
ಮೇ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಜೊತೆಗಿನ ಸಾರ್ವಜನಿಕ ಸಭೆಯ ನಂತರ ವಿಪರೀತ ಕೆಮ್ಮು ಕಾಣಿಸಿಕೊಂಡಾಗ ಅನಂತ್ ಕುಮಾರ್ ವೈದ್ಯರ ಹತ್ತಿರ ಹೋಗಿ ಮಾತ್ರೆ ತೆಗೆದುಕೊಂಡು ಬಂದರೂ ಕೆಮ್ಮು ನಿಲ್ಲಲಿಲ್ಲ. ಚುನಾವಣೆ ಮುಗಿಸಿ ಮೇ 25ಕ್ಕೆ ದಿಲ್ಲಿಗೆ ಬಂದು ಏಮ್ಸ್ ಅಸ್ಪತ್ರೆಯಲ್ಲಿ ಚೆಕಪ್ ಮಾಡಿಸಿದಾಗ ಕ್ಯಾನ್ಸರ್ ಎನ್ನುವುದು ತಿಳಿದಿತ್ತು. ಕೂಡಲೇ ಬೆಂಗಳೂರಿಗೆ ಹೋಗಿ ಪತ್ನಿ ತೇಜಸ್ವಿನಿ, ತಮ್ಮ ನಂದಕುಮಾರ್ ಮತ್ತು ಕ್ಯಾನ್ಸರ್ ಸರ್ಜನ್ ಡಾ. ಶ್ರೀನಾಥ್ ಜೊತೆಗೆ ಅಪೋಲೊದಲ್ಲಿ ತೋರಿಸಿದಾಗ ಕ್ಯಾನ್ಸರ್ ಅಡ್ವಾನ್ಸ್ ಸ್ಟೇಜ್‌ನಲ್ಲಿದೆ ಎಂದು ಗೊತ್ತಾಯಿತಂತೆ. ಹಾಗಿದ್ದರೆ ಇನ್ನೆಷ್ಟು ಸಮಯ ಉಳಿದಿದೆ ಎಂದು ಅನಂತ್ ಕೇಳಿದಾಗ ಡಾಕ್ಟರ್ 6 ತಿಂಗಳಿನಿಂದ 1 ವರ್ಷ ಅಂದರಂತೆ. ಮುಕ್ತ ಹವೆಯಲ್ಲಿ ಓಡಾಡಬಾರದು, ಜಾಸ್ತಿ ಮಾತನಾಡಬಾರದು, ಮೆಣಸಿನಕಾಯಿ ಖಾರ ತಿನ್ನಬಾರದು, ಅಡಕೆ ತಿನ್ನಬಾರದು, ಗಂಧದಕಡ್ಡಿ ಹಚ್ಚಿ ಪೂಜೆ ಮಾಡಬಾರದು, ಆದರೆ ಎಸಿ ರೂಂನಲ್ಲಿ ಸಭೆ ಮಾಡಬಹುದು ಎಂದೂ ವೈದ್ಯರು ಹೇಳಿದರಂತೆ. ಆಗ ಹೊರಗಡೆ ಬಂದು ಕೂಡಲೇ ಪತ್ನಿ ಮತ್ತು ತಮ್ಮನಿಗೆ ಸಮಾಧಾನ ಹೇಳಿದ ಅನಂತ್, ‘ಮಕ್ಕಳು ಸೇರಿದಂತೆ ಯಾರಿಗೂ ಕ್ಯಾನ್ಸರ್ ಇದೆ ಅಂತ ಗೊತ್ತಾಗಬಾರದು. ನಾನು ಹೇಳೋದಿಲ್ಲ, ನೀವೂ ಹೇಳಬಾರದು’ ಎಂದು ಭಾಷೆ ತೆಗೆದುಕೊಂಡರು. ನಂತರ ಕೂಡಲೇ ಎದ್ದು ನನಗೆ ಬಿಜೆಪಿ ಕಚೇರಿಯಲ್ಲಿ ಸಭೆ ಇದೆ, ಮುಗಿಸಿ ಬರುತ್ತೇನೆ ಎಂದು ಹೊರಟೇ ಬಿಟ್ಟರಂತೆ.
ಇದನ್ನೂ ಓದಿ: ಅನಂತ್ ಇಲ್ಲದ ಭಾನುವಾರ, ನಿಲ್ಲದ ತೇಜಸ್ವಿನಿ ಹಸಿರು ಸಾಕ್ಷಾತ್ಕಾರ
ಮರುದಿನ ಡಾ. ಶ್ರೀನಾಥ್ ಮನೆಗೆ ಬಂದಾಗ ಮೊದಲ ಒಂದು ಗಂಟೆ ಜನರ ಕೆಲಸ ಮುಗಿಸಿ ಕಳುಹಿಸಿದ ನಂತರ ವೈದ್ಯರನ್ನು ಒಳಗೆ ಕರೆಸಿಕೊಂಡ ಅನಂತ್, ನೀವು ಹೇಳಿದ ಎಲ್ಲಾ ಮಾತ್ರೆ ತೆಗೆದುಕೊಳ್ಳುತ್ತೇನೆ. ಆದರೆ ಜೀವನದ ಕೆಲ ತಿಂಗಳನ್ನು ಮಾತ್ರ ದೇವರು ಕೊಟ್ಟಿರುವಾಗ ಪೂರ್ಣ ಕಾಯಕ ಮಾಡುತ್ತೇನೆ. ಆಮೇಲೆ ಕೈಲಾಸಕ್ಕೆ ಹೋಗುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರಂತೆ. ಯಾರಾದರೂ ಅನಂತ ಕುಮಾರ್ ಅವರಿಗೆ ತೂಕ ಇಳಿದಿದೆಯಲ್ಲ ಎಂದು ಕೇಳಿದರೆ, ‘ಅಯ್ಯೋ ಶ್ವಾಸಕೋಶದಲ್ಲಿ ಸ್ವಲ್ಪ ಸೋಂಕು ಆಗಿತ್ತು. ಅದಕ್ಕಾಗಿ ಪಥ್ಯ ಮಾಡುತ್ತಿದ್ದೇನೆ. ಚಿಂತೆ ಮಾಡಬೇಡಿ 90 ವರ್ಷ ಬದುಕುತ್ತೇನೆ’ ಎಂದು ನಗುತ್ತಲೇ ಹೇಳಿ ಕಳುಹಿಸುತ್ತಿದ್ದರು. ಸ್ಪೀಕರ್ ಸುಮಿತ್ರಾ ಮಹಾಜನ್, ಆರ್‌ಎಸ್‌ಎಸ್ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆ ಭೇಟಿಯಾಗಿ ಕೇಳಿದರೂ ಅನಂತ್ ಕ್ಯಾನ್ಸರ್ ಬಗ್ಗೆ ಯಾರಿಗೂ ಬಾಯಿ ಬಿಟ್ಟಿರಲಿಲ್ಲ. ಗುಟ್ಟಾಗಿ ಇಟ್ಟರು, ಕೊನೆಗೆ ಗುಟ್ಟಾಗಿಯೇ ಹೊರಟು ಹೋದರು.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ