ವಿಜಯಪುರ ನಗರಕ್ಕೆ ₹52 ಕೋಟಿ ವೆಚ್ಚದಲ್ಲಿ ಹೊಸ ಕೊಳವೆ ಮಾರ್ಗ; ಎಂ.ಬಿ. ಪಾಟೀಲ

By Sathish Kumar KH  |  First Published Nov 5, 2024, 5:21 PM IST

ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಶಿಥಿಲ ಕೊಳವೆ ಮಾರ್ಗವನ್ನು ₹52 ಕೋಟಿ ವೆಚ್ಚದಲ್ಲಿ ಬದಲಾಯಿಸಲಾಗುವುದು. 43 ಕಿ.ಮೀ ದೂರದ ಕೊಲ್ಹಾರದಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, 10.8 ಕಿ.ಮೀ ಉದ್ದದ ಪಿ.ಎಸ್‌.ಸಿ ಕೊಳವೆ ಮಾರ್ಗ ಹಾಳಾಗಿದೆ.


ಬೆಂಗಳೂರು (ಅ.05): ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ₹52 ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್‌. ಪೈಪುಗಳನ್ನು ಅಳವಡಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ  ತಿಳಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. 43 ಕಿ.ಮೀ ದೂರದ ಕೊಲ್ಹಾರದಿಂದ ವಿಜಯಪುರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು 10.8 ಕಿ.ಮೀ ಉದ್ದದ ಪಿ.ಎಸ್‌.ಸಿ ಕೊಳವೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಇದರಿಂದ ನೀರಿನ ಸೋರಿಕೆ ವಿಪರೀತ ಹೆಚ್ಚಾಗಿದೆ. ಇದನ್ನು ಬದಲಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ವಿವಿಧ ಕಾರಣಗಳಿಂದಾಗಿ ಆಗಿರಲಿಲ್ಲ. ಆದರೆ, ಈಗ ಅದಕ್ಕೆ ಅಂತಿಮ ಮುದ್ರೆ ಒತ್ತಿದ್ದು, ಹಣ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅವರು ವಿವರಿಸಿದರು.

Tap to resize

Latest Videos

undefined

ಆರಂಭದಲ್ಲಿ ಈ ಕೊಳವೆ ಮಾರ್ಗ ಬದಲಿಸಲು ₹32 ಕೋಟಿ ವೆಚ್ಚಕ್ಕೆ ಅಂದಾಜು ಮಾಡಲಾಗಿತ್ತು. ಕಾಮಗಾರಿ ವಿಳಂಬವಾದ ಕಾರಣ ಅಂದಾಜು ವೆಚ್ಚ ಹೆಚ್ಚಾಗಿ ₹52 ಕೋಟಿಗೆ ಏರಿದೆ. ಈಗ ಪರಿಷ್ಕೃತ ಅಂದಾಜು ವೆಚ್ಚಕ್ಕೂ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದರ ಜತೆಗೆ ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆಯ ಭಾಗವಾಗಿ ಆಲಮಟ್ಟಿ ಹಿನ್ನೀರಿನ ರಂಭಾಪುರಿ ಬಳಿ ಜಾಕ್ವೆಲ್ ನಿರ್ಮಾಣ ಅಗತ್ಯವಿದೆ. ಇದು 111 ದಶಲಕ್ಷ ಲೀಟರ್ ನೀರು ಶುದ್ಧೀಕರಣ ಸಾಮರ್ಥ್ಯ ಹೊಂದಿರಲಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು 1.36 ಕೋಟಿ ರೂಪಾಯಿ ಒದಗಿಸಲಾಗುವುದು. ತಕ್ಷಣವೇ ಈ ಕಾಮಗಾರಿಯನ್ನೂ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: ಅಬಕಾರಿ ಇಲಾಖೆ ಭ್ರಷ್ಟಾಚಾರದ ಮೂಲ ಪುರುಷ ಸಚಿವ ತಿಮ್ಮಾಪುರ್; ಅಧ್ಯಕ್ಷ ಗುರುಸ್ವಾಮಿ!

ವಿಜಯಪುರ ನಗರದಲ್ಲಿ ಕೇಂದ್ರ ಸರಕಾರದ ಅಮೃತ್ 2.0 ಯೋಜನೆಯ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದಿರುವ ಜೈನ್ ಇರಿಗೇಶನ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಸಂಸ್ಥೆಯು ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಒಪ್ಪಿಕೊಂಡಿದೆ. ಬಳಿಕ, ಬಾಕಿ ಇರುವ ₹17 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಕಂಪನಿಯ ಪ್ರತಿನಿಧಿಗಳಿಗೆ ಸಭೆಯಲ್ಲಿ ತಿಳಿಸಿದರು.

ಬಬಲೇಶ್ವರ, ತಿಕೋಟಾ ಪಟ್ಟಣಗಳಿಗೆ 135 ಎಲ್‌ಪಿಸಿಡಿ ನೀರು: ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನತೆಗೆ ಸದ್ಯ 55 ಎಲ್‌ಪಿಸಿಡಿ (ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್) ಕುಡಿಯುವ ನೀರು ಪೂರೈಸುತ್ತಿದ್ದು, ಅದನ್ನು 135 ಎಲ್‌ಪಿಸಿಡಿ ಗೆ ಹೆಚ್ಚಿಸುವ ಸಂಬಂಧ ಯೋಜನೆ ರೂಪಿಸಲಾಗುವುದು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜತೆ ಸೇರಿ ಇದನ್ನು ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಬೆಂಗಳೂರು ಉದ್ಯಮಿ ದಿವಾಳಿ: 70 ಲಾರಿಗಳ ಮಾಲೀಕ ಹುಡುಗೀರ ಶೋಕಿಯಿಂದಾದ ಭಿಕ್ಷುಕ!

ವಿಜಯಪುರ ಜಿಲ್ಲೆಯ ಚಡಚಣ, ಆಲಮೇಲ, ಮುದ್ದೇಬಿಹಾಳ, ನಾಲತವಾಡ, ಸಿಂದಗಿ ಮತ್ತು ತಾಳಿಕೋಟೆಗಳಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಇದರ ಜೊತೆಗೆ ಮುದ್ದೇಬಿಹಾಳ (₹17.45 ಕೋಟಿ), ಸಿಂದಗಿ (₹26.53 ಕೋಟಿ) ಬಸವನಬಾಗೇವಾಡಿ (₹14.58 ಕೋಟಿ) ಪಟ್ಟಣಗಳ ನೀರು ಸರಬರಾಜು ಜಾಲ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ತ್ವರಿತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

click me!