Rameshwaram cafe blast: ಬಾಂಬರ್‌ಗಾಗಿ ಪೊಲೀಸರ ತಲಾಶ್‌, ಲಕ್ಷ ಲಕ್ಷ ಮೊಬೈಲ್ ಕರೆಗಳ ತಪಾಸಣೆ!

By Kannadaprabha News  |  First Published Mar 3, 2024, 6:23 AM IST

ಕುಂದಲಹಳ್ಳಿ ಸಮೀಪದ ‘ದಿ ರಾಮೇಶ್ವರಂ ಕೆಫೆ’ ಬಾಂಬ್‌ ಸ್ಫೋಟ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ವ್ಯಕ್ತಿ ಎನ್ನಲಾದ ತಂಪು ಕನ್ನಡಕಧಾರಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ.


ಬೆಂಗಳೂರು (ಮಾ.3) : ಕುಂದಲಹಳ್ಳಿ ಸಮೀಪದ ‘ದಿ ರಾಮೇಶ್ವರಂ ಕೆಫೆ’ ಬಾಂಬ್‌ ಸ್ಫೋಟ ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ವ್ಯಕ್ತಿ ಎನ್ನಲಾದ ತಂಪು ಕನ್ನಡಕಧಾರಿಗೆ ತೀವ್ರ ಹುಡುಕಾಟ ನಡೆಸಿದ್ದಾರೆ.

ಕೆಫೆ ಸಮೀಪದ ಬಸ್ ನಿಲ್ದಾಣದ ಪಕ್ಕದ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ಕಣ್ಣಿಗೆ ತಂಪು ಕನ್ನಡಕ, ತಲೆಗೆ ಕ್ಯಾಪ್ ಹಾಕಿದ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ ವ್ಯಕ್ತಿ ಓಡಾಡುವ ದೃಶ್ಯವು ಪತ್ತೆಯಾಗಿದೆ. ಈ ದೃಶ್ಯದಲ್ಲಿದ್ದ ವ್ಯಕ್ತಿಗೂ ರಾಮೇಶ್ವರಂ ಕೆಫೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವ್ಯಕ್ತಿಗೂ ಸ್ಪಲ್ಪ ಸಾಮ್ಯತೆ ಕಂಡುಬಂದಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

Tap to resize

Latest Videos

undefined

ಬೆಂಗಳೂರು ಜನಸಂದಣಿ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿ; ಇಂಟೆಲಿಜೆನ್ಸ್ ಅಲರ್ಟ್‌ ಆಗಿರಿ: ಸಿಎಂ ಸಿದ್ದರಾಮಯ್ಯ ಸೂಚನೆ

ಕೆಫೆಗೆ ಬಾಂಬ್ ಇಟ್ಟ ಬಳಿಕ ಶಂಕಿತ ಕುಂದಲಹಳ್ಳಿಯಲ್ಲಿ ಬಸ್‌ ಹತ್ತಿ ಕಾಡುಗೋಡಿಯಲ್ಲಿ ಇಳಿದಿದ್ದಾನೆ. ಬಳಿಕ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಹೀಗಾಗಿ ಕುಂದಲಹಳ್ಳಿ, ಕೆ.ಆರ್‌.ಪುರ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮಾರತ್ತಹಳ್ಳಿ, ಹೆಬ್ಬಾಳ ಹಾಗೂ ಎಚ್‌ಎಎಲ್‌ ಸೇರಿ ಕೆಫೆಗೆ ಐದಾರು ಕಿ.ಮೀ. ಸುತ್ತಲಿನ ಮಾರ್ಗದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಕೆಫೆ ಸಿಸಿಟಿವಿಯಲ್ಲಿ ಸೆರೆಯಾದ ವ್ಯಕ್ತಿಯ ಮುಖಚಹರೆಗೆ ಹೋಲುವ ಕೆಲವು ವ್ಯಕ್ತಿಗಳನ್ನು ಶಂಕೆ ಮೇರೆಗೆ ವಿಚಾರಣೆ ನಡೆಸಲಾಗಿದೆ. ಆದರೆ ಯಾರನ್ನೂ ಬಂಧಿಸಿಲ್ಲ. ವಿಚಾರಣೆಗೊಳಗಾದವರಲ್ಲಿ ಕೆಲವರು ಸ್ಥಳೀಯರು ಸೇರಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಎರಡು ದಿನಗಳ ಸಿಸಿಟಿವಿ ದೃಶ್ಯ:

ತಂಪು ಕನ್ನಡಕ ಧರಿಸಿದ ಮುಸುಕುಧಾರಿ ವ್ಯಕ್ತಿಗೆ ತೀವ್ರ ಹುಡುಕಾಟ ನಡೆಸಿರುವ ಸಿಸಿಬಿ ಪೊಲೀಸರು, ರಾಮೇಶ್ವರಂ ಕೆಫೆ ಹಾಗೂ ಘಟನಾ ಸ್ಥಳದ ಸುತ್ತಮುತ್ತ ಕಟ್ಟಡಗಳಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಗೂ ಮೂರು ದಿನಗಳ ಹಿಂದಿನ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹಲವು ಕಟ್ಟಡಗಳಲ್ಲಿದ್ದ ಡಿವಿಆರ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಆಡುಗೋಡಿಯಲ್ಲಿ ತಾಂತ್ರಿಕ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಅವಲೋಕಿಸಿದ್ದಾರೆ. ಇದಕ್ಕಾಗಿ ಸಿಐಡಿ ಹಾಗೂ ಖಾಸಗಿ ಸೈಬರ್‌ ತಜ್ಞರ ನೆರವನ್ನು ಸಹ ಸಿಸಿಬಿ ನೆರವು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ತನಿಖಾಧಿಕಾರಿಯಾಗಿ ಎಸಿಪಿ ನೇಮಕ:

ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಸಿಸಿಬಿ ಸಂಘಟಿತ ಅಪರಾಧ ದಳದ (ಪೂರ್ವ) ಎಸಿಪಿ ನವೀನ್‌ ಕುಲಕರ್ಣಿ ಅವರನ್ನು ತನಿಖಾಧಿಕಾರಿಯಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೇಮಿಸಿದ್ದಾರೆ. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತಂಡಗಳು ಸಹ ರಚನೆಯಾಗಿವೆ. ಈ ತಂಡಗಳು ಶುಕ್ರವಾರ ರಾತ್ರಿಯಿಂದಲೇ ತನಿಖೆ ಆರಂಭಿಸಿವೆ. ಇನ್ನು ಸಿಸಿಬಿಗೆ ಎಫ್‌ಐಆರ್ ಸೇರಿದಂತೆ ಪ್ರಕರಣದ ಕುರಿತು ಪ್ರಾಥಮಿಕ ಹಂತದಲ್ಲಿ ಸಂಗ್ರಹಿಸಿದ್ದ ಪುರಾವೆಗಳನ್ನು ಶನಿವಾರ ಎಚ್‌ಎಎಲ್ ಠಾಣೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಮೊದಲೇ ಸಮೀಕ್ಷೆ ಮಾಡಿರುವ ಶಂಕೆ:

ಐಟಿ ಕಾರಿಡಾರ್‌ನಲ್ಲಿ ಹೆಚ್ಚು ಜನ ಸೇರುವ ಸ್ಥಳವನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ಎಸಗಲು ಶಂಕಿತ ದುಷ್ಕರ್ಮಿಗಳು ಯೋಜಿಸಿದ್ದರು. ಇದಕ್ಕಾಗಿ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿದ್ದರು. ಪೂರ್ವಯೋಜಿತವಾಗಿ ಸಂಚು ಕಾರ್ಯರೂಪಕ್ಕಿಳಿಸಲು ಸಜ್ಜಾಗಿದ್ದ ಕಿಡಿಗೇಡಿಗಳು, ಸ್ಫೋಟಕ್ಕೂ ಮುನ್ನ ಕೆಫೆಗೆ ಬಂದು ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸುತ್ತಮುತ್ತ ಎರಡ್ಮೂರು ದಿನಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಹತ್ತಾರು ಜಿಬಿ ಪ್ರಮಾಣದ ದೃಶ್ಯಾವಳಿಗಳ ತಪಾಸಣೆಗೆ ಹಗಲಿರುಳು ಶ್ರಮಿಸಿದರೂ ಒಂದೂವರೆ ದಿನವಾದರೂ ಬೇಕಾಗುತ್ತದೆ. ತ್ವರಿತವಾಗಿ ಸಿಸಿಟಿವಿ ಕ್ಯಾಮೆರಾಗಳ ಅವಲೋಕನ ಕಾರ್ಯ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಜಿಪಿ ಮಟ್ಟದಲ್ಲಿ ಉನ್ನತ ಸಭೆ

ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರು ಶುಕ್ರವಾರ ತಡರಾತ್ರಿವರೆಗೂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಬಳಿಕ ಶನಿವಾರ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಭೆ ಮುಗಿದ ಬಳಿಕ ಮತ್ತೆ ಅಧಿಕಾರಿಗಳ ಸಭೆ ಮಾಡಿ ತನಿಖೆ ಪ್ರಗತಿ ಕುರಿತು ಡಿಜಿಪಿ ಮಾಹಿತಿ ಪಡೆದಿದ್ದಾರೆ. ಈ ಸಭೆಯಲ್ಲಿ ಆಯುಕ್ತ ಬಿ.ದಯಾನಂದ್ ಸೇರಿ ಹಿರಿಯ ಅಧಿಕಾರಿಗಳು ಇದ್ದರು.

ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರ

ಪ್ರಕರಣದ ಕುರಿತು ಕೇಂದ್ರ ಗುಪ್ತದಳ (ಐಬಿ) ಹಾಗೂ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳ ಜತೆ ಬೆಂಗಳೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಕೆಫೆ ಮಾದರಿಯಲ್ಲೇ ಬೇರೆಡೆ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಗಳ ಶಂಕಿತ ಉಗ್ರರ ಕುರಿತು ಎನ್‌ಐಎ ಅಧಿಕಾರಿಗಳಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಅಲ್ಲದೆ ದುಷ್ಕರ್ಮಿಗಳ ಪತ್ತೆಗೆ ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ರಾಜ್ಯ ಪೊಲೀಸರು ಸಮನ್ವಯತೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಲಕ್ಷ ಲಕ್ಷ ಮೊಬೈಲ್ ಕರೆಗಳ ತಪಾಸಣೆ:

ಸಿಸಿಟಿವಿ ಕ್ಯಾಮೆರಾ ಮಾತ್ರವಲ್ಲದೆ ವಿಧ್ವಂಸಕ ಕೃತ್ಯ ನಡೆದಾಗ ಕುಂದಲಹಳ್ಳಿ ರಾಮೇಶ್ವರ ಕೆಫೆ ಸರಹದ್ದಿನಲ್ಲಿ ಸಂಪರ್ಕ ಹೊಂದಿದ್ದ ಲಕ್ಷಾಂತರ ಮೊಬೈಲ್‌ ಕರೆಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಕೆಫೆಗೆ ಬಂದಿರುವ ದುಷ್ಕರ್ಮಿ ಮೊಬೈಲ್ ಬಳಕೆ ಮಾಡಿರುವ ಮಾಹಿತಿ ಇದೆ. ಹೀಗಾಗಿ ಕೆಫೆಗೂ ಬರುವ ಮುನ್ನ ಅಥವಾ ಕೃತ್ಯ ಎಸಗಿದ ಬಳಿಕ ಆತ ಸಂಪರ್ಕ ಹೊಂದಿದ್ದರೆ ಆ ಸಂಖ್ಯೆ ಪತ್ತೆಹಚ್ಚಲು ಸಿಡಿಆರ್ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲೇ ಇಡ್ಲಿ ತಿಂದವನು ಅಲ್ಲೇ ಬಾಂಬೂ ಇಟ್ಟನಾ..? ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಆಗಿದ್ದು ಯಾಕೆ..?

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಕುರಿತು ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳು ಸಹಕರಿಸುತ್ತಿವೆ.

- ಅಲೋಕ್ ಮೋಹನ್‌ ರಾಜ್ಯ ಪೊಲೀಸ್ ಮಹಾನಿರ್ದೇಶಕ

ಘಟನೆಗೆ ಸಂಬಂಧಿಸಿದಂತೆ ತನಿಖೆ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ನಡೆಸುತ್ತಿವೆ. ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

- ಬಿ.ದಯಾನಂದ್ಪೊಲೀಸ್ ಆಯುಕ್ತ, ಬೆಂಗಳೂರು

click me!