ಬಸ್ ದರ ಏರಿಕೆ ಬೆನ್ನಲ್ಲೇ ಚಿಲ್ಲರೆ ಸಮಸ್ಯೆ, ನಿರ್ವಾಹಕರ-ಪ್ರಯಾಣಿಕರ ಗುದ್ದಾಟ, ಸಮಸ್ಯೆ ಚಿಲ್ಲರೆಯಲ್ಲ!

By Kannadaprabha News  |  First Published Jan 6, 2025, 12:55 PM IST

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ದರ ಏರಿಕೆಯಾದ ಮೊದಲ ದಿನ ಚಿಲ್ಲರೆ ಸಮಸ್ಯೆಯಿಂದಾಗಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಗದ್ದಲ ಉಂಟಾಯಿತು. ಹಲವು ನಿರ್ವಾಹಕರು ಕ್ಯೂಆರ್ ಕೋಡ್ ಮೂಲಕ ಪಾವತಿಸಲು ಪ್ರಯಾಣಿಕರನ್ನು ಕೋರಿದರು, ಆದರೆ ಸ್ಮಾರ್ಟ್‌ಫೋನ್ ಬಳಸದವರಿಗೆ ತೊಂದರೆಯಾಯಿತು.


ಬೆಂಗಳೂರು (ಜ.6): ರಾಜಧಾನಿ ಬೆಂಗಳೂರಿನ ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆಯಾದ ಮೊದಲ ದಿನ ಚಿಲ್ಲರೆ ಸಮಸ್ಯೆಯು ಪ್ರಯಾಣಿಕರು ಮತ್ತು ಬಸ್‌ ನಿರ್ವಾಹಕರ ನಡುವೆ ತೀವ್ರ ಗದ್ದಲ, ಗಲಾಟೆಗೆ ಎಡೆ ಮಾಡಿಕೊಟ್ಟಿತ್ತು. ಬಿಎಂಟಿಸಿ ಬಸ್‌ ಪ್ರಯಾಣ ದರವೂ ಬರೋಬ್ಬರಿ 10 ವರ್ಷದ ಬಳಿಕ ಹೆಚ್ಚಳಗೊಂಡಿದ್ದು, ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ₹1ನಿಂದ ₹6ವರೆಗೆ ದರ ಏರಿಕೆಯಾಗಿದೆ.

ದರ ಏರಿಕೆಯ ಮೊದಲ ದಿನವಾದ ಭಾನುವಾರ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ಹಿಂದಿನ ದರ ಕೊಟ್ಟು ಟಿಕೆಟ್‌ ಪಡೆಯುವುದಕ್ಕೆ ಮುಂದಾದರು. ಈ ವೇಳೆ ಬಸ್‌ ನಿರ್ವಾಹಕರು ಪ್ರತಿಯೊಬ್ಬರಿಗೆ ದರ ಏರಿಕೆ ಬಗ್ಗೆ ಮನದಟ್ಟು ಮಾಡಿ ಹೆಚ್ಚಿನ ಹಣ ಪಡೆದು ಟಿಕೆಟ್‌ ನೀಡಬೇಕಾದ ಸ್ಥಿತಿ ನಿರ್ಮಾಣವಾಯಿತು.

Tap to resize

Latest Videos

ಈ ಹಿಂದೆ ದರ ಏರಿಕೆ ಮಾಡಿದ ವೇಳೆ ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಟಿಕೆಟ್‌ ದರ ರೌಂಡಅಪ್‌ ಮಾಡಿ ಮೊದಲ ಸ್ಟೇಜ್‌ಗೆ ₹5, ಎರಡನೇ ಸ್ಟೇಜ್‌ಗೆ ₹10 ನಿಗದಿ ಪಡಿಸಿತ್ತು.

500 ಆದ್ರೂ ಮಟನ್‌ ಖರೀದಿ ಮಾಡ್ತೀರಿ, ಬಸ್‌ ದರ ಏರಿಕೆ ದೊಡ್ಡದು ಮಾಡ್ತೀರಿ: ಸಚಿವ ಚಲುವರಾಯಸ್ವಾಮಿ

ಇದೀಗ ₹5 ಮುಖ ಬೆಲೆಯ ಟಿಕೆಟ್‌ ದರವನ್ನು ₹6ಕ್ಕೆ ಹಾಗೂ ₹10 ಮುಖ ಬೆಲೆಯ ಟಿಕೆಟ್‌ ಅನ್ನು ₹12, ಹೀಗೆ ಹೆಚ್ಚಳ ಮಾಡಲಾಗಿದೆ. ಈ ರೀತಿ ಹಲವು ಹಂತದ ಟಿಕೆಟ್‌ ದರ ಚಿಲ್ಲರೆ ಸಮಸ್ಯೆಗೆ ದಾರಿ ಮಾಡಿದೆ.

ಚಿಲ್ಲರೆ ನೀಡುವುದಕ್ಕೆ ಸಾಧ್ಯವಾಗದೇ ಕೆಲವು ನಿರ್ವಾಹಕರು ಐದು ಹಾಗೂ ₹10 ಕೊಟ್ಟು ನಾಲ್ಕೈ ದು ಪ್ರಯಾಣಿಕರು ಚಿಲ್ಲರೆ ಹಂಚಿಕೆ ಮಾಡಿಕೊಳ್ಳುವಂತೆ ಸೂಚಿಸಿದ ಪ್ರಸಂಗ ನಡೆದವು. ಕೆಲವು ಪ್ರಯಾಣಿಕರು ನಿರ್ವಾಹಕರ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಮಾಧಾನಗೊಂಡರು. ಮತ್ತೆ ಕೆಲವರು ನಿರ್ವಾಹಕರಿಗೆ ನೀವು ಸರಿಯಾಗಿ ಚಿಲ್ಲರೆ ನೀಡಬೇಕು ಎಂದು ಪಟ್ಟು ಹಿಡಿದು ನಿರ್ವಾಹಕರಿಂದಿಗೆ ಜಗಳಕ್ಕೆ ಇಳಿದ ಘಟನೆಗಳು ನಗರದಲ್ಲಿ ನಡೆದಿವೆ.

ಬಸ್‌ ಟಿಕೆಟ್‌ ಬಳಿಕ ಮೆಟ್ರೋ ದರವೂ ಹೆಚ್ಚಳ?

ಉಪಯೋಗಕ್ಕೆ ಬಂದ ಕ್ಯೂಆರ್‌ ಕೋಡ್‌: ಚಿಲ್ಲರೆ ಸಮಸ್ಯೆ ಉಂಟಾಗಿದ್ದರಿಂದ ಹಲವು ನಿರ್ವಾಹಕರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ನೀಡುವಂತೆ ಪ್ರಯಾಣಿಕರಿಗೆ ಮನವಿ ಮಾಡಿದರೆ, ಸ್ಮಾರ್ಟ್‌ ಫೋನ್‌ ಹಾಗೂ ಯುಪಿಐ ಆ್ಯಪ್‌ ಬಳಕೆದಾರರು ಸಲಿಸಾಗಿ ಪಾವತಿಸಿ ಟಿಕೆಟ್‌ ಪಡೆದುಕೊಂಡು ಪ್ರಯಾಣ ನಡೆಸಿದರು. ಆದರೆ, ಸ್ಮಾರ್ಟ್‌ ಫೋನ್‌ ಬಳಕೆ ಮಾಡದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ಚಿಲ್ಲರೆ ಸಮಸ್ಯೆಗೆ ಈಗಲೂ ಬಸ್‌ ದರ ರೌಂಡ್‌ ಅಪ್: ಈ ಹಿಂದೆ ದರ ಏರಿಕೆ ಸಂದರ್ಭದಲ್ಲಿ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ರೌಂಡ್‌ ಅಪ್‌ ದರ ನಿಗದಿ ಪಡಿಸಲಾಗಿತ್ತು. ಈ ಬಾರಿಯೂ ರೌಂಡ್‌ ಅಪ್‌ ದರವನ್ನು ಕೆಲವು ಸ್ಟೇಜ್‌ನಲ್ಲಿ ಮಾಡಲಾಗಿದೆ. ಉದಾಹರಣೆಗೆ ಹಿಂದೆ ₹5 ಟಿಕೆಟ್‌ಗೆ ಶೇ.15ರಷ್ಟು ಹೆಚ್ಚಳ ಎಂದರೆ 75 ಪೈಸೆ ಆಗಲಿದೆ. 75 ಪೈಸೆಯ ಚಿಲ್ಲರೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಟಿಕೆಟ್‌ ದರ ₹6ಕ್ಕೆ ರೌಂಡ್‌ ಅಪ್‌ ಮಾಡಲಾಗಿದೆ. ಟಿಕೆಟ್‌ ದರ ₹21 ಆದರೆ, ಅದನ್ನು ₹20ಕ್ಕೆ ಕಡಿಮೆ ಮಾಡಲಾಗಿದೆ. ಟಿಕೆಟ್‌ ದರ ₹26 ಆದರೆ ಅದನ್ನು ₹25ಕ್ಕೆ ರೌಂಡ್‌ ಅಪ್‌ ಮಾಡಲಾಗಿದೆ. ಕೆಲವು ಟಿಕೆಟ್‌ ಮೊತ್ತ ಹೆಚ್ಚಾಗಿ ರೌಂಡ್‌ ಅಪ್‌ ಆಗಿದೆ. ಕೆಲವು ಟಿಕೆಟ್‌ ಮೊತ್ತ ಕಡಿಮೆಯಾಗಿ ರೌಂಡ್‌ ಅಪ್‌ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮೊದಲ 3 ಸ್ಟೇಜ್‌ನಲ್ಲಿ ಶೇ.70ರಷ್ಟು ಆದಾಯ: ಬಿಎಂಟಿಸಿಯ ಮೊದಲ ಮೂರು ಸ್ಟೇಜ್‌ ಗಳಲ್ಲಿ ನಿಗಮಕ್ಕೆ ಶೇ.70ರಷ್ಟು ಆದಾಯ ಬರಲಿದೆ. ಆ ಸ್ಟೇಜ್‌ಗಳಲ್ಲಿ ಟಿಕೆಟ್‌ ದರವನ್ನು ರೌಂಡ್‌ ಅಪ್‌ ನಡಿ ಕಡಿಮೆ ಮಾಡಿದರೆ ದರ ಏರಿಕೆಯು ಯಾವುದೇ ಫಲ ನೀಡುವುದಿಲ್ಲ. ಹೀಗಾಗಿ, ಪ್ರಯಾಣಿಕರು ಚಿಲ್ಲರೆ ಇಟ್ಟುಕೊಂಡು ಸಹಕರಿಸಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

click me!