ಹುತಾತ್ಮ ಸೈನಿಕನಿಗೆ ಪರಿಹಾರ ನೀಡೋಕು ಸರ್ಕಾರದ ಬಳಿ ಹಣವಿಲ್ಲವೇ?

By Santosh Naik  |  First Published Dec 2, 2023, 3:33 PM IST

ರಜೌರಿ ಎನ್‌ಕೌಂಟರ್‌ನಲ್ಲಿ ಕರ್ನಾಟಕ ಕ್ಯಾಪ್ಟನ್‌ ಪ್ರಾಂಜಲ್‌ ವೀರಗತಿ ಪ್ರಾಪ್ತಿಯಾಗಿದ್ದರು. ಈ ಘಟನೆ ನಡೆದು 10 ದಿನಗಳಾಗಿದೆ. ಇಂಥ ಪ್ರಕರಣದಲ್ಲಿ ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡಬೇಕಿದ್ದ ಸರ್ಕಾರ 10 ದಿನಗಳಾದರೂ ಈ ಬಗ್ಗೆ ಚಕಾರವೆತ್ತಿಲ್ಲ.
 


ಬೆಂಗಳೂರು (ಡಿ.2): ನಮ್ಮ ದೇಶದಲ್ಲಿ ಭಯೋತ್ಪಾದಕ ಸತ್ತಾಗ ಸಿಗುವಷ್ಟು ಸಿಂಪತಿ, ಪ್ರಚಾರ ಒಬ್ಬ ಸೈನಿಕ ಹುತಾತ್ಮನಾದಾಗ ಸಿಗೋದಿಲ್ಲ ಎನ್ನುವುದು ವಾಸ್ತವ. ಇದಕ್ಕೆ ಜ್ವಲಂತ ಉದಾಹರಣೆ ಈಗ ಸಿಕ್ಕಿದೆ. ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು ಐವರು ಸೈನಿಕರು ಹುತಾತ್ಮರಾಗಿದ್ದರು. ಇದರಲ್ಲಿ ಕರ್ನಾಟಕದ ಕ್ಯಾಪ್ಟನ್‌ ಪ್ರಾಂಜಲ್‌ ಕೂಡ ಒಬ್ಬರು. ಎಂಆರ್‌ಪಿಎಲ್‌ನ ಮಾಜಿ ನಿರ್ದೇಶಕ ಎಂವಿ ವೆಂಕಟೇಶ್‌ ಅವರ ಏಕೈಕ ಪುತ್ರನಾಗಿದ್ದ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನಲ್ಲಿ ಮಾಡಲಾಗಿತ್ತು. ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾದ ಸುದ್ದಿ ಸಿಗುತ್ತಿದ್ದಂತೆಯೇ, ಸಿಎಂ ಸಿದ್ಧರಾಮಯ್ಯ ಹುತಾತ್ಮ ಸೈನಿಕನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದರು. ಒಬ್ಬ ಸೈನಿಕನ ಸಾವಿಗೆ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು ಕಡಿಮೆಯಾಯಿತು. ಸರ್ಕಾರ ಕನಿಷ್ಠ 1 ಕೋಟಿ ಪರಿಹಾರ ಹಣವನ್ನಾದರೂ ನೀಡಬೇಕಿತ್ತು ಎನ್ನುವ ಮಾತುಗಳು ಆ ಸಮಯದಲ್ಲಿ ಕೇಳಿ ಬಂದಿತ್ತು. ಆದರೆ, ಸೈನಿಕನ ಪ್ರಾಣಕ್ಕಿಂತ ಯಾವ ಹಣವೂ ದೊಡ್ಡದಲ್ಲ. ಆದರೆ, ಸಿಎಂ ಘೋಷಣೆ ಮಾಡಿದ್ದ 50 ಲಕ್ಷ ಪರಿಹಾರ ಧನ 10 ದಿನಗಳಾದರೂ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಕುಟುಂಬಕ್ಕೆ ತಲುಪಿಲ್ಲ. ಈಗಾಗಲೇ ಇದ್ದ ಏಕೈಕ ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬ ಈ ಹಣಕ್ಕಾಗಿ ಇನ್ನೆಷ್ಟು ಇಲಾಖೆಗಳನ್ನು ಅಲೆಯಬೇಕೋ ಎನ್ನುವುದು ಕೂಡ ಗೊತ್ತಿಲ್ಲ.

ಈ ನಡುವೆ ಸಂಸದ ತೇಜಸ್ವಿ ಸೂರ್ಯ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಟ್ವೀಟ್‌ನಲ್ಲಿ ಬರೆದುಕೊಂಡಿರುವ ಅವರು, 'ನಮ್ಮ ರಾಷ್ಟ್ರದ ಸೇವೆಯಲ್ಲಿ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾಗಿ 10 ದಿನಗಳು ಕಳೆದಿವೆ. ಆದರೂ ರಾಜ್ಯ ಸರ್ಕಾರ ಅಗಲಿದ ಆತ್ಮಕ್ಕೆ ಗೌರವ ಧನ ನೀಡಲು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಅವರ ಕುಟುಂಬವನ್ನು ಈವರೆಗೂ ಸಂಪರ್ಕಿಸಿಲ್ಲ. ಯಾವುದೇ ಪರಿಹಾರವು ಕ್ಯಾಪ್ಟನ್ ಪ್ರಾಂಜಲ್ ಅವರನ್ನು ಮರಳಿ ತರಲು ಸಾಧ್ಯವಿಲ್ಲ, ಮತ್ತು ಎಂದಿನಂತೆ ಮಾಧ್ಯಮದ ಗಮನವು ಇತರ ಸಮಸ್ಯೆಗಳಿತ್ತ ವಾಲುತ್ತದೆ. ಈ ಕಠಿಣ ಸಮಯದಲ್ಲಿ ಅವರ ಪೋಷಕರಿಗೆ ಸಾಕಷ್ಟು ಬೆಂಬಲವನ್ನು ಒದಗಿಸುವುದು ಮುಖ್ಯವಾಗಿದೆ. ಈ ಕುರಿತಾಗಿ ನಾನು ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಬಳಿ ಮನವಿ ಮಾಡುತ್ತೇನೆ. ಈ ಸಮಸ್ಯೆಯನ್ನು ವಿಳಂಬ ಮಾಡಬೇಡಿ. ಕ್ಯಾಪ್ಟನ್‌ ಪ್ರಾಂಜಲ್‌ ಅವರ ಪೋಷಕರಿಗೆ ತಕ್ಷಣವೇ ಸರ್ಕಾರ ಘೋಷಣೆ ಮಾಡಿರುವ 50 ಲಕ್ಷ ರೂಪಾಯಿ ನೀಡಬೇಕು' ಎಂದು ಟ್ವೀಟ್‌ ಮಾಡಿದ್ದಾರೆ.

ತವರಿಗೆ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ: ಸಿಎಂ, ಗವರ್ನರ್ ಸೇರಿ ಗಣ್ಯರಿಂದ ಅಂತಿಮ ಗೌರವ

ಅದರೊಂದಿಗೆ ಸಿಎಂ ಸಿದ್ಧರಾಮಯ್ಯ ಅವರಿಗೆ ಕಳುಹಿಸಿರುವ ಅಧಿಕೃತ ಪತ್ರವನ್ನೂ ತೇಜಸ್ವಿ ಸೂರ್ಯ ಪೋಸ್ಟ್‌ ಮಾಡಿದ್ದಾರೆ. ಕ್ಯಾಪ್ಟನ್‌ ಪ್ರಾಂಜಲ್‌ ಅವರ ಕುಟುಂಬದಲ್ಲಿ ಪತ್ನಿ ಹಾಗೂ ಅವರ ವೃದ್ಧ ತಂದೆ-ತಾಯಿ ಇದ್ದಾರೆ. ಅವರ ಜೀವಕ್ಕೆ ಯಾವುದೇ ಹಣದಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ಇವರ ಕುಟುಂಬಕ್ಕೆ ಘೋಷಣೆ ಮಾಡಿರುವ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಶೀಘ್ರ ಕೆಲಸ ಮಾಡಬೇಕು ಎಂದು ಅವರು ಬರೆದಿದ್ದಾರೆ.

Tap to resize

Latest Videos

ಯೋಧ ಪ್ರಾಂಜಲ್‌ ಕಳೇಬರ ಇಂದು ಬೆಂಗಳೂರಿಗೆ; ಮಗನ ತ್ಯಾಗದ ಬಗ್ಗೆ ಹೆಮ್ಮೆ ಇದೆ ಎಂದ ತಂದೆ!

ಇದರ ನಡುವೆ ರಾಜಕಾರಣದಲ್ಲಿ, ನೆರೆಯ ರಾಜ್ಯದ ಚುನಾವಣಾ ಫಲಿತಾಂಶದಲ್ಲಿಯೇ ಹೆಚ್ಚಿನ ಗಮನ ನೀಡಿರುವ ರಾಜ್ಯ ಸರ್ಕಾರಕ್ಕೆ ಹುತಾತ್ಮ ಸೈನಿಕನಿಗೆ ಪರಿಹಾರದ ಹಣ ನೀಡೋಕು ದುಡ್ಡಿಲ್ಲವೇ ಎನ್ನುವ ಅನುಮಾನ ಕಾಡಿದೆ.

It’s been 10 days since Capt Pranjal attained martyrdom in service of our nation. Yet the State Govt has not moved to provide a respectful honorarium to the kin of the departed soul. They are not even contacted in this regard.

While no compensation can bring back Capt Pranjal,… pic.twitter.com/7WgvlixP8E

— Tejasvi Surya (@Tejasvi_Surya)
click me!