ದರ್ಶನ್‌ಗೆ ಭಯ ಹುಟ್ಟಿಸಿದ ಮಾಫಿ ಸಾಕ್ಷಿ, 11 ಪುಟಗಳ ಅರ್ಜಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಭಯಾನಕ ಮಾಹಿತಿ ಇದು!

Published : Aug 10, 2026, 01:58 PM IST
pradosh darshan renukaswamy case

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಮತ್ತು ದರ್ಶನ್ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಜೂನ್ 8 ರಂದು ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಸಂಪೂರ್ಣ ಘಟನಾವಳಿ, ದರ್ಶನ್ ಮತ್ತು ಇತರ ಆರೋಪಿಗಳು ನಡೆಸಿದ ಭೀಕರ ಹಲ್ಲೆಯ ವಿವರಗಳನ್ನು ತನ್ನ ಅರ್ಜಿಯಲ್ಲಿ ಆತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ನಟ ದರ್ಶನ್ ತೂಗುದೀಪ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಬಹುದೊಡ್ಡ ತಿರುವು ಸಿಕ್ಕಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ದರ್ಶನ್‌ ಅವರ ಆಪ್ತ ಸ್ನೇಹಿತ ಪ್ರದೋಷ್, ಪ್ರಕರಣದಲ್ಲಿ ತಮಗೆ ಪಶ್ಚಾತ್ತಾಪ ಉಂಟಾಗಿದ್ದು, ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧರಿರುವುದಾಗಿ ತಿಳಿಸಿ 'ಮಾಫಿ ಸಾಕ್ಷಿ' (ಅಪ್ರೂವರ್) ಆಗಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 59ನೇ ಸಿಸಿಎಚ್ ಕೋರ್ಟ್‌ಗೆ ಸಲ್ಲಿಸಲಾಗಿರುವ ಒಟ್ಟು 11 ಪುಟಗಳ ಸುದೀರ್ಘ ಅರ್ಜಿಯಲ್ಲಿ, ಘಟನೆ ನಡೆದ ದಿನದ ಪಿನ್ ಟು ಪಿನ್ ವಿವರಣೆ ಹಾಗೂ ಕೊಲೆ ನಡೆದ ಸ್ಥಳದಲ್ಲಿದ್ದ ಇತರ ಆರೋಪಿಗಳ ಭೀಕರ ಕೃತ್ಯಗಳನ್ನು ಪ್ರದೋಷ್ ಉಲ್ಲೇಖಿಸಿದ್ದಾನೆ.

ಜೂನ್ 8ರ ಘಟನಾವಳಿ:

2003ರಲ್ಲಿ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುವಾಗ ದರ್ಶನ್ ಅವರ ಪರಿಚಯವಾಗಿತ್ತು. ಅಲ್ಲಿಂದ ಸ್ನೇಹ ಬೆಳೆಯಿತು. ದರ್ಶನ್ ಅವರ ಮನೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ ಎಂದು ಪ್ರದೋಷ್ ತಿಳಿಸಿದ್ದಾನೆ. 2024ರ ಜೂನ್ 8ರಂದು ಬೆಳಗ್ಗೆ ದರ್ಶನ್ ನಿವಾಸಕ್ಕೆ ತೆರಳಿದ್ದೆ. ಅಲ್ಲಿ ಅವರು ಜಿಮ್‌ನಲ್ಲಿ ತನ್ನ ಟ್ರೈನರ್ ಜೊತೆಗೆ ವರ್ಕ್ಔಟ್‌ ಮಾಡುತ್ತಿದ್ದರು. ಸ್ವಲ್ಪ ಸಮಯ ಅವರ ಜೊತೆಗೆ ಕಳೆದೆ. ಮನೆಗೆ ಹೊರಡುವ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಒಂದು ಪಾರ್ಟಿ ಇದೆ. ಆರೋಪಿ ಸಂಖ್ಯೆ 10 ವಿನಯ್ ಒಡೆತನದ 'ಸ್ಟೋನಿ ಬ್ರೂಕ್ಸ್' ರೆಸ್ಟೋರೆಂಟ್‌ಗೆ ಹೋಗೋಣ ಎಂದರು. ಹೀಗಾಗಿ ಮಧ್ಯಾಹ್ನ ಸುಮಾರು 12:30 ಕ್ಕೆ ರೆಸ್ಟೋರೆಂಟ್‌ಗೆ ತಲುಪಿದೆವು. ರೆಸ್ಟೋರೆಂಟ್ ತಲುಪಿದ ತಕ್ಷಣ ರೆಸ್ಟೋರೆಂಟ್ ಮಾಲೀಕರಾದ ವಿನಯ್ ಮತ್ತು ಕನ್ನಡ ಚಿತ್ರನಟ ಯಶಸ್ ಸೂರ್ಯ ಈಗಾಗಲೇ ಅಲ್ಲಿದ್ದರು. ಅಲ್ಲಿಂದ ಮಹಡಿಗೆ ಹೋಗಿ ದರ್ಶನ್, ನಾಗರಾಜ್, ಯಶಸ್ ಸೂರ್ಯ ಮತ್ತು ವಿನಯ್ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ ನಟ ಚಿಕ್ಕಣ್ಣ ಕೂಡ ರೆಸ್ಟೋರೆಂಟ್‌ಗೆ ಬಂದರು. ಸ್ವಲ್ಪ ಸಮಯದ ನಂತರ, ಮಧ್ಯಾಹ್ನ ಸುಮಾರು 3 ಗಂಟೆಗೆ, ಪವಿತ್ರಾ ಗೌಡ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಎಂಬ ವ್ಯಕ್ತಿ ರೆಸ್ಟೋರೆಂಟ್‌ಗೆ ಬಂದನು. ಆತ ದರ್ಶನ್ ಅವರ ಕಿವಿಯಲ್ಲಿ ಏನನ್ನೋ ಪಿಸುಗುಡುತ್ತಾ ತಮ್ಮ ಮೊಬೈಲ್ ಫೋನ್‌ನಲ್ಲಿ ಏನನ್ನೋ ತೋರಿಸಿ ನಂತರ ಅಲ್ಲಿಂದ ಹೊರಟುಹೋದನು.

ತದನಂತರ, ದರ್ಶನ್ ಪವಿತ್ರಾ ಗೌಡ ಅವರಿಗೆ ಕರೆ ಮಾಡಿ ಊಟ ಬಂದಿದೆಯೇ ಎಂದು ಕೇಳಿದರು. ನೀನು ಊಟ ಮಾಡು, ಬೇಸರ ಮಾಡಿಕೊಳ್ಳಬೇಡ, ನಾನು ಇಲ್ಲಿದ್ದೇನೆ ಎಂದು ದರ್ಶನ್ ಪವಿತ್ರಾಗೆ ಹೇಳಿದರು ಈ ಸಂಭಾಷಣೆಯನ್ನು ನಾನು ಆಲಿಸಿದ್ದೆ ಎಂದು ಪ್ರದೋಷ್ ಹೇಳಿದ್ದಾನೆ. ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಪ್ರತ್ಯೇಕವಾಗಿ ಅಲ್ಲಿಂದ ತೆರಳಿದರು. ನಂತರ ದರ್ಶನ್ ಹೇಳಿದಂತೆ ಸಂಜೆ ಸುಮಾರು 4:30 ಕ್ಕೆ ಪವಿತ್ರಾ ಗೌಡ ಮನೆಗೆ ಕಾರಿನಲ್ಲಿ ಹೋದೆವು. ಪವಿತ್ರಾ ಗೌಡ ಮನೆಯಿಂದ ಕೆಳಗೆ ಬಂದರು ಮತ್ತು ದರ್ಶನ್ ಕಾರಿನಿಂದ ಇಳಿದು ವಿನಯ್ ಅವರಿಗೆ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಅದರಂತೆ ದರ್ಶನ್ ಮತ್ತು ಪವಿತ್ರಾ ಗೌಡ ಹಿಂಭಾಗದ ಸೀಟಿನಲ್ಲಿ ಕುಳಿತರೆ, ವಿನಯ್ ಮುಂಭಾಗದಲ್ಲಿ ಕುಳಿತರು. ವಿನಯ್ ಸೂಚನೆ ನೀಡಿದಂತೆ ಡ್ರೈವರ್ ಸೀಟಿನಲ್ಲಿದ್ದ ಪ್ರದೋಷ್ ಕಾರನ್ನು ಚಲಾಯಿಸಿದ್ದರಂತೆ. ಎಲ್ಲರೂ ಒಂದೇ ಕಾರಿನಲ್ಲಿ ರಾಜರಾಜೇಶ್ವರಿ ದೇವಸ್ಥಾನದ ಮಾರ್ಗವಾಗಿ ಪಟ್ಟಣಗೆರೆಯ ಶೆಡ್‌ಗೆ ಬಂದಿಳಿದಿದ್ದರು.

ಶೆಡ್‌ನಲ್ಲಿ ನಡೆದ ಹಲ್ಲೆ ಹಾಗೂ ಭೀಕರ ಕೃತ್ಯ:

ಶೆಡ್‌ಗೆ ಪ್ರವೇಶಿಸಿದಾಗ ಸುಮಾರು 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದನು. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಸೇರಿದಂತೆ ಇತರರು ನೆರೆದಿದ್ದರು. ದರ್ಶನ್ ತಕ್ಷಣವೇ ರೇಣುಕಾಸ್ವಾಮಿಯನ್ನು ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿ, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಮತ್ತು ಖಾಸಗಿ ಅಂಗಗಳ ಫೋಟೋ ಕಳುಹಿಸಿದ್ದಕ್ಕಾಗಿ ತೀವ್ರ ಹಲ್ಲೆ ನಡೆಸಿದರು. ನನ್ನ ಹೆಂಡತಿಗೆ ಅಂತಹ ಮೆಸೇಜ್ ಏಕೆ ಕಳುಹಿಸಿದೆ? ಎಂದು ದರ್ಶನ್ ಹಲ್ಲೆ ನಡೆಸಿದ್ದಾನೆ. ರೇಣುಕಾಸ್ವಾಮಿಯ ತಲೆಯಿಂದ ರಕ್ತ ಬರುತ್ತಿದ್ದುದನ್ನು ಕಂಡು, ಆತ ಸತ್ತು ಹೋಗಬಹುದು ಹಲ್ಲೆ ನಿಲ್ಲಿಸುವಂತೆ ತಾವು ಮನವಿ ಮಾಡಿದರೂ ಯಾರೂ ಕೇಳಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ತಿಳಿಸಿದ್ದಾನೆ.

ಬಳಿಕ ದರ್ಶನ್ ಸೂಚನೆಯಂತೆ ಪವಿತ್ರಾ ಗೌಡರನ್ನು ರೇಣುಕಾಸ್ವಾಮಿ ಬಳಿಗೆ ಕರೆದುಕೊಂಡು ಹೋಗಿ, ಅವರಿಂದ ಚಪ್ಪಲಿಯಿಂದ ಹೊಡೆಸಲಾಯಿತು. ನಂತರ ಪವಿತ್ರಾ ಗೌಡರನ್ನು ಕಾರಿನಲ್ಲಿ ಕೂರಿಸಿ, ರೇಣುಕಾಸ್ವಾಮಿಯ ಉಡುಪುಗಳನ್ನು ಬಿಚ್ಚಿ ಕೇವಲ ಒಳಉಡುಪಿನಲ್ಲಿ ನಿಲ್ಲಿಸಲಾಯಿತು. ಆರೋಪಿ ನಂದೀಶ್ ರೇಣುಕಾಸ್ವಾಮಿಯನ್ನು ಎತ್ತಿ 'ಟಾಟಾ ಏಸ್' ವಾಹನಕ್ಕೆ ನೇಣು ಹಾಕಲು ಯತ್ನಿಸಿದನು. ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್ ಮತ್ತು ಪವನ್ ಮರದ ಕೋಲುಗಳಿಂದ ಬಾರಿಸಿದರು. ದರ್ಶನ್ ಕೂಡ ನೈಲಾನ್ ಹಗ್ಗದಿಂದ 3-4 ಬಾರಿ ತೀವ್ರವಾಗಿ ಹೊಡೆದರು.

ಬಳಿಕ ಊಟ ತರಿಸಿ ರೇಣುಕಾಸ್ವಾಮಿಗೆ ಕೊಡಲಾಗಿತ್ತು. ಊಟ ಮಾಡುತ್ತಿದ್ದಾಗ ಎದುರುಗಡೆ ದರ್ಶನ್ ಚಯರ್ ಹಾಕಿ ಕುಳಿತಿದ್ದ, ಈ ವೇಳೆ ಪವನ್, ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ 'ಗೌತಮ್' ಎಂಬ ಇನ್‌ಸ್ಟಾಗ್ರಾಂ ಪ್ರೊಫೈಲ್ ಸಂದೇಶಗಳನ್ನು ಗಟ್ಟಿಯಾಗಿ ಓದುತ್ತಿದ್ದನು. ಅದರಲ್ಲಿ ಹಲವು ಮಹಿಳೆಯರಿಗೆ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ನೋಡಿ ಆಕ್ರೋಶಗೊಂಡ ದರ್ಶನ್, ಸಂದೇಶಗಳ ಆಧಾರದ ಮೇಲೆ ದರ್ಶನ್ ಮತ್ತೆ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದಾರೆ. ರೇಣುಕಾಸ್ವಾಮಿಯ ಒಳಉಡುಪನ್ನೂ ತೆಗೆಸಿ ಅವರ ಖಾಸಗಿ ಅಂಗಕ್ಕೆ ಹಲವು ಬಾರಿ ಒದ್ದರು. ಈ ವೇಳೆ ರೇಣುಕಾಸ್ವಾಮಿ ಕುತ್ತಿಗೆ ವಾಲಿ ಆತ ಕೆಳಗೆ ಬಿದ್ದನು. ನಂತರ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆಗೆ ಸತತವಾಗಿ ತುಳಿದರು. ಸಂಜೆ 5:30ರ ಸುಮಾರಿಗೆ ದರ್ಶನ್ ಮತ್ತು ವಿನಯ್ ಸ್ಥಳದಿಂದ ನಿರ್ಗಮಿಸಿದರು.

ಸಾವು, ಸರೆಂಡರ್ ಹೈಡ್ರಾಮಾ & ಬೆದರಿಕೆ:

ಗಂಭೀರವಾಗಿ ಗಾಯಗೊಂಡ ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಮತ್ತಿತರರನ್ನು ಸ್ಥಳದಲ್ಲೇ ಉಳಿಯುವಂತೆ ಹೇಳಲಾಗಿತ್ತು. ರೇಣುಕಾಸ್ವಾಮಿ ಮೃತಪಟ್ಟ ವಿಷ್ಯವನ್ನು ಹೇಳಲು ಬಾಸ್‌ ಗೆ ಹೇಳಲು ಭಯವಾಗುತ್ತಿದೆ ಎಂದು ಲಕ್ಷ್ಮಣ್ ಪ್ರದೋಷ್ ಗೆ ಹೇಳಿದ್ದ. ಹೀಗಾಗಿ ರೇಣುಕಾಸ್ವಾಮಿ ಮೃತಪಟ್ಟ ವಿಷಯ ದರ್ಶನ್‌ಗೆ ತಿಳಿಸಿದ್ದು ಪ್ರದೋಷ್ ಇದನ್ನು ಕೇಳಿ ಆಘಾತಕ್ಕೊಳಗಾದ ದರ್ಶನ್, ತಮ್ಮ ಬಳಿಯಿದ್ದ ಗನ್‌ನಿಂದ ಆತ್ಮHತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ತಮ್ಮನ್ನು ಈ ಪ್ರಕರಣದಿಂದ ಪಾರು ಮಾಡಲು ಸಹಾಯ ಕೋರಿದರು. ತಕ್ಷಣವೇ ಇನ್ಸ್‌ಪೆಕ್ಟರ್ ಒಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ, ಪ್ರಕರಣ ಗಂಭೀರವಾಗಿರುವುದರಿಂದ ಆರೋಪಿಗಳನ್ನು ಶರಣಾಗುವಂತೆ ಮಾಡಲು ಸೂಚಿಸಲಾಯಿತು.

ಬಳಿಕ ರಾಘವೇಂದ್ರ, ನಂದೀಶ್ ಮತ್ತು ಪವನ್ ಪೊಲೀಸರ ಮುಂದೆ ಶರಣಾಗಲು ಒಪ್ಪಿಕೊಂಡರು. ಮೃತದೇಹವನ್ನು 'ಸತ್ವ' ಅಪಾರ್ಟ್‌ಮೆಂಟ್ ಬಳಿ ಎಸೆದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾದರು. ಇದೇ ವೇಳೆ, ಶೆಡ್‌ನ ಹೆಸರು ಬಹಿರಂಗಪಡಿಸದಂತೆ ಮತ್ತೊಬ್ಬ ಆರೋಪಿ ವಿನಯ್ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಪ್ರದೋಷ್ ಉಲ್ಲೇಖಿಸಿ ಆರೋಪಿಸಿದ್ದಾನೆ.

ಇತರ ಆರೋಪಿಗಳಿಗೆ ಹೆಚ್ಚಿದ ಕಂಟಕ:

ಇದೀಗ ತನಗೆ ಮನಸ್ಸಿನಲ್ಲಿ ತೀವ್ರ ಪಶ್ಚಾತ್ತಾಪ ಉಂಟಾಗಿದ್ದು, ನ್ಯಾಯಾಲಯದ ಮುಂದೆ ಸಂಪೂರ್ಣ ಸತ್ಯವನ್ನು ದಾಖಲಿಸಿ ಮಾಫಿ ಸಾಕ್ಷಿಯಾಗಲು ಸಿದ್ಧವಿರುವುದಾಗಿ ಪ್ರದೋಷ್ ಕೋರಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯ ಆಪ್ತನೊಬ್ಬನೇ ಇಡೀ ಕೊಲೆ ಕೃತ್ಯವನ್ನು ಎಳೆಎಳೆಯಾಗಿ ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿರುವುದು ನಟ ದರ್ಶನ್ ಸೇರಿದಂತೆ ಇತರ ಪ್ರಮುಖ ಆರೋಪಿಗಳಿಗೆ ಕಾನೂನಾತ್ಮಕವಾಗಿ ಬೃಹತ್ ಸಂಕಷ್ಟ ತಂದೊಡ್ಡುವುದು ನಿಶ್ಚಿತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಹೈಕೋರ್ಟ್‌ಗೆ 6 ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ: ನ್ಯಾಯಾಧೀಶರ ಸಂಖ್ಯೆ 54ಕ್ಕೆ ಏರಿಕೆ
ಕರ್ನಾಟಕದ ಎಸ್‌ಸಿ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹1,178.20 ಕೋಟಿ ಬಿಡುಗಡೆ