
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ಕಂಡುಬರುತ್ತಿದ್ದು, ಪ್ರಕರಣದ 14ನೇ ಆರೋಪಿ (A-14) ಪ್ರದೋಷ್ ತಾನು ‘ಮಾಫಿ ಸಾಕ್ಷಿ’ (ಅಪ್ರೂವರ್) ಆಗಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಭಾರಿ ಸಂಚಲನ ಮೂಡಿಸಿದೆ. ಪ್ರದೋಶ್ ಮಾಫಿ ಸಾಕ್ಷಿಯಾದರೆ ನಟ ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಲಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಪ್ರಕರಣಕ್ಕೆ ಬೇರೆಯದೇ ಆಯಾಮ ನೀಡಿದೆ. ಪ್ರದೋಶ್ ಮಾಫಿ ಸಾಕ್ಷಿಯಾಗುವುದರಿಂದ ನಟ ದರ್ಶನ್‌ಗೆ ಯಾವುದೇ ತೊಂದರೆಯಾಗುವುದಿಲ್ಲ, ಬದಲಿಗೆ ಅನುಕೂಲವೇ ಆಗಲಿದೆ ಎಂದು ಸ್ನೇಹಮಯಿ ಕೃಷ್ಣ ಬರೆದುಕೊಂಡಿದ್ದಾರೆ
"ರೇಣುಕಾಸ್ವಾಮಿ ಹತ್ಯೆಯ ನಂತರ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದು ಬಿಸಾಡಲು, ಬೇರೆಯವರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಇದೇ ಪ್ರದೋಶ್ ನೊಂದಿಗೆ ಶಾಮೀಲಾಗಿ ಸಂಚು ರೂಪಿಸಲಾಗಿತ್ತು. ಈ ಸಂಚಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ (PSI) ವಿನಯ್ ಹಾಗೂ ಪೊಲೀಸ್ ನಿರೀಕ್ಷಕ (PI) ಗಿರೀಶ್ ನಾಯಕ್ ಸಹಕರಿಸಿದ್ದರು. ಇದಕ್ಕಾಗಿ ಪ್ರದೋಶ್‌ನಿಂದ ಪಿಎಸ್‌ಐ ವಿನಯ್ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಉಪ ಪೊಲೀಸ್ ನಿರೀಕ್ಷಕ ತಲೆಮರೆಸಿಕೊಂಡಿದ್ದರು" ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಮುಂದುವರಿದು ತನಿಖಾ ತಂಡದ ವಿರುದ್ಧವೇ ನೇರ ಆರೋಪ ಮಾಡಿರುವ ಅವರು, "ಈ ಪೊಲೀಸ್ ಅಧಿಕಾರಿಗಳನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡದೆ, ಅವರನ್ನು ರಕ್ಷಿಸುವ ಸಲುವಾಗಿ ತನಿಖಾಧಿಕಾರಿಗಳು ಸತ್ಯಾಂಶಗಳನ್ನು ಮುಚ್ಚಿಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ (ACP) ಚಂದನ್ ಕುಮಾರ್ ಅವರು ನ್ಯಾಯಾಲಯಕ್ಕೆ ಸುಳ್ಳು ದೋಷಾರೋಪಣ ಪತ್ರವನ್ನು (Charge Sheet) ಸಲ್ಲಿಸಿದ್ದಾರೆ. ಈಗ ಪ್ರದೋಶ್ ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ನಿಜ ಹೇಳಿದರೆ, ಈ ಎಲ್ಲಾ ಸತ್ಯಗಳು ಹೊರಬರಲಿವೆ" ಎಂದಿದ್ದಾರೆ.
ಪ್ರದೋಶ್ ನೀಡುವ ಮಾಫಿ ಸಾಕ್ಷಿ ಹೇಳಿಕೆಯಿಂದ ಇಡೀ ಪ್ರಕರಣವೇ ಹೊಸ ತಿರುವು ಪಡೆದುಕೊಳ್ಳಲಿದ್ದು, ಶವ ವಿಲೇವಾರಿಗೆ ಸಂಚು ರೂಪಿಸಿದ್ದ ಹಾಗೂ ಲಂಚ ಪಡೆದಿದ್ದ ಮೂವರು ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮಾಫಿ ಸಾಕ್ಷಿಯಾಗಲು ಪ್ರದೋಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅರ್ಜಿಯ ಕುರಿತು ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಹಾಗೂ ತನಿಖಾ ಸಂಸ್ಥೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ