
ಬೆಳಗಾವಿ (ಜು.10): ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಸಭೆಯಲ್ಲಿ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಸೇರಿ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.
ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್‌ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಹ ಸರಕಾರ್ಯವಾಹರಾದ ಡಾ। ಕೃಷ್ಣಗೋಪಾಲ, ಸಿ.ಆರ್.ಮುಕುಂದ, ಅರುಣಕುಮಾರ, ರಾಮದತ್ತ, ಆಲೋಕ ಕುಮಾರ ಹಾಗೂ ಅತುಲ್ ಲಿಮಯೆ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದಾರೆ.
ಅಲ್ಲದೆ 11 ಕ್ಷೇತ್ರಗಳು, 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಗುರುವಾರ ಸಂತ ಮೀರಾ ಶಾಲೆಯಲ್ಲಿ ಸಭೆಯ ಪೂರ್ವಸಿದ್ಧತಾ ಸಭೆಗಳು ನಡೆದವು. ವಸತಿ, ಭದ್ರತೆ ಹಾಗೂ ಸಭೆಯ ಸಂಘಟನಾ ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಲಾಯಿತು. ಕಳೆದ ಮಾರ್ಚ್‌ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಮುಂದುವರಿದ ಭಾಗವಾಗಿ ಈ ಸಭೆ ನಡೆಯುತ್ತಿದೆ. ಸಂಘಟನಾ ವಿಸ್ತರಣೆ, ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳು, ತರಬೇತಿ ವರ್ಗಗಳ ಪರಿಶೀಲನೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಲಾಗಿದೆ.
ರಾಮಮಂದಿರ ಮತ್ತು ಬದರಿನಾಥ ದೇವಸ್ಥಾನಗಳ ಹುಂಡಿ ಸಂಬಂಧಿತ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಕೆಲವು ಮೂಲಗಳಿಂದ ವ್ಯಕ್ತವಾಗಿದ್ದರೂ, ಈ ಕುರಿತು ಸಂಘದಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ