ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಬಾರಿ ಶಿಗ್ಗಾವಿಯಲ್ಲಿರುವ ಸಿಎಂ ಬೊಮ್ಮಾಯಿ ನಿವಾಸದ ಬಳಿ ಪ್ರತಿಭಟನೆ ಶುರುವಾಗಿದೆ. ಈ ವೇಳೆ ಸ್ವಾಮೀಜಿಗಳು ಬಿಎಸ್ ಯಡಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ.
ಹಾವೇರಿ, (ಸೆಪ್ಟೆಂಬರ್.20): ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕನೇ ಭಾರೀ ಕೊಟ್ಟ ಮಾತನ್ನು ತಪ್ಪಿದ್ದು, ಅವರ ಮನೆಯ ಮುಂಭಾಗದಲ್ಲಿ ಸೆ.20 ರಂದು ಲಿಂಗಾಯತ ಪಂಚಮಸಾಲಿ ಸಮುದಾಯದ ಭಾಂದವರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದರು.
ಅದರಂತೆ. ಇಂದು(ಮಂಗಳವಾರ) ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಿಗ್ಗಾವಿ ಚೆನ್ನಮ್ಮ ಸರ್ಕಲ್ ನಿಂದ ಪಾದಯಾತ್ರೆ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಬಳಿ ಪ್ರತಿಭಟನೆ ನಡೆದಿದೆ.
undefined
ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, ಬೊಮ್ಮಾಯಿಯವರು ಮೀಸಲಾತಿ ನೀಡಿದರೆ 101 ಲೀಟರ್ ಹಾಲಿನ ಅಭಿಷೇಕ ಮಾಡುತ್ತೇವೆ. ಸೂರ್ಯ ಚಂದ್ರ ಇರೋವರೆಗೆ ಹೇಗೇ ಚೆನ್ನಮ್ಮನ ಸ್ಮರಣೆ ಮಾಡ್ತೀವೋ ಹಾಗೆ ನಿಮ್ಮ ಸ್ಮರಣೆ ಮಾಡ್ತೀವಿ. ಸವಣೂರು ಖಾರಾ ತುಲಾಭಾರ ಮಾಡಿಸ್ತೀವಿ ಎಂದರು.
2ಎ ಮೀಸಲಿಗಾಗಿ ಸೆ.20ಕ್ಕೆ ಸಿಎಂ ಮನೆ ಮುಂದೆ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ
ಬಿಎಸ್‌ವೈಗೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ಯಡಿಯೂರಪ್ಪ ಸಾಹೇಬ್ರು ಒತ್ತಡ ಹಾಕ್ತಿದ್ದಾರೆ ಅಂತ ಕೆಲವರು ನಮಗೆ ಹೇಳಿದ್ದಾರೆ. ಬೊಮ್ಮಾಯಿ ಮೀಸಲಾತಿ ನೀಡಿದರೆ ಎಲ್ಲಿ ಲಿಂಗಾಯತ ಲೀಡರ್ ಆಗ್ತಾರೋ ಅಂತ ಯಡಿಯೂರಪ್ಪನಿಗೆ ಹೊಟ್ಟೆಕಿಚ್ಚು ಇರಬಹುದು. ಹೋರಾಟಕ್ಕೆ ನೀವೇನಾದರೂ ತೊಂದರೆ ಮಾಡಿದರೆ ನೀವು ಹೋದಲ್ಲೆಲ್ಲಾ ಕಪ್ಪು ಬಾವುಟ ಹಾರಿಸ್ತೀವಿ. ಶಿಕಾರಿಪುರದ ವರೆಗೆ ಪಾದಯಾತ್ರೆ ಮಾಡೋಕೂ ಸಿದ್ದರಿದ್ದೇವೆ ಎಂದು ಯಡಿಯೂರಪ್ಪಗೆ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಲಿಂಗಾಯತ ನಾಯಕ ಅಂತ ತಿಳಿದಿದ್ದೆವು. ಅಷ್ಟು ದೊಡ್ಡ ಕಠಿಣ ಪಾದಯಾತ್ರೆ ಮಾಡಿದೆವು. ಯಡಿಯೂರಪ್ಪನವರು ಮೀಸಲಾತಿ ಕೊಡಲೇ ಇಲ್ಲ. 10 ಲಕ್ಷ ಜನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾದರು. ಸಮಾಜ ಒಗ್ಗಟ್ಟಾಯಿತು. ಆದರೆ ಯಡಿಯೂರಪ್ಪ ಮನಸ್ಸು ಕರಗಲಿಲ್ಲ. ಬೊಮ್ಮಾಯಿ ಮೂಲತಃ ಕಮಡೊಳ್ಳಿಯವರು. ಕೂಡಲ ಸಂಗಮದಿಂದ ಬೆಂಗಳೂರು ವರಗೆ ಪಾದಯಾತ್ರೆ ಮಾಡಿದಾಗ ಬೊಮ್ಮಾಯಿಯವರು ನಮಗೆ z+ ಸೆಕ್ಯೂರಿಟಿ ನೀಡಿದವರು ಎಂದರು.
2% ಲಿಂಗಾಯತ ಜನರೇ ನಮ್ಮನ್ನು ಆಳಿದರು. ಪಂಚಮಸಾಲಿಗಳು ನಾವು ಮುಗ್ದರು. ಅನ್ನ ಕೊಟ್ಟ ಪಂಚಮಸಾಲಿ ಬೆಳೆಸೋ ಪ್ರಯತ್ನ ಮಾಡಲಿಲ್ಲ. ಈ ಸಮಾಜವನ್ನು 2% ಇರೋ ಕೆಲವೇ ಜನ ಆಳಿದರು. ನಮ್ಮ ಓಟು ಪಡೆದು ಗೆದ್ದು, ತಮ್ಮ ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದರು. ಆದರೆ ಪಂಚಮಸಾಲಿಗಳಿಗೆ ಮೋಸ ಮಾಡಿದರು. ಹಣೆ ಮೇಲೆ ವಿಭೂತಿ ನೋಡ್ತಾ ಇದ್ವಿ. ಓಟ್ ಹಾಕ್ತಾ ಇದ್ವಿ. ಓಟು ಕೊಟ್ಟು ಬೆಳೆಸಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದ್ದರೆ ನಿಮ್ಮ ಫೋಟೊ ಹಾಕಿಕೊಳ್ಳುತ್ತಿದ್ದೆವು.
ವಿಜಯೇಂದ್ರ ಅರಮನೆ ಮೈದಾನದ ಅನುಮತಿಗೆ ಅಡ್ಡಗಾಲು ಹಾಕಿದಾಗ ಬೊಮ್ಮಾಯಿಯವರೇ ಅನುಮತಿ ಕೊಡಿಸಿದರು . ವಿಜಯೇಂದ್ರ ಸಣ್ಣ ಹುಡುಗ. ಮೊದಲು ನಮ್ಮ ಮೀಸಲಾತಿ ಹೋರಾಟಕ್ಕೆ ತೊಂದರೆ ನೀಡಿದ. ಆ ಮೇಲೆ ತಪ್ಪಿನ ಅರಿವಾಗಿ ಸುಮ್ಮನೆ ಕುಳಿತರು ಎಂದು ಹೇಳಿದರು.
ರಾಜ್ಯಾದ್ಯಂತ ಪಂಚಮಸಾಲಿ ರಥಯಾತ್ರೆ
ಎಲ್ಲರ ಕೈಯಲ್ಲಿ ಕೈ ಇಟ್ಟು ಬೊಮ್ಮಾಯಿ ಸಾಹೇಬ್ರು ಮಾತು ಕೊಟ್ಟಿದ್ರು. ಆದರೆ ಈಗ ಮಾತು ತಪ್ಪಿದ್ದಾರೆ. ಯತ್ನಾತ್ ಅವರು ಅಧಿವೇಶನ ಮುಗಿಯುವರೊಳಗೆ ಬೊಮ್ಮಾಯಿ ಸಾಹೇಬ್ರು ಮೀಸಲಾತಿ ಕೊಡ್ತಾರೆ ಅಂತ ನಮ್ಮ ಮನವೊಲಿಸಿದರು. ಆದರೆ ಇದುವರೆಗೆ ಮೀಸಲಾತಿ ನೀಡಲಿಲ್ಲ. ಸಿಎಂ ಬೊಮ್ಮಾಯಿ ಮನವಿ ಮೇರೆಗೆ ನಾವು ಹೋರಾಟ ಮುಂದೆ ಹಾಕಿದ್ದೆವು.ಎರಡು ತಿಂಗಳು ಟೈಂ ತಗೊಂಡ್ರು. ಆದರೆ ಘೋಷಣೆ ಮಾಡಲಿಲ್ಲ
ರಾಜ್ಯಾದ್ಯಂತ ಪಂಚಮಸಾಲಿ ರಥಯಾತ್ರೆ ಮಾಡುತ್ತೇನೆ. 2 ತಿಂಗಳು ಇಡೀ ಕರ್ನಾಟಕ ಸುತ್ತುತ್ತೇನೆ. ಬಳಿಕ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ ಎಂದು ಪರೋಕ್ಷವಾಗಿ ಸಿಎಂ ಬೊಮ್ಮಾಯಿಗೆ ಎಚ್ಚರಿಸಿದರು.