
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.9) : ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಬಹುತೇಕ ರಾಜಕಾರಣಿಗಳು ತೋಟ, ರೆಸಾರ್ಟ್ ಅಂತಾ ಆಸ್ತಿ ಮಾಡಿದ್ದಾರೆ. ಹಾಗೆಯೇ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಪರ್ಸನಲ್ ಸೆಕ್ರೇಟರಿ ಸರ್ಫರಾಜ್ ಖಾನ್ ಹೆಸರಿನಲ್ಲೂ ಕೊಡಗಿನಲ್ಲೂ ಆಸ್ತಿ ಇದೆ. ಆದರೆ ಅದಲ್ಲ ಪ್ರಶ್ನೆ. ಬದಲಾಗಿ ಆ ಆಸ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಅದು ಕೂಡ ಸರ್ಕಾರಕ್ಕೆ ಕಟ್ಟಬೇಕಾಗಿದ್ದ ಲಕ್ಷಾಂತರ ರೂಪಾಯಿ ವಾಣಿಜ್ಯ ಕಟ್ಟಡದ ತೆರಿಗೆಯನ್ನು ವಂಚಿಸಿ ರೆಸಾರ್ಟ್ ಅನ್ನು ನಿರ್ಮಿಸಲಾಗುತ್ತಿದೆ.
ಹೌದು ಸರ್ಫರಾಜ್ ಖಾನ್ ಅವರ ಹೆಸರಿನಲ್ಲಿ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಣಚಲು ಗ್ರಾಮದ ಸರ್ವೆ ನಂಬರ್ 7/17 ರಲ್ಲಿ 1.06 ಎಕರೆ ಕಾಫಿ ತೋಟವಿದ್ದು ಅದರಲ್ಲಿ ಬೃಹತ್ ರೆಸಾರ್ಟ್ ನಿರ್ಮಾಣವಾಗುತ್ತಿದೆ. ರೆಸಾರ್ಟ್ ಮಾಡಬೇಕಾದರೆ ಮೊದಲಿಗೆ ಆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆಂದು ಪರಿವರ್ತನೆ ಮಾಡಿಕೊಳ್ಳಬೇಕು. ಆ ನಂತರವಷ್ಟೇ ಪಂಚಾಯಿತಿ, ಅರಣ್ಯ, ಪರಿಸರ ಮಾಲಿನ್ಯ ಹಾಗೂ ಕಂದಾಯ ಇಲಾಖೆಗಳಿಂದ ಪರವಾನಗಿ ಪಡೆದು ರೆಸಾರ್ಟ್ ನಿರ್ಮಿಸಬೇಕು. ಆದರೆ ಇಲ್ಲಿ ಭೂ ಪರಿವರ್ತನೆಯನ್ನೇ ಮಾಡದೆ, ಯಾವುದೇ ಇಲಾಖೆಗಳ ಅನುಮತಿ ಇಲ್ಲದೆ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಹೀಗೆ ಸರ್ಕಾರಕ್ಕೆ ವಂಚಿಸಲು ಅನುಸರಿಸಿರುವ ಮಾರ್ಗವಾದರೂ ಯಾವುದು ಗೊತ್ತಾ.? ಅದೇ ಫಾರ್ಮ್ ಹೌಸ್,
ಹೌದು ಫಾರ್ಮ್ ಹೌಸ್ ನಿರ್ಮಿಸುವುದಾಗಿ ಕಂದಾಯ ಇಲಾಖೆಯಿಂದ 2023 ರ ಡಿಸೆಂಬರ್ 6 ರಂದು ಮಡಿಕೇರಿ ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ಆಧಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು 2023 ರ ಡಿಸೆಂಬರ್ 12 ರಂದು ಅನುಮತಿ ನೀಡಿದ್ದರು. ಹೀಗೆ ಫಾರ್ಮ್ ಹೌಸ್ ಗೆಂದು ಅನುಮತಿ ಪಡೆದು ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಫಾರ್ಮ್ಹೌಸ್ ನಿರ್ಮಿಸಬೇಕಾದರೂ ಕೆಲವು ನಿಯಮಗಳಿವೆ. ಅವರ ಹೆಸರಿನಲ್ಲಿರುವ ಒಟ್ಟು ಭೂಮಿ ಶೇ 10 ರಷ್ಟರಲ್ಲಿ ಮಾತ್ರವೇ ಫಾರ್ಮ್ ಹೌಸ್ ಇರಬೇಕು. ಆದರೆ ಇವರು ಆ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಅಂದರೆ 0.05 ಎಕರೆ ಪ್ರದೇಶದಲ್ಲಿ ರೆಸಾರ್ಟ್ ನ ಕಟ್ಟಡ ನಿರ್ಮಿಸಿದ್ದಾರೆ. ಜೊತೆಗೆ ಅದರ ಮುಂಭಾಗದಲ್ಲಿಯೇ ಬೃಹತ್ ಪ್ರಮಾಣದ ಈಜುಕೊಳ ನಿರ್ಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ಇರುವಂತೆ ಪುಷ್ಪಗಿರಿ ವನ್ಯಧಾಮದ ಪರಿಸರ ಸೂಕ್ಷ್ಮ ವಲಯವಾಗಿದೆ. ಈ ನಿಯಮ ಪ್ರಕಾರ ವನ್ಯಧಾಮದ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬೃಹತ್ ಕಟ್ಟಡ ನಿರ್ಮಿಸುವಂತಿಲ್ಲ. ಅದಕ್ಕೂ ಮುನ್ನ ಈ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯನ್ನೇ ಮಾಡಲು ಅವಕಾಶವಿಲ್ಲ. ಈ ಬೃಹತ್ ಕಟ್ಟಡವನ್ನು ಕೇವಲ 540 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಇದೆಲ್ಲವೂ ಹೇಗೆ ಎನ್ನುವುದು ಯಕ್ಷ ಪ್ರಶ್ನೆ. ಒಟ್ಟಿನಲ್ಲಿ ಈ ಎಲ್ಲಾ ನಿಯಮಗಳನ್ನೂ ಉಲ್ಲಂಘನೆ ಮಾಡಿ ರೆಸಾರ್ಟ್ ನಿರ್ಮಿಸಿರುವುದು ಗೊತ್ತಾದ ಬಳಿಕ 2025 ರ ಮೇ 8 ರಂದು ಮೊದಲು ಗ್ರಾಮ ಆಡಳಿತಾಧಿಕಾರಿ ಸ್ಥಳ ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ನೀಡಿದ್ದಾರೆ.
ಈ ವರದಿ ಆಧಾರದಲ್ಲಿ 2025 ರ ನವೆಂಬರ್ 26 ರಂದು ಮಡಿಕೇರಿ ತಹಶೀಲ್ದಾರ್ ಶ್ರೀಧರ್ ಅವರು ನೊಟೀಸ್ ನೀಡಿದ್ದಾರೆ. ಆದರೆ ಸ್ಥಳದಲ್ಲಿ ಸರ್ಫರಾಜ್ ಇಲ್ಲದ ಕಾರಣದಿಂದ ಚುಟುಕಾಸಿ ಬಂದಿದ್ದಾರೆ. ಹೀಗೆ ಚುಟುಕಾಸಿದ ನಂತರ 10 ದಿನಗಳಲ್ಲಿ ಸರ್ಫರಾಜ್ ಖಾನ್ ಅವರು ಉತ್ತರಿಸಬೇಕಾಗಿತ್ತು. ಚುಟುಕಾಸಿ ಒಂದು ತಿಂಗಳ ಮೇಲೆ 12 ದಿನಗಳಾಗಿದ್ದರೂ ಇಂದಿಗೂ ಉತ್ತರಿಸಿಲ್ಲ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆ್ಯಕ್ಟ್ ಪ್ರಕಾರ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮಡಿಕೇರಿ ತಹಶೀಲ್ದಾರ್ ಶ್ರೀಧರ್ ಹೇಳಿದ್ದಾರೆ. ರೈತರಿಗೆ ಇರುವ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೂ ನಷ್ಟ ಮಾಡಿರುವ ಭೂ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ, ಕಾಂಗ್ರೆಸ್ ನವರಿಗೊಂದು ನ್ಯಾಯವೇ. ತಹಶೀಲ್ದಾರ್ ಅವರು ಯಾವುದೇ ಒತ್ತಡಗಳಿಗೆ ಮಣಿಯದೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ