
ಬೆಂಗಳೂರು(ಆ.30): ನೈಋುತ್ಯ ರೈಲ್ವೆಯು ಬೆಂಗಳೂರು ಸಮೀಪದ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾಳೆಗೆ ಆರಂಭಿಸಿರುವ ‘ರೋಲ್ ಆನ್ ರೋಲ್ ಆಫ್’ (ರೋ ರೋ) ಎಂಬ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳ ಸಾಗಣೆಯ ರೈಲು ಸೇವೆಯ ಪ್ರಾಯೋಗಿಕ ಸಂಚಾರಕ್ಕೆ ಇಂದು(ಭಾನುವಾರ) ಚಾಲನೆ ನೀಡಲಾಗುತ್ತಿದೆ. ಈ ಮೂಲಕ ನೈಋುತ್ಯ ರೈಲ್ವೆ ವಲಯ ಪ್ರಥಮ ಬಾರಿಗೆ ಈ ಸೇವೆ ಆರಂಭಿಸುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳಗ್ಗೆ 9.15ಕ್ಕೆ ವೀಡಿಯೋ ಲಿಂಕ್ ಮೂಲಕ ಈ ನೂತನ ಸರಕು ಸಾಗಣೆ ಸೇವೆಯ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಸಿ.ಅಂಗಡಿ, ಕಂದಾಯ ಸಚಿವ ಆರ್.ಆಶೋಕ್, ಸಂಸದ ಬಿ.ಎನ್.ಬಚ್ಚೇಗೌಡ, ರಾಜ್ಯಸಭಾ ಸದಸ್ಯರಾದ ಎಂ.ರಾಜೀವ್ ಚಂದ್ರಶೇಖರ್, ಕೆ.ಸಿ.ರಾಮಮೂರ್ತಿ, ಜಿ.ಸಿ.ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.
ಬೆಳಗಾವಿಯಿಂದ ಅಯೋಧ್ಯೆಗೆ ರೈಲು: ಕೇಂದ್ರ ಸಚಿವ ಅಂಗಡಿ
ಏನಿದು ‘ರೋಲ್ ಆನ್ ರೋಲ್ ಆಫ್’?:
ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ತೆರೆದ ರೈಲಿನ ವ್ಯಾಗನ್‌ಗಳ ಮೇಲೆ ನಿಲುಗಡೆ ಮಾಡಿ ನಿಗದಿತ ಸ್ಥಳಕ್ಕೆ ಸಾಗಿಸುವುದಕ್ಕೆ ‘ರೋಲ್ ಆನ್ ರೋಲ್ ಆಫ್’ ಎಂದು ಹೆಸರಿಡಲಾಗಿದೆ. ನೆಲಮಂಗಲದಿಂದ ಸೊಲ್ಲಾಪುರದ ಬಾಳೆಗೆ (682 ಕಿ.ಮೀ., 17 ತಾಸು ಸಂಚಾರ) ಈ ಸೇವೆ ಆರಂಭಿಸಲಾಗುತ್ತಿದೆ. ಈ ರೈಲು 43 ತೆರೆದ ವ್ಯಾಗನ್ ಹೊಂದಿದ್ದು, 42ಕ್ಕೂ ಅಧಿಕ ಸರಕು ತುಂಬಿದ ಟ್ರಕ್ ಅಥವಾ ಲಾರಿಗಳನ್ನು ಸಾಗಿಸಲಿದೆ. ಈ ಲಾರಿಗಳಲ್ಲಿ ಚಾಲಕ ಹಾಗೂ ಕ್ಲೀನರ್ ಕುಳಿತೇ ಇರುತ್ತಾರೆ. ಸೊಲ್ಲಾಪುರದಿಂದ ಅವರು ಲಾರಿಯನ್ನು ಸಮೀಪದ ಗಮ್ಯ ಸ್ಥಳಕ್ಕೆ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಾರೆ.
ಧರ್ಮಾವರಂ, ಗುಂತಕಲ್, ರಾಯಚೂರು, ವಾಡಿ ಮಾರ್ಗವಾಗಿ ಸೊಲ್ಲಾಪುರದ ಬಾಳೆ ತಲುಪಲಿದೆ. ಅಂದರೆ, ನೈಋುತ್ಯ, ಕೇಂದ್ರ ಹಾಗೂ ದಕ್ಷಿಣ ಮಧ್ಯ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಈ ರೈಲು ಸಂಚಾರದಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಇಂಧನ ಉಳಿತಾಯ, ಎರಡೂ ರಾಜ್ಯಗಳ ಮಧ್ಯೆ ಅಗತ್ಯ ವಸ್ತುಗಳ ತ್ವರಿತ ಸಾಗಣೆ ಸೇರಿದಂತೆ ಹಲವು ರೀತಿಯ ಉಪಯೋಗ ಆಗಲಿದೆ. ಭಾನುವಾರ ನೆಲಮಂಗಲದಿಂದ ಹೊರಡಲಿರುವ ಪ್ರಥಮ ರೈಲಿನಲ್ಲಿ 1,260 ಟನ್ ಕೃಷಿ ಉತ್ಪನ್ನಗಳು, ಕೆಮಿಕಲ್, ಕೈಗಾರಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ