
ಬೆಂಗಳೂರು (ಜೂ.8): ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಗೆಲ್ಲುತ್ತೇವೆ ಎಂದು ಆರ್‌ಸಿಬಿ ತಂಡಕ್ಕೆ ಕನಸು ಬಿದ್ದಿತ್ತಾ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಮದಾಬಾದ್‌ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಇಲ್ಲಿ ನೋಡಿದರೆ ಆರು ಗಂಟೆಗೆಲ್ಲ ವಿಜಯೋತ್ಸವ ಮಾಡುತ್ತೇವೆ, ನಮಗೆ ಅನುಮತಿ ಕೊಡಿ ಪೊಲೀಸರಿಗೆ ಆರ್‌ಸಿಬಿ ಅವರು ಅರ್ಜಿ ಕೊಡುತ್ತಾರೆ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ? ಪದ್ಯ ಆರಂಭಕ್ಕೆ ಮೊದಲೇ ಆರ್‌ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲುತ್ತದೆ ಎಂದು ಹೇಗೆ ಗೊತ್ತಾಯಿತು ಎಂದರು.
ನಾವು ಗೆಲ್ಲುತ್ತೇವೆ ಎಂದು ಇವರಿಗೇನು ಕನಸು ಬಿದ್ದಿತ್ತಾ? ಫೈನಲ್ ಗೆಲ್ತೀವಿ ಅಂತ ಮೊದಲೇ ಗೊತ್ತಿತ್ತಾ? ಇನ್ನು ಫೈನಲ್ ಮ್ಯಾಚ್ ಶುರುನೇ ಆಗದೇ ಇವರು ಅರ್ಜಿ ಕೊಡುತ್ತಾರೆ. ಇನ್ನೊಂದು ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಆರ್)ಗೆ ಕೊಟ್ಟು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಮಾಡೋಕೆ ಅವಕಾಶ ಕೊಡಿ ಎಂದು ಕೇಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಪಹಲ್ಗಾಂ ದಾಳಿ ಕೇಸಲ್ಲಿ ವಿಜಯೇಂದ್ರ ಯಾರ ರಾಜೀನಾಮೆ ಕೇಳ್ತಾರೆ?: ಮಧು ಬಂಗಾರಪ್ಪ
ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು? ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊನೆಗೂ ಜ್ಞಾನೋದಯವಾಗಿದೆ:
ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ. ಈ ಅಸೂಕ್ಷ್ಮ ಸರ್ಕಾರಕ್ಕೆ ಜ್ಞಾನೋದಯವಾಗಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ