ಪ್ರಬಲ ಜಾತಿಗಳು 2ಎಗೆ ಬೇಡ: ಸಿಎಂ ಬೊಮ್ಮಾಯಿಗೆ ಮನವಿ

By Kannadaprabha News  |  First Published Aug 20, 2021, 12:11 PM IST

*  ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮೊರೆ
*  ಅತಿ ಹಿಂದುಳಿದ ಮಠ, ಸಂಘ ಸಂಸ್ಥೆಗಳಿಗೂ ಅನುದಾನಕ್ಕೆ ಬೇಡಿಕೆ
*  ಮೀಸಲಾತಿ ಕಿತ್ತುಕೊಳ್ಳುವುದು ಸರಿಯಲ್ಲ 
 


ಬೆಂಗಳೂರು(ಆ.20):  ಲಿಂಗಾಯತ ಸಮುದಾಯದವರು 2(ಎ) ಮೀಸಲಾತಿಗೆ ಒತ್ತಾಯಿಸಿ ಸರಣಿ ಹೋರಾಟ ನಡೆಸಿರುವ ಬೆನ್ನಲ್ಲೇ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಬಲಿಷ್ಠ ಸಮುದಾಯವನ್ನು ಪ್ರವರ್ಗ 2(ಎ)ಗೆ ಸೇರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ. 

ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ವರದಿಯನ್ನು ಜಾರಿಗೆ ತರಬೇಕು ಹಾಗೂ ಬಲಿಷ್ಠ ಸಮುದಾಯವನ್ನು ಪ್ರವರ್ಗ 2(ಎ)ಗೆ ಸೇರಿಸಬಾರದು ಎಂದು ಆಗ್ರಹಿಸಿ ವೇದಿಕೆಯ ಮುಖಂಡರು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ನಂತರ ವೇದಿಕೆಯ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಮಾತನಾಡಿ, ಕಾಂತರಾಜ್‌ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ವರದಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದರು.

Latest Videos

undefined

ಪ್ರಬಲ ಜಾತಿಗಳನ್ನು 2(ಎ)ಗೆ ಸೇರಿಸಬಾರದು. ಪ್ರಬಲ ಜಾತಿಯ ಮಠಗಳಿಗೆ ನೀಡಿದಂತೆಯೇ ಅತಿ ಹಿಂದುಳಿದ ವರ್ಗಗಳ ಮಠಗಳಿಗೆ, ಸಂಘ-ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿಗೆ 2A ಮೀಸಲಾತಿ: ಸ್ವಾಮೀಜಿಗಳಿಗೆ ಪತ್ರ ಬರೆದ ಹಿಂದುಳಿದ ವರ್ಗಗಳ ಆಯೋಗ

ಮೀಸಲಾತಿ ಕಿತ್ತುಕೊಳ್ಳುವುದು ಸರಿಯಲ್ಲ:

ವೇದಿಕೆಯ ಗೌರವ ಸಲಹೆಗಾರ ಡಾ.ಸಿ.ಎಸ್‌.ದ್ವಾರಕಾನಾಥ್‌ ಮಾತನಾಡಿ, ರಾಜ್ಯದಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ನಾಯಕರಿಲ್ಲ. ಈ ವರ್ಗಕ್ಕೆ ದೊರಕಬೇಕಾದ ಮೀಸಲಾತಿಯನ್ನು ಕಿತ್ತುಕೊಂಡು ಪ್ರಬಲ ಜಾತಿಗಳಿಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಇದನ್ನು ಮುಖ್ಯಮಂತ್ರಿಗಳು ಹಾಗೂ ಸಚಿವರ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮತ್ತಿತರರು ಉಪಸ್ಥಿತರಿದ್ದರು.

ಪುನರ್‌ ವರ್ಗೀಕರಣ ಮಾಡಲಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತುಪಡಿಸಿ, ಧಾರ್ಮಿಕ ಅಲ್ಪ ಸಂಖ್ಯಾತರನ್ನು ಒಳಗೊಂಡಂತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಐದು ಪ್ರವರ್ಗಗಳಿವೆ. ಹಿಂದುಳಿದ ವರ್ಗಗಳ ಯಾವುದೇ ಆಯೋಗದ ಶಿಫಾರಸಿನ ಮೇಲೆ ಇವುಗಳನ್ನು ವರ್ಗೀಕರಿಸಿಲ್ಲ. ಇದು ಅತ್ಯಂತ ಅವೈಜ್ಞಾನಿಕವಾಗಿದ್ದು ಕುಲಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದಲೂ ಅಸಮರ್ಪಕವಾಗಿದೆ. ಆದ್ದರಿಂದ ಪುನರ್‌ ವರ್ಗೀಕರಣ ಮಾಡಬೇಕು ಎಂದು ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಐದು ಪ್ರವರ್ಗಕ್ಕೆ ಶೇ.32 ಮೀಸಲಾತಿಯಿದೆ. ಪ್ರವರ್ಗ ಒಂದರಲ್ಲಿ 95 ಜಾತಿಗಳಿದ್ದು ಶೇ.4 , ಪ್ರವರ್ಗ 2(ಎ)ನಲ್ಲಿ 102 ಜಾತಿಗಳಿದ್ದು ಶೇ.15, ಪ್ರವರ್ಗ 2(ಬಿ) ಯಲ್ಲಿ ಮುಸ್ಲಿಂ ಸಮುದಾಯವಿದ್ದು ಶೇ.4, ಪ್ರವರ್ಗ 3(ಎ)ನಲ್ಲಿ ಒಕ್ಕಲಿಗರು ಮತ್ತಿತರರಿದ್ದು ಶೇ.4 ಮತ್ತು ಪ್ರವರ್ಗ 3(ಬಿ) ಯಲ್ಲಿ ವೀರಶೈವ ಲಿಂಗಾಯಿತ ಮತ್ತಿತರ ಜಾತಿಗಳಿದ್ದು ಶೇ.5 ಮೀಸಲಾತಿ ಇದೆ. ದುರಂತವೆಂದರೆ ಈ ಪಟ್ಟಿಯಲ್ಲಿರುವ ಬಲಿಷ್ಠ ಮತ್ತು ಸಂಘಟಿತ ಜಾತಿಗಳು ಸಹಜವಾಗಿಯೇ ಪ್ರಾತಿನಿಧ್ಯ ಪಡೆಯುತ್ತಿದ್ದು, ಪ್ರವರ್ಗ 1 ಮತ್ತು 2(ಎ) ನಲ್ಲಿರುವ ಅತಿ ಹಿಂದುಳಿದ ಜಾತಿಗಳು ಅವಕಾಶ ವಂಚಿತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಲಿಷ್ಠ ಸಮುದಾಯವನ್ನು ಪ್ರವರ್ಗ 2(ಎ)ಗೆ ಸೇರಿಸಬಾರದು ಎಂದು ಒತ್ತಾಯಿಸಿ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌, ಗೌರವ ಸಲಹೆಗಾರ ಡಾ.ಸಿ.ಎಸ್‌.ದ್ವಾರಕಾನಾಥ್‌ ಮತ್ತಿತರರು ಹಾಜರಿದ್ದರು.
 

click me!