ಇದು ಸರ್ಕಾರಿ ಪ್ರಾಯೋಜಿತ ಹಲ್ಲೆ, ನಾಳೆ ರಾಜ್ಯಾದ್ಯಂತ ರೈತರ ಪ್ರತಿಭಟನೆ; ರಾಕೇಶ್‌ ಟಿಕಾಯತ್‌

By Sharath Sharma  |  First Published May 30, 2022, 4:14 PM IST

Attack on Rakesh Tikait: ಹಲ್ಲೆಕೋರರ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚತ್ರವಿತ್ತು ಮತ್ತು ಅವರು ಜೈ ಮೋದಿ ಎಂದು ಕೂಗುತ್ತಿದ್ದರು. ಇದು ಸರ್ಕಾರವೇ ಬೆನ್ನಿಗೆ ನಿಂತು ಮಾಡಿರುವ ವ್ಯವಸ್ಥಿತ ಹಲ್ಲೆ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಆರೋಪಿಸಿದ್ದಾರೆ. 


ಬೆಂಗಳೂರು: ರೈತ ನಾಯಕ ರಾಕೇಶ್‌ ಟಿಕಾಯತ್‌ ಮುಖಕ್ಕೆ ಮಸಿ ಬಳಿದು ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಭರತ್‌ ಶೆಟ್ಟಿ ಮತ್ತು ಆತನ ಸಂಗಡಿಗರಿಬ್ಬರನ್ನು ಬಂಧಿಸಿದ್ದಾರೆ. ಘಟನೆಯ ನಂತರ ರಾಕೇಶ್‌ ಟಿಕಾಯತ್‌, ಯದುವೀರ್ ಸಿಂಗ್, ಚುಕ್ಕಿ ನಂಜುಂಡಸ್ವಾಮಿ, ಕವಿತಾ ಕರಗುಂಟಿ ಮತ್ತು ಸಾಮಾಜಿಕ ಕಾರ್ಯಕರ್ತ ಎಸ್‌ಆರ್‌ ಹಿರೇಮಠ್‌ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಟಿಕಾಯತ್‌, ಇದು ಸರ್ಕಾರೀ ಪ್ರಾಯೋಜಿತ ಹಲ್ಲೆ ಎಂದಿದ್ದಾರೆ. ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕವಿತಾ ಕರಗುಂಟಿ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಬರುವುದಿಲ್ಲ, ಅವರು ತೆಲುಗಿನಲ್ಲಿ ಮಾತನಾಡಿದಾಗ ಕನ್ನಡದಲ್ಲಿ ಮಾತನಾಡಿ ಎಂದು ಆಕ್ಷೇಪ ಕೇಳಿಬಂತು. ಅದಾದ ಬೆನ್ನಲ್ಲೇ ಜೈ ಮೋದಿ ಎಂದು ಕೂಗುತ್ತಾ ಟಿಕಾಯತ್‌ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಚುಕ್ಕಿ ನಂಜುಂಡಸ್ವಾಮಿ ಆರೋಪಿಸಿದ್ದಾರೆ. 

ಇದನ್ನೂ ಓದಿ: ಬಿಜೆಪಿ-ಎಸ್‌ಡಿಪಿಐ ಒಳ ಮೈತ್ರಿ ಬಗ್ಗೆ ಸಂಶಯ, ಹೋರಾಟದ ಎಚ್ಚರಿಕೆ ಕೊಟ್ಟ ಹಿಂದೂ ಜಾಗರಣ ವೇದಿಕೆ

Tap to resize

Latest Videos

ಮುಂದುವರೆದ ಚುಕ್ಕಿ, "ಒಂದು ವರ್ಷದಿಂದ ಸುದೀರ್ಘವಾಗಿ ನಡೆದ ರೈತರ ಹೋರಾಟಕ್ಕೆ ಮಾಡಿದ ಅಪಮಾನ ಇದು. ಸೀದಾ ಬಂದು ರಾಕೇಶ್ ಟಿಕಾಯತ್ ಅವರಿಗೆ ಮಸಿ ಬಳಿದರು. ಎದುರು ಇದ್ಧ ಮೈಕಿನಿಂದ ಹಲ್ಲೆ ಮಾಡಿದರು. ಇನ್ನೊಬ್ಬ ವ್ಯಕ್ತಿ ಚೇರ್‌ಗಳಿಂದ ರೈತ ಮುಖಂಡರ ಮೇಲೆ ಹಲ್ಲೆ ಮಾಡಿದರು. ಹಲ್ಲೆ ಮಾಡುವ ವೇಳೆ ಜೈ ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಈ ಕಿಡಿಗೇಡಿಗಳು ಯಾರು ಎಂದು ಗುರುತಿಸಿ ಅವರನ್ನ ಬಂದಿಸಬೇಕು," ಎಂದು ಆಗ್ರಹಿಸಿದರು. 

ನಾಳೆ ರಾಜ್ಯದಾದ್ಯಂತ ಕಪ್ಪು ಪಟ್ಟಿ ಧರಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಯದುವಿರ್ ಸಿಂಗ್ ಹೇಳಿದ್ದಾರೆ. "ನಮ್ಮ ವಿಚಾರಧಾರೆ ನಾವು ಮುಂದಿಡಲು ಸಾಧ್ಯವಾಗದೆ ಇದ್ದರೆ ಅಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದೇ ಅರ್ಥ. ರಾಕೇಶ್ ಟಿಕಾಯತ್ ಹಲ್ಲೆ ವೇಳೆ ಕೈ ಅಡ್ಡ ಇಡದೇ ಹೋಗಿದ್ದರೆ ತಲೆಗೆ ಗಂಭೀರ ಏಟು ಬೀಳುತ್ತಿತ್ತು. ಹಲ್ಲೆಕೋರರ ಕೈಯಲ್ಲಿ ಮೋದಿ ಭಾವ ಚಿತ್ರವಿತ್ತು, ಮೋದಿ ಎಂದು‌ ಘೋಷಣೆಯೂ‌ ಕೂಗುತ್ತಿದ್ದರು. ಸರ್ಕಾರದ ಜೊತೆ ನಮಗೆ ಯಾವ ಮಾತುಕತೆಯೂ ಇರಲಿಲ್ಲ, ನಾವು ನಮ್ಮ ಜನರ ಜೊತೆ ಮಾತನಾಡಲು ಇಲ್ಲಿಗೆ ಬಂದಿದ್ದೇವೆ. ಎಸ್ ಆರ್ ಬೊಮ್ಮಾಯಿ ಮಗ ಈಗ ಇಲ್ಲಿ ಸಿಎಂ ಆಗಿದ್ದಾರೆ, ಅವರ ಮೇಲೆ ಅಪಾರ ಭರವಸೆ ಇತ್ತು. ಆದರೆ ಹುಸಿಯಾಗಿದೆ, ಇದು ಸರ್ಕಾರ ಪ್ರಾಯೋಜಿತ ಹಲ್ಲೆ," ಎಂದು ಯದುವೀರ್‌ ಸಿಂಗ್‌ ಸರ್ಕಾರದ ವಿರುದ್ಧ ಆರೋಪ ಹೊರಿಸಿದರು.

ಇದನ್ನೂ ಓದಿ: ರಾಕೇಶ್‌ ಟಿಕಾಯತ್‌ಗೆ ಮಸಿ ಬಳಿದ ಭರತ್‌ ಶೆಟ್ಟಿ: ವಶಕ್ಕೆ ಪಡೆದ ಪೊಲೀಸರು

ಘಟನೆಗೆ ಸರ್ಕಾರವೇ ಹೊಣೆ:

ಮಾಧ್ಯಮದ ಜೊತೆ ಮಾತನಾಡಿದ ರಾಕೇಶ್‌ ಟಿಕಾಯತ್‌, ಘಟನೆಗೆ ಸರ್ಕಾರವೇ ನೇರಹೊಣೆ ಎಂದಿದ್ದಾರೆ. "ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಶಿಕ್ಷೆಯಾಗಬೇಕು. ಇದು ನಮ್ಮ ಬೇಡಿಕೆ. ಪತ್ರಕರ್ತರ ಸೋಗಿನಲ್ಲಿ ಬಂದು ನಮ್ಮ ಮೇಲೆ ದಾಳಿ ಮಾಡಲಾಗಿದೆ. ಕಿಡಿಗೇಡಿಗಳ ನೇರ ಗುರಿ ನಾವೇ, ಯಾಕೆಂದರೆ ನಮ್ಮ ಮೇಲೆಯೇ ಎಗರಿ ಬಂದಿದ್ದಾರೆ. ಆರೋಪಿಗಳು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂಬ ವಿಚಾರ ಕೇಳಿ ಬಂದಿದೆ. ಎಲ್ಲರಿಗೂ ತಮ್ಮ ವಿಚಾರಧಾರೆಗಳನ್ನು ಮುಂದಿಡುವ ಅವಕಾಶವಿದೆ. ಯಾರೇ ಆಗಿದ್ದರೂ ಕಿಡಿಗೇಡಿಗಳಿಗೆ ಶಿಕ್ಷೆಯಾಗ ಬೇಕಿದೆ," ಎಂದು ಟಿಕಾಯತ್‌ ಬೇಡಿಕೆ ಇಟ್ಟಿದ್ದಾರೆ.

ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ರಾಕೇಶ್‌ ಟಿಕಾಯತ್‌ರನ್ನು ಭೇಟಿ ಮಾಡಿ ಘಟನೆಯ ಸಂಬಂಧ ಮಾತನಾಡಿದ್ದಾರೆ. ಭೇಟಿ ನಂತರ ಮಾತನಾಡಿದ ಡಿಕೆ ಶಿವಕುಮಾರ್‌, ಘಟನೆಯನ್ನು ಖಂಡಿಸುತ್ತೇನೆ, ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದಿದ್ದಾರೆ.

click me!