
ಬೆಂಗಳೂರು (ಅ.9): ಸಾಮಾಜಿಕ ಜಾಲತಾಣಗಳಲ್ಲಿ ಚಲನಚಿತ್ರ ನಟಿ ಹಾಗೂ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಂಬಂಧ ನಟ ದರ್ಶನ್ ತೂಗುದೀಪ್ ಅವರ 11 ಅಭಿಮಾನಿಗಳ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಸೈಬರ್ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ 11 ಮಂದಿ ದರ್ಶನ್ ಅಭಿಮಾನಿಗಳನ್ನು ಬಂಧಿಸಲಾಗಿತ್ತು. ಈ ಆರೋಪಿಗಳ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ 180 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ಮೊಬೈಲ್ ಕುರಿತು ವಿಧಿ ವಿಜ್ಞಾನ ಪ್ರಯೋಗಾಲದ ವರದಿ ಸಹ ಬರಬೇಕಿದೆ. ಅಲ್ಲದೆ, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ತನಿಖೆ ಮುಂದುವರೆದಿದ್ದು, ಬಳಿಕ ತನಿಖೆಗೆ ಅಂತಿಮಗೊಳಿಸಿ ಮತ್ತೊಂದು ಹೆಚ್ಚುವರಿ ಆರೋಪಪಟ್ಟಿಯನ್ನು ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಆರೋಪಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗಳಿಂದ ಕೆರಳಿದ ದರ್ಶನ್ ಅವರ ಕೆಲ ಅಭಿಮಾನಿಗಳು, ರಮ್ಯಾ ಅವರನ್ನು ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ರಮ್ಯಾ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ 11 ಮಂದಿ ದರ್ಶನ್ ಅಭಿಮಾನಿಗಳನ್ನು ಬಂಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ