ಕರ್ನಾಟಕದಲ್ಲಿ ವರುಣನ ಆರ್ಭಟ: ಕರಾವಳಿಗೆ ರೆಡ್‌ ಅಲರ್ಟ್‌ ದ.ಕ., ಉಡುಪಿ, ಇಂದು ಭಾರೀ ಮಳೆ

Published : Jul 07, 2022, 02:00 AM IST
ಕರ್ನಾಟಕದಲ್ಲಿ ವರುಣನ ಆರ್ಭಟ: ಕರಾವಳಿಗೆ ರೆಡ್‌ ಅಲರ್ಟ್‌  ದ.ಕ., ಉಡುಪಿ, ಇಂದು ಭಾರೀ ಮಳೆ

ಸಾರಾಂಶ

*  20 ಸೆಂಮೀ ಮೀರುವ ಭೀತಿ *  6 ಜಿಲ್ಲೆಗಳ ಹಲವೆಡೆ ಶಾಲೆ ರಜೆ *  ಉ.ಕರ್ನಾಟಕದಲ್ಲೂ ಮಳೆ ಬಿರುಸು  

ಬೆಂಗಳೂರು(ಜು.07):  ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿದ್ದರೂ ನಿರಂತರ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬುಧವಾರ ರೆಡ್‌ ಅಲರ್ಟ್‌ ಘೋಷಣೆಯಾಗಿದ್ದು ಉತ್ತರ ಕನ್ನಡದಲ್ಲೂ ಆರೆಂಜ್‌ ಅಲರ್ಚ್‌ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೂರೂ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ.

ಇದರೊಂದಿಗೆ ಕೊಡಗು, ಹಾಸನ, ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲೂ ಮಳೆ ಮುಂದುವರಿದಿದ್ದು ಕೊಡಗಿನ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸ, ಎನ್‌.ಆರ್‌.ಪುರ, ಮೂಡಿಗೆರೆ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ರಾಜ್ಯದ ಹಲವೆಡೆ ವರುಣನ ಅರ್ಭಟ: ಚಿತ್ರದುರ್ಗದಲ್ಲಿ ಮಳೆಯಿಲ್ಲದೇ ಅನ್ನದಾತ ಕಂಗಾಲು..!

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೂ 4 ದಿನಗಳ ಕಾಲ ಗಾಳಿಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, 20.45 ಸೆಂ.ಮೀ. ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಗೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 4 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 81 ವಿದ್ಯುತ್‌ ಕಂಬಗಳು ಮುರಿದಿವೆ. ಜೊತೆಗೆ ಉಳ್ಳಾಲದ ಉಚ್ಚಿಲ ಸೀಗ್ರೌಂಡಿನಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಅನೇಕ ಮನೆಗಳು ಅಪಾಯದ ಅಂಚಿನಲ್ಲಿವೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ಬುಧವಾರವೂ ನೀರಿನ ಹರಿವು ಕಡಿಮೆಯಾಗಿರಲಿಲ್ಲ. ಕೋಟ ಸಮೀಪದ ಹತ್ತಾರು ಮನೆಗಳು ಜಲಾವೃತವಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ರಕ್ಷಣಾ ಕಾರ್ಯ ನಡೆಸಿ, ಅಲ್ಲಿನ ಜನರನ್ನು ಸ್ಥಳಾಂತರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ಧಾಪುರ, ಕುಮಟಾ, ಭಟ್ಕಳಗಳಲ್ಲಿ ಸಂಜೆಯಿಂದ ಭಾರಿ ಮಳೆಯಾಗುತ್ತಿದೆ. ಗಂಗಾವಳಿ ನದಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಬೋಟ್‌ನಿಂದ ಐವರನ್ನು ರಕ್ಷಿಸಲಾಗಿದೆ. ಯಲ್ಲಾಪುರದಲ್ಲಿ ಭಾರಿ ಮಳೆಗೆ ಶಾಲಾ ಆವರಣ ಗೋಡೆ ಕುಸಿದಿದೆ. ಯಲ್ಲಾಪುರ ಹಾಗೂ ಸಿದ್ಧಾಪುರದಲ್ಲಿ ಮಳೆ ಮುಂದುವರಿದಲ್ಲಿ ಗಂಗಾವಳಿ ಹಾಗೂ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಏರಲಿದೆ.

ಇನ್ನು ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡನಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹಠಾತ್ತನೆ ಹಿಡಿದ ಮಳೆಯಿಂದಾಗಿ ಭತ್ತದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಅರಕಲಗೂಡು ತಾಲೂಕಿನ ದುಮ್ಮಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಮನೆಯಲ್ಲಿದ್ದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏತನ್ಮಧ್ಯೆ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಬುಧವಾರವೂ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿಯೂ ಮಳೆ ಮುಂದುವರೆದಿರುವುದರಿಂದ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಆದರೆ ಎಲ್ಲಿಯೂ ಪ್ರವಾಹ ಉಂಟಾಗಿಲ್ಲ. ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲೂ ಮಂಗಳವಾರ ತೀವ್ರವಾಗಿದ್ದ ಮಳೆಯ ಪ್ರಮಾಣ ಬುಧವಾರ ತೀರಾ ಇಳಿಮುಖವಾಗಿದೆ.

ಹೆದ್ದಾರಿ ಟೆಂಟ್‌ಗಳಲ್ಲಿರುವ 25 ಕುಟುಂಬ ಅಪಾಯದಲ್ಲಿ

ಹಾಸನ:ಜಿಲ್ಲೆಯ ಪೈಕಿ ಸಕಲೇಶಪುರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಿಂದ ನೂರಾರು ಕಾರ್ಮಿಕರು ಬಂದಿದ್ದಾರೆ. ಆದರೆ, ಇವರಿಗೆಲ್ಲಾ ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ಸಕಲೇಶಪುರ ತಾಲೂಕಿನ ದೋಣಿಗಾಲ್‌ ಬಳಿ ರಸ್ತೆಬದಿಯಲ್ಲಿ ಟೆಂಟ್‌ ಹಾಕಿಕೊಂಡಿದ್ದಾರೆ. ಗುತ್ತಿಗೆದಾರರು ಕಾರ್ಮಿಕರು ತಂಗಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ಸುಮಾರು 80 ಮಂದಿ ಗುಡ್ಡದ ಕೆಳಗೆ ಟೆಂಟ್‌ ಹಾಕಿಕೊಂಡು ಪ್ರಾಣ ಭಯದಲ್ಲೇ ದಿನ ದೂಡುತ್ತಿದ್ದಾರೆ. ಒಂದು ವೇಳೆ ಗುಡ್ಡವೇನಾದರು ಕುಸಿದಲ್ಲಿ ಭಾರೀ ಅನಾಹುತ ಸಂಭವಿಸಲಿದೆ.

ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ: ರಜೆ ಗೊಂದಲದಿಂದ ಪೋಷಕರಿಗೆ ಸಂಕಷ್ಟ

ಮಂಗಳೂರು-ಮಡಿಕೇರಿ ಹೆದ್ದಾರಿಗೆ ಮತ್ತೆ ಬರೆ ಕುಸಿತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಮಳೆ ಅನಾಹುತ ಮುಂದುವರಿದಿದ್ದು ಮಡಿಕೇರಿ- ಮಂಗಳೂರು ರಾಷ್ಟ್ರೀಯ ರಸ್ತೆಯಲ್ಲಿ ಮತ್ತೆ ಬರೆ ಕುಸಿತ ಉಂಟಾಗಿದೆ. ಹೆದ್ದಾರಿಯ ಕರ್ತೋಜಿ ಎಂಬಲ್ಲಿ ಭಾರಿ ಗಾತ್ರದ ಮಣ್ಣು ಕುಸಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಇದರಿಂದಾಗಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುವಂತಾಗಿದೆ. ಮಳೆ ಹೆಚ್ಚಾದರೆ ಮತ್ತಷ್ಟುಮಣ್ಣು ಕುಸಿದು ಸಂಚಾರ ಬಂದ್‌ ಆಗುವ ಸಾಧ್ಯತೆ ಕಂಡುಬರುತ್ತಿದೆ.

ಮೋಟಮ್ಮ ಸಹೋದರನ ಕಾರಿನ ಮೇಲೆ ಬಿದ್ದ ಮರದ ಕೊಂಬೆ

ಚಿಕ್ಕಮಗಳೂರು: ಮಾಜಿ ಸಚಿವ ಮೋಟಮ್ಮ ಅವರ ಸಹೋದರ ಎಂ.ಎಸ್‌.ಅನಂತ್‌ ಮತ್ತವರ ಕುಟಂಬ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆ ಬಿದ್ದಿರುವ ಘಟನೆ ಹಳೆ ಮೂಡಿಗೆರೆ ಬಳಿ ಬುಧವಾರ ನಡೆದಿದೆ. ಈ ಕಾರಿನಲ್ಲಿ ಮೋಟಮ್ಮ ಅವರ ಸಹೋದರ ಎಂ.ಎಸ್‌.ಅನಂತ್‌ ಹಾಗೂ ಪತ್ನಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!