
ಬರ ಅಧ್ಯಯನಕ್ಕೆ ಕೇಂದ್ರ ತಂಡ ಬಂದಿತ್ತಲ್ಲ. ಆ ತಂಡ ನಮ್ಮ ಕೊಪ್ಪಳಕ್ಕೂ ಬಂದಿತ್ತು. ಹಾಗಾಗಿ ನಮ್ಮ ಕಡೆಯೂ ಅಧ್ಯಯನಕ್ಕೆ ಬರುತ್ತದೆ ಎಂದು ಬರ ತೀವ್ರವಾಗಿ ಕಾಡಿದ್ದ ಪ್ರದೇಶಗಳ ಜನರು ಕಾದಿದ್ದರು. ಹಸಿ ಸಾಲದೇ ಬೆಳೆ ಒಣಗಿದ್ದರಿಂದ ರೈತರು ಕುಂಟಿ ಹಾಕಿ ಭೂಮಿಯನ್ನು ಹರಗಿದ್ದರು. ಒಣಗಿ ಗಲಗಲ ಆಗಿರುವಂತಹ ಅದೆಷ್ಟೋ ಏರಿಯಾಗಳಿದ್ದವು.
ಆದರೆ, ತಂಡ ಬರಲೇ ಇಲ್ಲ. ಏಕೆ ಎಂದು ಕಾರಣ ಹುಡುಕಿದಾಗ ಈ ಬರದಲ್ಲೂ ತುಸು ಹಸಿರು ಇದ್ದ ತಾಣಗಳಿಗೆ ಮಾತ್ರ ಈ ತಂಡ ಹೋಗಿತ್ತು. ಯಲಬುರ್ಗಾ ತಾಲೂಕಿನ ಬಂಡಿ ಕ್ರಾಸ್ ಬಳಿ ಕೇಂದ್ರ ತಂಡವನ್ನು ಸ್ವಾಗತಿಸಿದ ಜಿಲ್ಲಾಡಳಿತವು ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವ್ಯಾಪ್ತಿಯುದ್ದಕ್ಕೂ ಎರಡು ಬದಿಯಲ್ಲಿ ಸ್ಪ್ರಿಂಕ್ಲರ್ ಪುಟಿಯುತ್ತಿರುವ ರಸ್ತೆಯಲ್ಲಿನ ಬೆಳೆ ತೋರಿಸುತ್ತಾ ಸಾಗಿತು.
ಅರೇ ಇಸ್ಕಿ... ಈ ಪಾಟಿ ಬರದಿಂದ ಒಣಗಿ ನಿಂತ ಬೆಳೆ ಕೊಪ್ಪಳದ ತುಂಬೆಲ್ಲ ಇದ್ದರೂ ಅಲ್ಲೆಲ್ಲೋ ಮೂಲೆಯಲ್ಲಿ ಇಟೇ ಇಟು ಹಸಿರು ಇರೋ ಕಡೆಗೆ ಈ ತಂಡವನ್ನು ಒಯ್ದವರು ಯಾರು ಎಂದು ಮಾಧ್ಯಮದವರು ಪ್ರಶ್ನಿಸಿದರೆ .
ರಿಪೋರ್ಟರ್ಸ್ ಡೈರಿ: ಕಳ್ಳ ಸುಳ್ಳ ಹೇಳಿಕೆಯಿಂದ ಈಶ್ವರಪ್ಪ ಎಸ್ಕೇಪ್!
ನಾನೇ ನಾನೇ ಎಂದು ಮುಂದೆ ಬಂದವರು ಜಿಲ್ಲಾಧಿಕಾರಿ ನಳಿನ್ ಅತುಲ್.
ಅದ್ಯಾಕ ಸರ? ಎಂದು ಪ್ರಶ್ನೆ ಮಾಡಿದರೆ.. ಈ ಬಾರಿ ರಾಜ್ಯ ಸರ್ಕಾರ ಹಸಿರು ಬರ ಎಂದೇ ಕೇಂದ್ರಕ್ಕೆ ವರದಿ ಮಾಡಿದೆ. ಹೀಗಾಗಿ, ನಮ್ಮ ಅಧಿಕಾರಿಗಳ ತಂಡ ಮೊದಲೇ ಸುತ್ತಾಡಿ, ರೂಟ್ ಮ್ಯಾಪ್ ಸಿದ್ಧ ಮಾಡಿತ್ತು ಎಂದರು.
ಅದೇ ಸರ... ಬರ ತೋರಿಸಿ ಅಂದರೆ ಹಸಿರು ಏಕೆ ತೋರಿಸುತ್ತಿದ್ದೀರಿ ಎಂದು ಪತ್ರಕರ್ತರು ಪ್ರಶ್ನಿಸಿದರೆ, ಮಳೆ ಸಂಪೂರ್ಣ ಕೈಕೊಟ್ಟಿಲ್ಲ. ಆಗಿರುವ ಅಲ್ಪ ಸ್ವಲ್ಪ ಮಳೆಯಲ್ಲಿ ಬೆಳೆ ಹಸಿರಾಗಿದ್ದರೂ ಫಲ ನೀಡುತ್ತಿಲ್ಲ ಎನ್ನುವುದನ್ನೇ ಬಿಂಬಿಸಲು ಈ ರೂಟ್ ನಿಗದಿ ಮಾಡಿದ್ದೇವೆ... ಎಂದರು ಸಾಹೇಬರು.
ಓಹೋ ಹಂಗೇ ಸಮಾಚಾರ ಎಂದುಕೊಂಡ ಪತ್ರಕರ್ತರು ಈ ವರ್ಷ ಪರಿಹಾರ ಹರೋಹರ ಬಿಡಿ ಎಂದು ಸಾಹೇಬರಿಗೆ ನಮಸ್ಕಾರ ಹಾಕಿಬಂದರು.
ಕೆಎಸ್ಸಾರ್ಟಿಸಿಗೆ ಮೀನು ಸಾಗಾಟ ವರ್ಜ್ಯ!
ಶಕ್ತಿ ಯೋಜನೆ ಬಂದ ನಂತರ ಮಹಿಳೆಯರಿಗೆ ಶಕ್ತಿ ಬಂದಿರುವುದು ಎಲ್ಲರಿಗೂ ಗೊತ್ತು. ಈ ಶಕ್ತಿ ಬಂದ ಆರಂಭದಲ್ಲಿ ಹಳ್ಳಿ ಪಳ್ಳಿಯ ಮಹಿಳಾ ಮಣಿಗಳೆಲ್ಲ ದೇವಾಲಯಗಳಿಗೆ ಯಾತ್ರೆ ಹೊರಟು ದೇವಾಲಯಗಳ ಹುಂಡಿ ಭರ್ತಿ ಮಾಡಿದ್ದು ಹಳೆ ಸುದ್ದಿ. ಈಗ ದೇವಾಲಯಗಳನ್ನು ಸುತ್ತಿ ಆಯ್ತಲ್ಲ. ಸೋ, ಸಂಬಂಧಿಕರಿಗೆ ತಮ್ಮ ಊರಿನ ವಿಶೇಷ ಖಾದ್ಯದ ರುಚಿ ತೋರಿಸಲು ಮುಂದಾಗಿದ್ದಾರೆ.
ಮೊನ್ನೆ ಹೀಗಾಯ್ತು. ಒಬ್ಬಾಕೆ ಮಂಗಳೂರಿನಿಂದ ತನ್ನ ಸಂಬಂಧಿಕರ ಮನೆ ಸಕಲೇಶಪುರಕ್ಕೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಮಂಗಳೂರು ಮೀನು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಪ್ಲಾಸ್ಟಿಕ್ ಚೀಲದಲ್ಲಿ ಹಸಿ ಮೀನು ತುಂಬಿಸಿ ತೆರೆದ ಬಕೆಟ್‌ನಲ್ಲಿ ಹಾಕಿ ಬಸ್ ಹತ್ತಿದ್ದರು. ಬಸ್ ಪಡೀಲು ತಲುಪುತ್ತಿದ್ದಂತೆ ನಿರ್ವಾಹಕ ಬಕೆಟ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದ. ಆಗ ಮಹಿಳೆ, ಪ್ಲಾಸ್ಟಿಕ್ ಚೀಲದಲ್ಲಿ ಮೀನು ಇದೆ ಎಂದು ಸತ್ಯವನ್ನೇ ಹೇಳಿದ್ದರು.
Reporters Dairy: ಯಾತ್ರೆಗೆ ಕರೆದೊಯ್ದವರ ಬಿಟ್ಟರು, ಬೇರೊಬ್ಬರನ್ನ ಗೆಲ್ಲಿಸಿದರು!
ಇದನ್ನು ಕೇಳಿದ್ದೇ ತಡ, ನಿರ್ವಾಹಕ ನಖಶಿಖಾಂತ ಉರಿದು, ‘ಮೀನು, ಮಾಂಸ ಸಾಗಾಟಕ್ಕೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಅವಕಾಶ ಇಲ್ಲ ಎಂದು ಗೊತ್ತಿಲ್ಲವೇ’ ಎಂದು ಗದರಿಸಿದ್ದಲ್ಲದೆ, ಮಹಿಳೆಯನ್ನು ಬಸ್‌ನಿಂದ ಇಳಿಸಿಯೇ ಬಿಟ್ಟಿದ್ದ. ಯಾವ ಬಸ್‌ಗೆ ಹತ್ತಲು ಮುಂದಾದರೂ ಮಹಿಳೆಗೆ ಈ ಮೀನು ಬಕೆಟ್‌ನದ್ದೇ ಸಮಸ್ಯೆ ಎದುರಾಯ್ತು. ಕೊನೆಗೆ ಯಾರೋ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಈ ವಿಚಾರ ಮುಟ್ಟಿಸಿದರು. ಅವರು ನೇರವಾಗಿ ಆ ಮಹಿಳೆಯಲ್ಲಿ ಮಾತನಾಡಿ ಮಹಿಳೆಗೆ ಮನವರಿಕೆ ಮಾಡಿದರು. ಕೊನೆಗೆ ಮೀನು ಇದ್ದ ಬಕೆಟ್ ಅನ್ನು ಅಲ್ಲಿಯೇ ಬಿಟ್ಟು ಮಹಿಳೆ ಸಕಲೇಶಪುರ ಬಸ್ಸನ್ನೇರಬೇಕಾಯಿತು.
ಸಂಬಂಧಿಕರಿಗೆ ಮಂಗಳೂರು ಮೀನು ತಿನ್ನಿಸುವ ಬಯಕೆಯನ್ನು ಕೆಎಸ್ಸಾರ್ಟಿಸಿ ಹೀಗೆ ಹೊಸಕಿ ಹಾಕಿತ್ತು.
ಸೋಮರಡ್ಡಿ ಅಳವಂಡಿ
ಆತ್ಮಭೂಷಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ