ಚರ್ಚೆಗೆ ಸರ್ಕಾರವೇ ನಮ್ಮ ಬಳಿ ಬರಲಿ: ಸ್ವಾಮೀಜಿ

By Kannadaprabha NewsFirst Published Feb 24, 2021, 9:07 AM IST
Highlights

ಪಂಚಮಸಾಲಿ ಹೋರಾಟವು ಇದೀಗ ಇನ್ನಷ್ಟು ತೀವ್ರಗೊಂಡಿದೆ. ಎರಡನೇ ದಿನ ಕಳೆದು ಹೋರಾಟ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ.  ಸರ್ಕಾರವೇ  ನಮ್ಮ ಬಳಿ ಬಂದು ಮಾತುಕತೆ ನಡೆಸಲಿ ಎಂದು ಪಟ್ಟು ಹಿಡಿದಿದ್ದಾರೆ. 

 ಬೆಂಗಳೂರು (ಫೆ.24):   ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆರಂಭವಾಗಿರುವ ಧರಣಿ ಸತ್ಯಾಗ್ರಹ  ಎರಡನೇ ದಿನ ಪೂರೈಸಿತು. ಈ ನಡುವೆ, ಹೋರಾಟ ತೀವ್ರಗೊಳಿಸಲು ಅವರು ನಿರ್ಧರಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಮೀಸಲಾತಿ ಬೇಡಿಕೆ ಈಡೇರುವವರೆಗೂ ಈ ಹೋರಾಟ ಮುಂದುವರಿಯಲಿದೆ. ಇನ್ನು ಎರಡು ದಿನಗಳಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧರಿಸುತ್ತೇವೆ. ಈ ಸಂಬಂಧ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು, ಸಮಯದಾಯ ಶಾಸಕರು, ಮಂತ್ರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ. ಈವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಆಮಂತ್ರಣ ಬಂದಿಲ್ಲ. ನಾನು ಯಾರಿಗೂ ಆಮಂತ್ರಣ ಕೊಡುವುದಿಲ್ಲ. ಸರ್ಕಾರದ ಪ್ರತಿನಿಧಿಗಳೇ ಪ್ರತಿಭಟನಾ ಸ್ಥಳಕ್ಕೆ ಬರಬೇಕು. ನಾನು ಇಲ್ಲಿಯೇ ಕುಳಿತು ಚರ್ಚಿಸುತ್ತೇನೆ. ನಾನು ಧರಣಿ ಸ್ಥಳ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ’ ಎಂದರು.

ಪಂಚಮಸಾಲಿ ಸಮಾವೇಶ ಬಳಿಕ ಯತ್ನಾಳ್ ದಿಢೀರ್ ದಿಲ್ಲಿಗೆ, ಅಸಲಿ ಕಾರಣ ಬಹಿರಂಗ ...

ಸಮುದಾಯದ ಮಕ್ಕಳ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹಾಗೂ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಗಬೇಕು ಎನ್ನುವ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಂಡಿದ್ದೇವೆ. ಈಗಾಗಲೇ ಪಾದಯಾತ್ರೆ, ಸಮಾವೇಶ ಮುಗಿದಿದ್ದು, ಇದೀಗ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಈ ನಮ್ಮ ಹೋರಾಟದ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಬೇಸರವಿಲ್ಲ. ಏನೇ ಆರೋಪ ಪ್ರತ್ಯಾರೋಪಗಳು ಕೇಳಿ ಬಂದರೂ ಕಿವಿಯಲ್ಲಿ ಕೇಳಿ ಬಿಟ್ಟಿಬಿಡಿ ಎಂದು ಸಮುದಾಯಕ್ಕೆ ಸಲಹೆ ನೀಡಿದರು.

ಪಂಚಮಸಾಲಿ ಬೃಹತ್‌ ಸಮಾವೇಶದ ಬಳಿಕ ರಾಜ್ಯ ಸರ್ಕಾರದಿಂದ ಬೇಡಿಕೆ ಈಡೇರಿಸುವ ಯಾವುದೇ ಖಚಿತ ಭರವಸೆ ಸಿಗದ ಹಿನ್ನೆಲೆಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಧರಣಿ ಸತ್ಯಾಗ್ರಹ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಕಳೆದ ಎರಡು ದಿನಗಳಿಂದ ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌, ಶಾಸಕರಾದ ಬಸನಗೌಡ ಪಾಟೀಲ್‌, ಸಿದ್ದು ಸವದಿ ಸೇರಿದಂತೆ ಸಮುದಾಯದ ಹಲವು ಮುಖಂಡರು ಸಾಥ್‌ ನೀಡಿದ್ದಾರೆ.

click me!