
ಬೆಂಗಳೂರು(ಜು.10): ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿದ ಬಳಿಕ ರಾಜ್ಯದ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಲ್ಲಿ ಕಂಡುಬರುತ್ತಿದ್ದ ಮಹಿಳೆಯರ ದಟ್ಟಣೆ ಈ ವಾರ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದ ಬಹುತೇಕ ಧಾರ್ಮಿಕ, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಮಹಿಳಾ ಪ್ರವಾಸಿಗರು ಕಂಡುಬಂದಿಲ್ಲ.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಹಾಗೂ ಹುಲಿಗೆಮ್ಮಾ ದೇವಸ್ಥಾನಗಳಲ್ಲಿ ‘ಶಕ್ತಿ’ ಯೋಜನೆ ಘೋಷಣೆಯಾದ ಬಳಿಕ ಈ ಶನಿವಾರ ಮತ್ತು ಭಾನುವಾರ ಪ್ರವಾಸಿಗರ ಸಂಖ್ಯೆ ತಗ್ಗಿದ್ದು ಕಂಡು ಬಂತು. ಅಂಜನಾದ್ರಿಗೆ ಕಳೆದ ವಾರ ಸುಮಾರು 40 ಸಾವಿರ ಭಕ್ತರು ಆಗಮಿಸಿದ್ದರೆ, ಈ ವಾರ ಭಕ್ತರ ಸಂಖ್ಯೆ 15 ಸಾವಿರದಷ್ಟಿತ್ತು. ಹುಲಿಗೆಮ್ಮಾ ದೇವಸ್ಥಾನಕ್ಕೆ ಬಂದ ಭಕ್ತರ ಸಂಖ್ಯೆಯೂ 15 ಸಾವಿರಷ್ಟಿತ್ತು. ಕಳೆದ ವಾರ ಸುಮಾರು 1 ಲಕ್ಷ ಭಕ್ತರು ಇಲ್ಲಿಗೆ ಆಗಮಿಸಿದ್ದರು.
ಶಕ್ತಿ ಯೋಜನೆ ಆರಂಭದಲ್ಲೇ ಅಕ್ರಮದ ವಾಸನೆ: ಪ್ರಯಾಣಿಕರ ದಿಢೀರ್ ಏರಿಕೆ ಹಿಂದಿದೆಯಾ ಗೋಲ್‌ಮಾಲ್?
ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ, ಅಲುಮೇಲುರಂಗನಾಯಕಿ ಅಮ್ಮನವರಿಗೆ ಆಷಾಢ ಮಾಸದ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರೆ ಶುಭ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಿಳಿಗಿರಿಗೆ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದಾಗಿ ಭಕ್ತರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸೀಟು ಸಿಗದೆ ಪರದಾಡಿದರು. ಬಸ್ಸಿಲ್ಲದೆ ಖಾಸಗಿ ಬಸ್, ಟೆಂಪೋ, ಕಾರುಗಳಿಗೆ ಮೊರೆ ಹೋಗುವ ಸ್ಥಿತಿ ಉಂಟಾಯಿತು. ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನ ದರ್ಶನಕ್ಕೂ ನೂಕು ನುಗ್ಗಲು ಉಂಟಾಯಿತು. ಆದರೆ, ಕೆಎಸ್‌ಆರ್‌ಟಿಸಿ, ಕಳೆದ ವಾರದಂತೆ ಈ ವಾರ ಹೆಚ್ಚುವರಿ ಬಸ್ಸುಗಳನ್ನು ಬಿಟ್ಟಿರಲಿಲ್ಲ.
ನಿರಂತರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಜೋಗ್ಫಾಲ್ಸ್ ಧುಮ್ಮಿಕ್ಕುತ್ತಿದ್ದು, ಇದರ ಸೊಬಗು ಸವಿಯಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಮಧ್ಯೆ, ಮಳೆ ಹಾಗೂ ಬಿತ್ತನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಬಹುತೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಈ ವಾರಾಂತ್ಯ ಕಡಿಮೆಯಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ