
ಬೆಂಗಳೂರು: ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಆರೋಪಿಗಳನ್ನು ಒಳಗೊಂಡಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಜಾಮೀನಿನ ಮೇಲೆ ಇರುವ ಇತರ ಆರೋಪಿಗಳು ಕೋರ್ಟ್‌ಗೆ ಖುದ್ದಾಗಿ ಹಾಜರಾದರು. ವಿಚಾರಣೆ ವೇಳೆ ಜೈಲಿನಲ್ಲಿರುವ ಆರೋಪಿಗಳಿಗೆ ಟಿವಿ ಸೌಲಭ್ಯ ಒದಗಿಸಲು ಕೋರ್ಟ್ ಒಪ್ಪಿಗೆ ಸೂಚಿಸಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದಾಗಿ ಒಪ್ಪಿಗೆ ಕೊಟ್ಟಿದೆ. ಇನ್ನು ಸ್ಥಳ ಮಹಜರು ವೇಳೆ ದರ್ಶನ್ ಮನೆಯಲ್ಲಿ ಸಿಕ್ಕ ₹82 ಲಕ್ಷ ರೂ ಗಳನ್ನು ಐಟಿಗೆ ಒಪ್ಪಿಸುವಂತೆ ಕೋರ್ಟ್ ಸೂಚಿಸಿದೆ.
ವಿಚಾರಣೆ ಶುರುವಾದ ತಕ್ಷಣ, ಅಸಿಸ್ಟೆಂಟ್ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಎಸ್ಪಿಪಿ) ಸಚಿನ್ ಅವರು ಸಾಕ್ಷಿಗಳನ್ನು ಕರೆಸುವಂತೆ ನೋಟಿಸ್ (ಸಮನ್ಸ್) ಜಾರಿಗೆ ಮನವಿ ಕೋರ್ಟ್‌ಗೆ ಮನವಿ ಸಲ್ಲಿಸಿದರು. ಈ ವೇಳೆ ಯಾವ ಸಾಕ್ಷಿಗಳಿಗೆ ಸಮನ್ಸ್ ಜಾರಿಗೆ ಇಚ್ಛಿಸುತ್ತಿದ್ದೀರಿ ಎಂಬ ಪಟ್ಟಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಸ್ಪಷ್ಟನೆ ಕೇಳಿದರು. ಪ್ರಥಮವಾಗಿ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ವಿಚಾರಣೆಗಾಗಿ ಕರೆಸಬೇಕು ಎಂದು ಅವರು ಒತ್ತಾಯಿಸಿದರು.
ಎಎಸ್ಪಿಪಿ ಸಚಿನ್ ಅವರು ಮೊದಲ ಹಂತದಲ್ಲಿ ಸಾಕ್ಷಿ ಸಂಖ್ಯೆ 7 ಮತ್ತು 8 ಅಂದರೆ ರೇಣುಕಾಸ್ವಾಮಿ ಅವರ ತಂದೆ ತಾಯಿ ಇವರಿಗೆ ಸಮನ್ಸ್ ಜಾರಿಗೆ ಮನವಿ ಸಲ್ಲಿಸಿದರು. ಇದನ್ನು ಆಕ್ಷೇಪಿಸಿದ ವಕೀಲರು, “ಪ್ರಾಸಿಕ್ಯೂಷನ್ ಪಿಕ್ ಅಂಡ್ ಚೂಸ್ ವಿಧಾನ ಅನುಸರಿಸುವುದು ಸರಿಯಲ್ಲ. ಕ್ರಮ ಸಂಖ್ಯೆ (ಆರ್ಡರ್ ವೈಸ್) ಅನುಸಾರ ಸಾಕ್ಷಿಗಳನ್ನು ಕರೆಸಬೇಕು” ಎಂದು ವಾದಿಸಿದರು.
ಕೋರ್ಟ್ ಎರಡೂ ಕಡೆಯವರ ವಾದಗಳನ್ನು ಆಲಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು. ಮಧ್ಯಾಹ್ನದ ವಿಚಾರಣೆ ಆರಂಭವಾದಾಗ ಆರೋಪಿಗಳ ಹಾಜರಾತಿ ಕುರಿತು ಕೋರ್ಟ್ ಪ್ರಶ್ನೆ ಮಾಡಿತು. ಆರೋಪಿಗಳಿಗೆ ಯಾವುದಾದರೂ ತೊಂದರೆ ಇದೆಯೆ? ಎಂದು ಕೋರ್ಟ್ ಕೇಳಿತು. ಆರೋಪಿ ಜಗದೀಶ್ “ನನ್ನನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆ” ಎಂದು ನ್ಯಾಯಾಧೀಶರ ಮುಂದೆ ಹೇಳಿದಾಗ ಜಡ್ಜ್ ಸ್ಪಷ್ಟವಾಗಿ ನಿಮ್ಮ ಮನವಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ ಎಂದರು.
ಅದೇ ವೇಳೆ, ಇನ್ನೊಬ್ಬ ಆರೋಪಿ ಅನುಕುಮಾರ್ ಕೂಡ ತಾಯಿ ಅಸ್ವಸ್ಥವಾಗಿರುವ ಕಾರಣದಿಂದ ಚಿತ್ರದುರ್ಗ ಜೈಲಿಗೆ ವರ್ಗಾವಣೆ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೂ ಕೋರ್ಟ್ ಸ್ಪಷ್ಟನೆ ನೀಡಿ “ಪ್ರಕರಣ ಈಗ ವಿಚಾರಣೆ ಹಂತದಲ್ಲಿದೆ; ಈ ಸಮಯದಲ್ಲಿ ವರ್ಗಾವಣೆ ಸಾಧ್ಯವಿಲ್ಲ” ಎಂದು ಹೇಳಿತು.
ಇನ್ನು ರೇಣುಕಾಸ್ವಾಮಿ ಪ್ರಕರಣದ ಸಮಯದಲ್ಲಿ ನಟ ದರ್ಶನ್ ಮನೆಯಿಂದ ವಶಪಡಿಸಿಕೊಂಡಿದ್ದ ಹಣವನ್ನು ಆದಾಯ ತೆರಿಗೆ ಇಲಾಖೆಗೇ ನೀಡುವಂತೆ ಕೋರ್ಟ್ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದರ್ಶನ್ ಕಡೆಯಿಂದ ₹82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದರು. ಈ ಹಣದ ಬಗ್ಗೆ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ (ಐಟಿ) ಮನವಿ ಮಾಡಿತ್ತು. ಈ ಮನವಿಯನ್ನು ಪರಿಗಣಿಸಿದ ಸೆಷನ್ಸ್ ಕೋರ್ಟ್, “ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಬೇಕು”ಎಂದು ಮಹತ್ವದ ಆದೇಶ ನೀಡಿದೆ.
ಈ ನಡುವೆ, ಇಂದಿನ ವಿಚಾರಣೆಗೆ ಮುಖ್ಯ ಎಸ್‌ಪಿಪಿ ಪ್ರಸನ್ನ ಕುಮಾರ್ ಗೈರುಹಾಜರಾಗಿದ್ದರು. ಪವಿತ್ರಾಗೌಡ ಪರ ವಕೀಲ ಬಾಲನ್ ಅವರು, ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡುವಲ್ಲಿ ಆಯ್ಕೆ–ಪಿಟಿಕೆ ನಡೆಯಬಾರದು, ಕ್ರಮಾಂಕದಂತೆ ಎಲ್ಲ ಸಾಕ್ಷಿಗಳನ್ನು ಒಂದರ ನಂತರ ಒಂದು ಕರೆಸಬೇಕು ಎಂದು ಕೋರ್ಟ್‌ಗೆ ಮನವಿ ಸಲ್ಲಿಸಿದರು. ಇದಕ್ಕೆ ನ್ಯಾಯಾಧೀಶರು “ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿಗಳು ಖುದ್ದಾಗಿ ಹಾಜರಾಗಬೇಕಾ?” ಎಂದು ಪ್ರಶ್ನಿಸಿದರು. ಅದಕ್ಕೆ ವಕೀಲ ಬಾಲನ್ ಅವರು “ಅಗತ್ಯವಿದ್ದರೆ ನಾವು ಅವರಿಗೆ ಹಾಜರು ಮಾಡುತ್ತೇವೆ" ಎಂದು ತಿಳಿಸಿದರು.
ಎಎಸ್ಪಿಪಿ ಸಚಿನ್ ಅವರು ಸಾಕ್ಷಿಗಳ ಸಂಪೂರ್ಣ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದರು. ಜಗದೀಶ್, ಅನುಕುಮಾರ್ ಪರ ವಕೀಲ ರಂಗನಾಥ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿ, ಪ್ರಾಸಿಕ್ಯೂಷನ್ ಪಿಕ್ ಅಂಡ್ ಚೂಸ್ ಮಾಡಿ ಸಮನ್ಸ್ ಗೆ ಮನವಿ ಮಾಡುತ್ತಿರುವುದು ಸರಿಯಲ್ಲ. ಆರ್ಡರ್ ವೈಸ್ ನಲ್ಲಿ ಸಾಕ್ಷಿಗಳನ್ನ ಕರೆಸಬೇಕು. ಯಾವ ಸಾಕ್ಷಿ ಕರೆಸಬೇಕು, ಯಾರನ್ನ ಕರೆಸಬಾರದು ಅನ್ನೋದು ಕೋರ್ಟ್ ವಿವೇಚನೆಯಲ್ಲಿದೆ. ಪ್ರಾಸಿಕ್ಯೂಷನ್ ಯಾವ ಸಾಕ್ಷಿ ಹೇಳಿಕೆ ಪಡೆಯಬೇಕು, ಪಡೆಯಯಬಾರದು ಅನ್ನೋದನ್ನ ನಿರ್ಧರಿಸಲು ಅವಕಾಶ ಇಲ್ಲ ಎಂದಿತು. ವಿಚಾರಣೆ 17ಕ್ಕೆ ಮುಂದೂಡಿಕೆ ಮಾಡಿ ಆರೋಪಿಗಳ ಹಾಜರಾತಿಗೆ ಸೂಚನೆ ನೀಡಿತು.
ಆರೋಪಿ ಲಕ್ಷ್ಮಣ್ ಎಲ್ಲಾ ಆರೋಪಿಗಳ ಪರ ಮನವಿ ಮಾಡಿ, ರೂಮಿನಲ್ಲಿ ಮೈಂಡ್ ಅಪ್ಸೆಟ್ ಆಗಿದೆ. ರೂಂನಲ್ಲಿ ಒಂದು ಟಿವಿ ಹಾಕಿಸಿ ಕೊಡುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ಜಡ್ಜ್ ನಿರ್ದೇಶನ ನೀಡುತ್ತೇನೆ ಎಂದಿದ್ದಾರೆ. ಹೀಗಾಗಿ ದರ್ಶನ್ ಗೆ ಕೊನೆಗೂ ಟಿವಿ ಸೌಲಭ್ಯ ಇದೆ. ಟಿವಿ ನೀಡುವಂತೆ ಲಕ್ಷ್ಮಣ್ ಮನವಿಗೆ ಪೂರಕವಾಗಿ ಕೋರ್ಟ್ ಸ್ಪಂದಿಸಿದ್ದು, ಜೈಲು ಅಧಿಕಾರಿಗೆ ಸೂಚನೆ ನೀಡುವುದಾಗಿ ಜಡ್ಜ್ ಹೇಳಿದ್ದಾರೆ.
ರೇಣುಕಾಸ್ವಾಮಿ ತಂದೆ ತಾಯಿಗೆ CW 7&8ಗೆ ಸಮನ್ಸ್ ಜಾರಿ ಮಾಡಲಾಗಿದೆ. ಡಿಸೆಂಬರ್ 17ಕ್ಕೆ ರೇಣುಕಾಸ್ವಾಮಿ ತಂದೆ ತಾಯಿ ಹಾಜರಾಗಿ ಸಾಕ್ಷಿ ನುಡಿಯಲಿದ್ದಾರೆ. ಎಎಸ್ಪಿಪಿ ಸಚಿನ್ ಇಂದಿನ ಎಲ್ಲಾ 272 ಸಾಕ್ಷಿಗಳ ಲಿಸ್ಟ್ ನೀಡಿದ್ದು, ಎಲ್ಲಾ ಸಾಕ್ಷಿಗಳಿಗೂ ಸಮನ್ಸ್ ಜಾರಿ ಮಾಡಿ ಕೋರ್ಟ್ ಹೇಳಿಕೆ ದಾಖಲಿಸಲಿದೆ. ಪ್ರಕ್ರಿಯೆಯಂತೆ ಕ್ರಮಾಂಕದಂತೆ ಒಬ್ಬರಾದ ಮೇಲೊಬ್ಬರಂತೆ ಸಾಕ್ಷಿಗಳಿಗೆ ಸಮನ್ಸ್ ನೀಡುವಂತೆ ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿದರು. ಮೊದಲು ದೂರುದಾರನಿಗೆ ಬಳಿಕ ಇತರರಿಗೆ ಸಮನ್ಸ್ ನೀಡಲು ಮನವಿ. ರೇಣುಕಾಸ್ವಾಮಿ ತಂದೆ ತಾಯಿಗೆ ಸಮನ್ಸ್ ಗೆ ದರ್ಶನ್ ಪರ ವಕೀಲ ಸುನಿಲ್ ಆಕ್ಷೇಪ ವ್ಯಕ್ತಪಡಿಸಿದರು. ಯಾರಿಗೆ ಸಮನ್ಸ್ ಜಾರಿ ಮಾಡಬೇಕು ಎಂಬ ಬಗ್ಗೆ ನಾಳೆ ಕೋರ್ಟ್ ಆದೇಶ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ