ಸಿಂಧೂರಿ ಕೇಸ್‌: ರೂಪಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್‌

By Kannadaprabha NewsFirst Published Jun 6, 2023, 4:53 AM IST
Highlights

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ 1 ಕೋಟಿ ರು. ಕ್ರಿಮಿನಲ್‌ ಮಾನನಷ್ಟಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹೈಕೋರ್ಚ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಿಂದೆ ಸರಿದಿದ್ದಾರೆ.

ಬೆಂಗಳೂರು (ಜೂ.6) ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ 1 ಕೋಟಿ ರು. ಕ್ರಿಮಿನಲ್‌ ಮಾನನಷ್ಟಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಿಂದೆ ಸರಿದಿದ್ದಾರೆ.

ಈ ಕುರಿತಂತೆ ಡಿ.ರೂಪಾ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಈ ಹಿಂದೆ ತಾವು ವಕೀಲರಾಗಿದ್ದ ಸಂದರ್ಭದಲ್ಲಿ ಬೇರೊಂದು ಪ್ರಕರಣ ಸಂಬಂಧ ರೋಹಿಣಿ ಸಿಂಧೂರಿ(Rohini sindhuri IAS) ಅವರನ್ನು ಪ್ರತಿನಿಧಿಸಿದ್ದೆವು. ಹಾಗಾಗಿ, ತಾವು ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ. ಅರ್ಜಿಯನ್ನು ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ಸೂಕ್ತ ಆದೇಶ ಪ್ರಕಟಿಸಲು ಪ್ರಕರಣದ ಕಡತವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದಿಡಬೇಕು ಎಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದರು.

IAS vs IPS: ಐಪಿಎಸ್‌ ಡಿ ರೂಪಾ ವಿರುದ್ಧದ ನಿರ್ಬಂಧಕಾಜ್ಞೆ ತೆರವು: ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ

ಡಿ.ರೂಪಾ ಮೌದ್ಗಿಲ್‌(D. Rupa Moudgil IAS) ಅವರು 2023ರ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪ ಅವರು ಈ ಕೃತ್ಯ ಎಸಗಿರುವುದರಿಂದ ತಮ್ಮ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ಮಾ.3ರಂದು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಅಲ್ಲದೆ, ಮಾನಹಾನಿ ಮಾಡಿ ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ರೂಪಾ ಅವರಿಂದ ಒಂದು ಕೋಟಿ ರುಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. ಅದನ್ನು ಪರಿಗಣಿಸಿದ್ದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ರೂಪಾ ಅವರ ವಿರುದ್ಧ ಕ್ರಿಮಿನಲ್‌ ಮಾನನಷ್ಟಪ್ರಕರಣ ದಾಖಲಿಸಲು ಆದೇಶಿಸಿತ್ತು.

 

ರೋಹಿಣಿ ಸಿಂಧೂರಿ ಕೇಸ್‌: ಡಿ.ರೂಪಾಗೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಸಮನ್ಸ್‌

ಈ ಪ್ರಕರಣ ರದ್ದುಪಡಿಸುವಂತೆ ಕೋರಿ ರೂಪಾ ಹೈಕೋರ್ಚ್‌ ಮೆಟ್ಟಿಲೇರಿದ್ದಾರೆ. ರೂಪಾ ಪರ ವಕೀಲ ಮಧುಕರ್‌ ದೇಶಪಾಂಡೆ ವಕಾಲತ್ತು ವಹಿಸಿದ್ದಾರೆ.

click me!