ಸೀಡಿ ಯುವತಿ ಕಡೆಗೂ ಪತ್ತೆ| ಹೈದರಾಬಾದ್‌ನಲ್ಲಿ ಎಸ್‌ಐಟಿ ಶೋಧ| ಪ್ರಿಯತಮ ಕೊಟ್ಟ ಮಾಹಿತಿ ಆಧರಿಸಿ ಆಪರೇಷನ್| ಕಂಪ್ಯೂಟರ್, ದಾಖಲೆ ವಶ?| ಯುವತಿಯ ವಿಜಯಪುರ, ಬಾಗಲಕೋಟೆ ಮನೆಗೆ ಬೆಂಗಳೂರು ಪೊಲೀಸ್ ನೋಟಿಸ್
ವಿಜಯಪುರ(ಮಾ.15): ಮಾಜಿ ಸಚಿವರೊಬ್ಬರ ಲೈಂಗಿಕ ಹಗರಣದ ಸಿ.ಡಿ.ಯಲ್ಲಿರುವ ಯುವತಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಹೊರರಾಜ್ಯದಲ್ಲಿ ಪತ್ತೆಹಚ್ಚಿದ್ದಾರೆನ್ನಲಾಗಿದೆ.
ಕಳೆದ 12 ದಿನಗಳಿಂದ ಅಜ್ಞಾತವಾಗಿದ್ದ ಯುವತಿ ಎರಡು ದಿನಗಳ ಹಿಂದೆಯಷ್ಟೇ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಮಾಡಿ ರಕ್ಷಣೆ ಕೋರಿದ್ದಳು. ಇದೀಗ ಯುವತಿಯನ್ನು ಮಹಿಳಾ ಇನ್ಸ್ಪೆಕ್ಟರ್ ನೇತೃತ್ವದ ತಂಡ ಹೈದರಾಬಾದ್‌ನಲ್ಲಿ ಪತ್ತೆಹಚ್ಚಿದೆ ಎಂದು ಮೂಲಗಳು ತಿಳಿಸಿವೆ.
undefined
ಪ್ರಕರಣದಲ್ಲಿ ಈಗಾಗಲೇ ಖಾಸಗಿ ಸುದ್ದಿವಾಹಿನಿ ವರದಿಗಾರರು ಸೇರಿದಂತೆ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ. ಯುವತಿಯ ಪ್ರಿಯತಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಆತ ಕೊಟ್ಟ ಮಾಹಿತಿ ಮೇರೆಗೆ ಭಾನುವಾರ ಯುವತಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ವೇಳೆ ಯುವತಿ ಬಳಿ ಕಂಪ್ಯೂಟರ್ ಹಾಗೂ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಶನಿವಾರವಷ್ಟೇ ವಿಡಿಯೋ ಬಿಡುಗಡೆ ಮಾಡಿದ್ದ ಯುವತಿ ಹೈದರಾಬಾದ್‌ನಲ್ಲಿರುವ ಬಗ್ಗೆ ಮಾಹಿತಿ ಎಸ್‌ಐಟಿ ತಂಡಕ್ಕೆ ಸಿಕ್ಕಿತ್ತು. ಯುವತಿ ಹೈದರಾಬಾದ್‌ನಲ್ಲಿ ಪರಿಚಯಸ್ಥರ ಮನೆಯೊಂದರಲ್ಲಿ ಉಳಿದುಕೊಂಡಿದ್ದಳು. ಈಗ ಯುವತಿ ಹಾಗೂ ಇಬ್ಬರು ಯುವಕರು ಎಸ್‌ಐಟಿಗೆ ಸಿಕ್ಕಿದ್ದಾರೆ. ಮಹಿಳಾ ಇನ್ಸ್ಪೆಕ್ಟರ್ ನೇತೃತ್ವದ ತಂಡವೊಂದು ಹೈದರಾಬಾದ್‌ಗೆ ಹೋಗಿ ಯುವತಿಯನ್ನು ಪತ್ತೆ ಮಾಡಿರುವುದಾಗಿ ಗೊತ್ತಾಗಿದೆ.
ಮನೆಬಾಗಿಲಿಗೆ ನೋಟಿಸ್:
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ನೀಡಿದ್ದಾರೆ.
ಭಾನುವಾರ ವಿಜಯಪುರದ ನಿಡಗುಂದಿಯಲ್ಲಿರುವ ಅಜ್ಜನ ಮನೆ ಹಾಗೂ ಬಾಗಲಕೋಟೆಯ ಗುಡೂರ ಗ್ರಾಮದ ಅಜ್ಜಿ ಮನೆಗೆ ತೆರಳಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ.
‘ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಮಾ.2ರಂದು ಸಾಮಾಜಿಕ ಹೋರಾಟಗಾರ ದಿನೇಶ ಕಲ್ಲಹಳ್ಳಿ ಎಂಬುವವರು ನೀಡಿದ ದೂರಿನನ್ವಯ ನಿಮ್ಮ ಹೇಳಿಕೆ ಪಡೆದುಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಶೀಘ್ರ ವಿಚಾರಣೆಗೆ ಹಾಜರಾಗಿ’ ಎನ್ನುವ ಒಕ್ಕಣೆ ನೋಟಿಸ್‌ನಲ್ಲಿದೆ.
ಸಂತ್ರಸ್ತ ಯುವತಿ ಮೂಲತಃ ಬಾಗಲಕೋಟೆ ಜಿಲ್ಲೆಯ ಗುಡೂರ ಗ್ರಾಮದವಳು. ಹೀಗಾಗಿ ಇಲ್ಲಿನ ಜನತಾ ಫ್ಲಾಟ್‌ನಲ್ಲಿರುವ ಯುವತಿಯ ಅಜ್ಜಿಯ ಮನೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಕುರಿತು ಮನೆಯಲ್ಲಿದ್ದ ಅಜ್ಜಿಯಿಂದ ಮಾಹಿತಿ ಕಲೆ ಹಾಕಲು ಪ್ರಯತ್ನಿಸಿದ್ದಾರೆ. ನಂತರ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ.
ಇದಕ್ಕೂ ಮೊದಲು ವಿಜಯಪುರದ ನಿಡಗುಂದಿಯ ವೀರೇಶ ನಗರದಲ್ಲಿರುವ ಸಂತ್ರಸ್ತೆಯ ತಾತನ ಮನೆಗೂ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಅಲ್ಲಿ ಯಾರೂ ಇಲ್ಲದ ಕಾರಣ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಸಂತ್ರಸ್ತೆಯು 1ರಿಂದ 10ನೇ ತರಗತಿಯವರೆಗೆ ನಿಡಗುಂದಿಯ ವೀರೇಶ ನಗರದಲ್ಲಿರುವ ತಾತನ ಮನೆಯಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡಿದ್ದಳು ಎಂಬ ಮಾಹಿತಿ ಇದೆ.
ಶನಿವಾರ ರಾತ್ರಿ ಯುವತಿ ವಿಡಿಯೋವೊಂದರಲ್ಲಿ ‘ನನಗೆ ಯಾವುದೇ ರಾಜಕೀಯ ಬೆಂಬಲ ಇಲ್ಲ. ರಮೇಶ್ ಜಾರಕಿಹೊಳಿ ಅವರು ಕೆಲಸದ ಆಮಿಷವೊಡ್ಡಿ ನನ್ನ ಬಳಕೆ ಮಾಡಿಕೊಂಡಿದ್ದು, ಇದೀಗ ಅವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಬೇಕು’ ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಳು.
ಈ ಹಿನ್ನೆಲೆಯಲ್ಲಿ ಯುವತಿ ಅಜ್ಞಾತವಾಸದಲ್ಲಿರುವುದರಿಂದ ಆಕೆಯ ವಾಟ್ಸಪ್, ಇ-ಮೇಲ್ ಐಡಿಗೆ ನೋಟಿಸ್ ರವಾನಿಸಲಾಗಿದೆ. ಇದರ ಜತೆಗೆ ಆಕೆ ವಾಸ ಮಾಡುತ್ತಿದ್ದ ಮನೆ ಮಾಲಿಕರಿಗೆ, ಸ್ನೇಹಿತರಿಗೆ ಹಾಗೂ ವಿಜಯಪುರ ಜಿಲ್ಲೆಯಲ್ಲಿರುವ ಯುವತಿ ನಿವಾಸದ ಅಕ್ಕ-ಪಕ್ಕದವರಿಗೂ ಮಾಹಿತಿ ರವಾನಿಸಲಾಗಿದೆ. ನೋಟಿಸ್‌ನಲ್ಲಿ ಕಬ್ಬನ್‌ಪಾರ್ಕ್ ಪೊಲೀಸ್ ಇನ್ಸ್‌ಪೆಕ್ಟರ್ ಅವರ ಮೊಬೈಲ್ ನಂಬರ್ ನಮೂದಿಸಲಾಗಿದ್ದು, ಯಾವಾಗ ಯಾವ ಸಮಯಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂಬುದರ ಬಗ್ಗೆ ಮಾಹಿತಿ ರವಾನಿಸಿದರೆ ಆಕೆಯ ಭದ್ರತೆಗೆ ಸಕಲ ಸಿದ್ಧತೆ ಮಾಡಿಕೊಳ್ಳುವುದಾಗಿ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.