದಂ ಜ್ಯೂವೆಲರಿ ಮಾಲೀಕ ಗೋವರ್ಧನ ಅವರ ಹೆಸರು ಮುನ್ನಲೆಗೆ ಬಂದಿತ್ತು, 2019 ರಲ್ಲಿ ಚಿನ್ನದ ಮರು ಲೇಪನಕ್ಕಾಗಿ ಕವಚಗಳನ್ನು ತೆಗೆದುಕೊಂಡಾಗ ಈ ಘಟನೆ ನಡೆದಿತ್ತು. ಆದ್ರೆ ಬಳ್ಳಾರಿ ಮೂಲದ ಗೋವರ್ಧನ ಚಿನ್ನದ ಲೇಪಿತ ದ್ವಾರಬಾಗಿಲು ನಿರ್ಮಾಣ ಮಾಡಿದ್ರು. ಅರ್ಚಕ ಉನ್ನಿಕೃಷ್ಣನ್ ಸೂಚನೆ ಮೇರೆಗೆ ಚಿನ್ನದ ಲೇಪಿತ ಡೋರ್ ಮಾಡಿದ್ರು. ಡೋರ್ ಮಾಡೋದಕ್ಕೂ ಮುನ್ನ ಇದ್ದ ಬಂಗಾರದ ದ್ವಾರ ಪಾಲಕ ನಾಲ್ಕೂವರೆ ಕೆಜಿ ಚಿನ್ನ ನಾಪತ್ತೆಯಾಗಿದೆ. ದ್ವಾರಪಾಲಕರ ಚಿನ್ನಕ್ಕೂ ತಾವು ಮಾಡಿದ ಚಿನ್ನದ ಡೋರ್ ಗೂ ಸಂಬಂಧ ಇಲ್ಲ ಎಂಬುದು ಗೋವರ್ಧನ ಹೇಳಿಕೆ. ತಾನು ಅಯ್ಯಪ್ಪ ಸ್ವಾಮಿ ಭಕ್ತ ಮೂವತ್ತೈದು ಲಕ್ಷ ವೆಚ್ಚದಲ್ಲಿ ನಾನೇ ನಿರ್ಮಾಣ ಮಾಡಿದ್ದೇನೆ. ಎಸ್ಐಟಿ ಅಧಿಕಾರಿಗಳು ಬಂದಿದ್ದರು. ವಿಚಾರಣೆ ಮಾಡಿದ್ದಾರೆ. ಯಾವಾಗ ಕರೆದರು ಹೋಗ್ತೇನೆ. ನಾಪತ್ತೆಯಾದ ಚಿನ್ನ ಮತ್ತು ನಾನು ಮಾಡಿದ ಬಾಗಿಲಿನ ಚಿನ್ನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಕೇರಳದ ಎಸ್ಐಟಿ ಅಧಿಕಾರಿಗಳ ನಾಲ್ಕು ಜನರ ತಂಡವು ಗೋವರ್ಧನ ಅವರ ರೊದ್ದಂ ಜ್ಯೂವೆಲರಿ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದೆ. ಶೋಧದ ವೇಳೆ ಕೆಲವು ಚಿನ್ನದ ನಗದು ವಸ್ತುಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದ್ದು, ಗೋವರ್ಧನ ಅವರನ್ನು ಮರು ವಿಚಾರಣೆಗೆ ಕರೆದೊಯ್ಯುವ ಸಾಧ್ಯತೆ ಇದೆ.
ಇನ್ನೊಂದು ಕಡೆ ಈ ಪ್ರಕರಣದ ಪ್ರಮುಖ ಆರೋಪಿ ಪೊನ್ನಿ ಉನ್ನಿಕೃಷ್ಣನ್, ಅವರು ದೇವಾಲಯದ ಅರ್ಚಕರಲ್ಲಿ ಒಬ್ಬರಾಗಿದ್ದು, ದ್ವಾರಪಾಲಕ ವಿಗ್ರಹಗಳ ಚಿನ್ನದ ಕವಚದಿಂದ ಸುಮಾರು 475 ಗ್ರಾಂ ಚಿನ್ನ ಕದ್ದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಚಿನ್ನವನ್ನು ಬಳ್ಳಾರಿಯ ಗೋವರ್ಧನ ಅವರಿಗೆ ಮಾರಾಟ ಮಾಡಿದ್ದಾರೆಂಬ ಶಂಕೆ ಹಿನ್ನೆಲೆಯಲ್ಲಿ ಕೇರಳ ಎಸ್ಐಟಿ ಅವರು ಉನ್ನಿಕೃಷ್ಣನ್ ಅವರ ಬೆಂಗಳೂರು ಶ್ರೀರಾಮಪುರದಲ್ಲಿರುವ ನಿವಾಸದಲ್ಲಿಯೂ ಶೋಧ ನಡೆಸಿದೆ.
ಬೆಳಗ್ಗಿನಿಂದಲೇ ಎಸ್ಐಟಿ ಅಧಿಕಾರಿಗಳು ಶೋಧಕಾರ್ಯ ಕೈಗೊಂಡಿದ್ದು, ಉನ್ನಿಕೃಷ್ಣನ್ ಅವರ ಪರಿಚಿತರನ್ನು ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಕೇರಳ ಪೊಲೀಸರ ಪ್ರಕಾರ, ಈ ಪ್ರಕರಣದಲ್ಲಿ ಹಲವು ರಾಜ್ಯಗಳ ನಡುವಿನ ಸಂಪರ್ಕಗಳು ಬೆಳಕಿಗೆ ಬರುತ್ತಿದ್ದು, ತನಿಖೆ ಇನ್ನಷ್ಟು ವ್ಯಾಪಕಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಎಸ್ಐಟಿ ತಂಡವು ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಎಲ್ಲಾ ಆರ್ಥಿಕ ವ್ಯವಹಾರಗಳ ಪಟ್ಟಿ ಸಾದರಪಡಿಸುವ ಕೆಲಸದಲ್ಲಿದೆ. ಬಳ್ಳಾರಿ ಮತ್ತು ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಶೋಧಕಾರ್ಯ ಮುಂದುವರಿಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ