42 ವ್ಯಾಗನ್‌ಗಳ ಪೈಕಿ 16 ವ್ಯಾಗನ್ ಖಾಲಿ ಹೀಗಾಗಿ ಭಾನುವಾರ ಸ್ವಲ್ಪ ದೂರ ಸಾಗಿ ವಾಪಸಾಗಿತ್ತು| ಖಾಲಿ ವ್ಯಾಗನ್ ಕಾರಣ 13 ಲಕ್ಷ ಆದಾಯ ಖೋತಾ| ನೆಲಮಂಗಲ ರೈಲು ನಿಲ್ದಾಣದಿಂದ ಬಾಲೆಗೆ ರೈಲು ನಿಲ್ದಾಣಕ್ಕೆ ಪ್ರಯಾಣ|
ಬೆಂಗಳೂರು(ಸೆ.02): ಕಳೆದ ಭಾನುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ನಿಶಾನೆ ತೋರಿಸಿದ್ದ ‘ರೋಲ್ ಆನ್ ರೋಲ್ ಆಫ್’ (ರೋ ರೋ) ರೈಲು 2 ದಿನ ತಡವಾಗಿ ಮಂಗಳವಾರ ಪ್ರಯಾಣ ಸೊಲ್ಲಾಪುರದ ಬಾಳೆ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ.
ನೆಲಮಂಗಲ ನಿಲ್ದಾಣದಿಂದ ಸೊಲ್ಲಾಪುರಕ್ಕೆ ಭಾನುವಾರವೇ ರೈಲು ಸಂಚಾರ ಆರಂಭಿಸಿತ್ತು. ಆದರೆ 42 ವ್ಯಾಗನ್‌ಗಳ ಪೈಕಿ 16 ಖಾಲಿ ಇದ್ದವು. 26 ಸರಕು ತುಂಬಿದ ಟ್ರಕ್ ಮಾತ್ರ ತುಂಬಿಕೊಂಡು ಬಾಳೆಗೆ ಅಂದು ಹೊರಟಿತ್ತು. ಸರಕು ತುಂಬಿದ ಟ್ರಕ್‌ಗಳ ಕೊರತೆ ಹಾಗೂ ನಾನಾ ಕಾರಣಗಳಿಂದ ಚಿಕ್ಕಬಾಣಾವರದ ವರೆಗೆ ಸಂಚರಿಸಿ, ನೆಲಮಂಗಲಕ್ಕೆ ವಾಪಸಾಗಿತ್ತು. ಇದೀಗ ಮಂಗಳವಾರ ಮಧ್ಯಾಹ್ನ 1.30ಕ್ಕೆ ನೆಲಮಂಗಲ ರೈಲು ನಿಲ್ದಾಣದಿಂದ ಬಾಲೆಗೆ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಿತು. ಆದರೂ ಆ 16 ವ್ಯಾಗನ್‌ಗಳು ಖಾಲಿಯಾಗೇ ಉಳಿದವು. ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಈ ರೈಲು ಬಾಳೆ ರೈಲು ನಿಲ್ದಾಣ ತಲುಪಲಿದೆ.
ಬೆಂಗ್ಳೂರಿಂದ ಸೊಲ್ಲಾಪುರಕ್ಕೆ ಇಂದಿನಿಂದ ರೋ ರೋ ರೈಲು
ರೋ-ರೋ ರೈಲಿನಲ್ಲಿ ತೆರಳುವ ಒಂದು ಟ್ರಕ್‌ಗೆ ಗರಿಷ್ಠ 30 ಟನ್ ಸರಕು ತುಂಬಲು ಅವಕಾಶವಿದೆ. ಪ್ರತಿ ಟನ್ ಸರಕಿ 2,700 ರು. ದರ ನಿಗದಿ ಮಾಡಲಾಗಿದೆ. ಅದರಂತೆ ರೈಲಿನಲ್ಲಿ ಅಳವಡಿಸಲಾಗಿರುವ 42 ಬೋಗಿಗಳಿಂದ ಒಟ್ಟು 34.02 ಲಕ್ಷ ರು. ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಈ ರೈಲಿನ ಪ್ರಥಮ ಸಂಚಾರದಲ್ಲೇ 42 ವ್ಯಾಗನ್‌ಗಳ ಪೈಕಿ 16 ವ್ಯಾಗನ್‌ಗಳು ಖಾಲಿ ತೆರಳಿದ ಪರಿಣಾಮ ಇಲಾಖೆಗೆ 12.96 ಲಕ್ಷ ರು. ಆದಾಯ ಖೋತಾವಾಗಿದೆ.