ಡ್ಯಾಂಗಳಿಂದ ಲಕ್ಷ ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಮುತ್ತತ್ತಿ, ರಂಗನತಿಟ್ಟಿಗೆ ಪ್ರವೇಶ ನಿರ್ಬಂಧ

By Kannadaprabha News  |  First Published Jul 28, 2024, 8:54 AM IST

ಕೊಡಗು, ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿ, ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಿಂದ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. 
 


ಬೆಂಗಳೂರು (ಜು.28): ಕೊಡಗು, ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿ, ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಿಂದ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ. ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ 1.50 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಕಾವೇರಿಗೆ ಬಿಡಲಾಗಿದ್ದು, ಮುತ್ತತ್ತಿಗೆ ಬರುವ ಪ್ರವಾಸಿಗರು, ಭಕ್ತರಿಗೆ ನಿಷೇಧ ಹೇರಲಾಗಿದೆ. ಶ್ರೀರಂಗಪಟ್ಟಣದ ಸ್ನಾನಘಟ್ಟ, ವೆಲ್ಲೆಸ್ಲಿ ಸೇತುವೆ, ನಿಮಿಷಾಂಬದೇವಾಲಯಜಲಾವೃತವಾಗಿದ್ದು, ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಭೀತಿಯಲ್ಲಿದೆ. ಪಕ್ಷಿಧಾಮ, ಬೃಂದಾವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. 

ಜಲಾನಯನ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಪ್ರಸಕ್ತ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟುಗಳನ್ನು ತೆರೆದು ನದಿಗೆ 1.41 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ನದಿ ಪಾತ್ರದ ಸುತ್ತಮುತ್ತಲಿನ 100 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಆ.10ರ ವರೆಗೆ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಪ್ರವಾಹದಿಂದ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ, ಸಮೀಪದ ಶಿವಪುರ ಗ್ರಾಮದ 500 ವರ್ಷ ಇತಿಹಾಸವಿರುವ ಪ್ರಸಿದ್ಧ ಮಾರ್ಕೆಂಡೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಗಂಗಾವತಿ ತಾಲೂಕಿನ ಆನೆಗೊಂದಿಯ ನವ ವೃಂದಾವನ ಶ್ರೀಕೃಷ್ಣದೇವರಾಯ ಸಮಾಧಿ (60 ಕಾಲಿನ ಮಂಟಪ) ಜಲಾವೃತಗೊಂಡಿವೆ. 

Tap to resize

Latest Videos

ವಿಜಯೇಂದ್ರ ಒಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಹಗರಣ ಶೀಘ್ರ ಬಹಿರಂಗ: ಡಿಕೆಶಿ ಘೋಷಣೆ

ಹಂಪಿಯ ಪುರಂದರದಾಸರ ಮಂಟಪ, ರಘುನಂದನ ತೀರ್ಥರ ಬೃಂದಾವನ, ಸಾಲು ಮಂಟಪ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿಲಿಂಗ ಸ್ಮಾರಕಗಳು ಜಲಾವೃತವಾಗಿವೆ. ತಳವಾರಘಟ್ಟಸೇತುವೆಯಿಂದ ಆನೆಗೊಂದಿ, ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಬೋಟಿಂಗ್ ಸೇವೆ ಸ್ಥಗಿತಗೊಂಡಿದೆ. ಹಂಪಿಯ ಚಕ್ರತೀರ್ಥದ ಬಳಿ ಹರಿಗೋಲು ಕೂಡ ಬಂದ್ ಮಾಡಲಾಗಿದೆ. ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 30 ಗೇಟುಗಳ ಮುಖಾಂತರ 3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ರಾಯಚೂರು- ಯಾದಗಿರಿ- ಕಲಬುರಗಿ ಜಿಲ್ಲೆಗಳ ಸಂಪರ್ಕಿಸುವ ಸಂಚಾರ ಸ್ಥಗಿತಗೊಂಡಿದೆ.

ಯಾದಗಿರಿ ಜಿಲ್ಲೆಯ ಸುಮಾರು 45 ಹಳ್ಳಿಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ಪುರಾಣ ಪ್ರಸಿದ್ದ ಛಾಯಾ ಭಗವತೀ ಗರ್ಭಗುಡಿಗೆ ನೀರು ನುಗ್ಗಿದೆ. ಸುರಪುರದ ಕಕ್ಕೇರಾ ಸಮೀಪದ, ಕೃಷ್ಣಾ ನದಿಯನಡುಗಡ್ಡೆ ನೀಲಕಂಠರಾ ಯನಗಡ್ಡೆಯಿಂದ ಗರ್ಭಿಣಿಯರು, ವಯೋವೃದ್ದರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಬೆಳ್ತಂಗಡಿ ಸಮೀಪ ಅಣಿಯೂರುನದಿಯಲ್ಲಿ ಕಾರೊಂದು ನೀರಿನಲ್ಲಿ ಮುಳುಗಿದ್ದು, ಅದರಲ್ಲಿದ್ದ ಐವರನ್ನು ಸ್ಥಳೀ ಯರು ರಕ್ಷಿಸಿದ್ದಾರೆ. ಮಳೆಗೆ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಮುಳುಗಡೆಯಾಗಿದೆ. ಭಾಗ ಮಂಡಲ ನಾಪೋಕ್ಲು ರಸ್ತೆ ಮೇಲೂ ಹರಿಯುತ್ತಿದೆ. ಮಡಿಕೇರಿ ತಾಲೂಕಿನ ಕೊಟ್ಟಮುಡಿ ಜಂಕ್ಷನ್ ನಲ್ಲಿ ಪ್ರವಾಹದ ನೀರಿನಲ್ಲೇ ನಾಲ್ಕು ವಾಹನಗಳು ಸಿಲುಕಿವೆ. 

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಆಗಿಲ್ಲ: ಸಂಸದ ಬೊಮ್ಮಾಯಿ

ಮುಂದುವರಿದ ಭೂಕುಸಿತ: ಮಳೆಗೆ ಅಲ್ಲಲ್ಲಿ ಭೂಕುಸಿತ ಗಳು ಉಂಟಾಗಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಶಿರಾಡಿ ಘಾಟ್ ಪ್ರದೇಶದಲ್ಲಿ ಗಡಿ ದೇವಸ್ಥಾನದ ಮೇಲ್ಬಾಗದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲೊಂದು ಬೆಟ್ಟದಿಂದ ಕುಸಿದು ಹೆದ್ದಾರಿಗೆ ಬಿದ್ದಿದೆ. ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿಯೂ ಗುಡ್ಡ ಕುಸಿದಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ್ದು, ಬೆಂಗಳೂರು-ಮಂಗಳೂರು ಮಾರ್ಗದ ಹಲವು ರೈಲುಗಳ ಪ್ರಯಾಣವನ್ನು ರದ್ದುಪಡಿಸಲಾಗಿದೆ. ಕೆಲವು ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.

click me!