ಸದ್ದಿಲ್ಲದೆ ಜೆಸಿಬಿಗಳ ಘರ್ಜನೆ ಸ್ತಬ್ಧ; ಅಧಿವೇಶನ ಮುಗಿಯುತ್ತಿದ್ದಂತೆ ತೆರವು ಕಾರ್ಯಕ್ಕೆ ಬ್ರೇಕ್ ಹಾಕಿದ ಬಿಬಿಎಂಪಿ!

By Kannadaprabha NewsFirst Published Sep 28, 2022, 11:24 AM IST
Highlights
  • ಸದ್ದಿಲ್ಲದೆ ಜೆಸಿಬಿಗಳ ಘರ್ಜನೆ ಸ್ತಬ್ಧ!
  • ಅಧಿವೇಶನ ಮುಗಿಯುತ್ತಿದ್ದಂತೆ ತೆರವು ಕಾರ್ಯಕ್ಕೆ ಬ್ರೇಕ್‌ ಹಾಕಿದ ಬಿಬಿಎಂಪಿ
  • ಕೆಲ ಒತ್ತುವರಿಗಳಿಗೆ ನೋಟಿಸ್‌, ಮತ್ತೆ ಕೆಲವು ಒತ್ತುವರಿಗೆ ಕೋರ್‌್ಟತಡೆಯಾಜ್ಞೆ

ಬೆಂಗಳೂರು (ಸೆ.28) : ಬಿಬಿಎಂಪಿ ವ್ಯಾಪ್ತಿಯ ಮಹದೇವಪುರದಲ್ಲಿ ಕಳೆದ ಹತ್ತು ದಿನಗಳಿಂದ ಘರ್ಜಿಸಿದ್ದ ಜೆಸಿಬಿಗಳ ಸದ್ದಡಗಿದ್ದು, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಗೆ ಪ್ರವಾಹಕ್ಕೆ ತುತ್ತಾಗಿದ್ದ ಮಹದೇವಪುರ ವಲಯವೊಂದರಲ್ಲೇ 20ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಆದರೆ, ಬಡವರ ಶೆಡ್‌ಗಳು, ಸಣ್ಣ ಕಾರ್ಖಾನೆ, ಕೋಳಿ ಫಾರಂ, ಕಾಂಪೌಂಡ್‌, ಕಿಟಕಿ ಸೇರಿದಂತೆ ಸಣ್ಣಪುಟ್ಟಒತ್ತುವರಿಗಳನ್ನು ತೆರವು ಮಾಡಲು ಹೆಚ್ಚು ಆಸಕ್ತಿ ತೋರಿದ್ದ ಅಧಿಕಾರಿಗಳು, ದೊಡ್ಡವರು ಮಾಡಿಕೊಂಡಿದ್ದ ಒತ್ತುವರಿಗಳ ಬಗ್ಗೆ ಮೃದು ಧೋರಣೆ ಅನುಸರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಕೊನೆಗೂ ಎಚ್ಚೆತ್ತ ಬಿಬಿಎಂಪಿ, ರಂಧ್ರ ಬಿದ್ದ ಸುಮನಹಳ್ಳಿ ಫ್ಲೈಓವರ್‌ ದುರಸ್ತಿ ಆರಂಭ

ಈ ನಡುವೆಯೇ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ವಿಧಾನಮಂಡಲ ಅಧಿವೇಶನ ಮುಗಿದ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ವಿಪ್ರೋ, ಸಲಾರ್‌ಪುರಿಯಾ ಸಂಸ್ಥೆಯಿಂದ ಒತ್ತುವರಿ ಆಗಿರುವುದನ್ನು ಗುರುತು ಮಾಡಲಾಗಿದ್ದರೂ ತೆರವುಗೊಳಿಸುವ ಪ್ರಯತ್ನ ಮಾಡಿರಲಿಲ್ಲ. ಸೆ.19ರಂದು ಬಡವರ ನಾಲ್ಕೈದು ಶೆಡ್‌ಗಳನ್ನು ಮಾತ್ರ ನೆಲಸಮ ಮಾಡಿದ್ದರು. ಕೆಲವೆಡೆ ‘ನಮ್ಮ ಶೆಡ್‌ಗಳನ್ನು ನಾವೇ ತೆರವು ಮಾಡುತ್ತೇವೆ. ಒಂದೆರಡು ದಿನ ಸಮಯ ನೀಡಿ’ ಎಂದು ನಿವಾಸಿಗಳು ಕೇಳಿಕೊಂಡರೂ ಅಧಿಕಾರಿಗಳು ಕರಗಿರಲಿಲ್ಲ.

ವಿಪ್ರೋ, ಸಲಾರ್‌ ಪುರಿಯ ಸ್ವಯಂ ಪ್ರೇರಿತ ತೆರವು

ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ 10 ಅಡಿ ಜಾಗವನ್ನು ವಿಪ್ರೋ ಸಂಸ್ಥೆ, ಸಲಾರ್‌ಪುರಿಯಾ ಸಂಸ್ಥೆಗಳು ಒತ್ತುವರಿ ಮಾಡಿಕೊಡಿದ್ದು, ಅದರಲ್ಲಿ ವಿಪ್ರೋ ಕಾಂಪೌಂಡ್‌ ಮೇಲೆ 2.4 ಮೀಟರ್‌ ಒತ್ತುವರಿ ಆಗಿರುವ ಬಗ್ಗೆ ಗುರುತು ಮಾಡಲಾಗಿದೆ. ಅದನ್ನು ತೆರವುಗೊಳಿಸುವುದನ್ನು ಬಿಟ್ಟು ಬಡಜನರ ಮೇಲೆ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ವಿಪ್ರೋ ಮತ್ತು ಸಲಾರ್‌ಪುರಿಯಾ ಸಂಸ್ಥೆಗಳು ಮಾಡಿಕೊಂಡಿದ್ದ ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಂಡಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಲವೆಡೆ ತೆರವು

ಮುನೇನಕೊಳಲು ಕೆರೆ, ಪಾಪಯ್ಯರೆಡ್ಡಿ ಲೇಔಟ್‌, ವಾಗ್ದೇವಿ ಲೇಔಟ್‌, ಮುನೇನಕೊಳಲು, ಮಹದೇವಪುರ ವಿಲೇಜ್‌ನ ಭಾಗ್ಮನೆ ಅಪಾರ್ಚ್‌ಮೆಂಟ್‌ಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಮಾರತಹಳ್ಳಿ ಪೊಲೀಸ್‌ ಠಾಣೆ ಹಿಂಭಾಗ ಕಾಡುಬೀಸನಹಳ್ಳಿಯಲ್ಲಿ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸ್ಥಳದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್‌ಸಿಸಿ ಸೇತುವೆ, ಪೂರ್ವ ಪಾರ್ಕ್ ರಿಡ್ಜ್‌ನ ಹಿಂಭಾಗ ರಾಜಕಾಲುವೆಯ ಮೇಲಿದ್ದ ಶೆಡ್‌ ಮತ್ತು ರಾಜಕಾಲುವೆ ಮೇಲೆ ನಿರ್ಮಿಸಿದ್ದ ರಸ್ತೆ, ಗರುಡಾಚಾರ್‌ಪಾಳ್ಯ ಕೆರೆ ಬಳಿಯ ಅಪಾರ್ಚ್‌ಮೆಂಟ್‌ ಕಾಂಪೌಂಡ್‌, ಗ್ರೀನ್‌ವುಡ್‌ ರೆಸಿಡೆನ್ಸಿ ಆವರಣದಲ್ಲಿ ರಾಜಕಾಲುವೆಯ ಮೇಲೆ ಅಳವಡಿಸಿದ್ದ 150 ಮೀ. ಉದ್ದದ ಸ್ಲಾ್ಯಬ್‌, ಕಾಡುಗೋಡಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರಾಜಕಾಲುವೆಯ ಎರಡು ಬದಿಯಲ್ಲಿ 75 ಮೀಟರ್‌ ಉದ್ದದ ಕಾಂಪೌಂಡ್‌ ಹಾಗೂ ಎರಡು ಶೆಡ್‌ಗಳನ್ನು ತೆರವು ಮಾಡಲಾಗಿದೆ. ಇದೇ ರಾಜಕಾಲುವೆ ಮೇಲೆ ವಾಸಿಸುವ 10 ಮನೆಗಳ ಪೈಕಿ ಎಂಟು ಮನೆಗಳಿಗೆ ನೋಟಿಸ್‌ ನೀಡಲಾಗಿದೆ.

Bengaluru: ಬಿಬಿಎಂಪಿ ವಾರ್ಡ್‌ ಮೀಸಲಾತಿಗೆ ಹೈಕೋರ್ಟ್‌ ಆಕ್ಷೇಪ

‘ಒತ್ತುವರಿ ತೆರವು ಕಾರ‍್ಯಮುಂದುವರೆಯಲಿದೆ’

ಒತ್ತುವರಿ ತೆರವು ಕಾರ್ಯಾಚರಣೆ ಸದ್ಯಕ್ಕೆ ನಿಲ್ಲುವುದಿಲ್ಲ. ಈಗಾಗಲೇ ಶೇ.50ರಷ್ಟುಒತ್ತುವರಿ ತೆರವು ಮಾಡಲಾಗಿದೆ. ಎಂಟು ಕಡೆಗಳಲ್ಲಿ ವಿವಿಧ ಸರ್ವೇ ನಂಬರ್‌ನಲ್ಲಿ ಒತ್ತುವರಿ ಮಾಡಿಕೊಂಡಿರುವವರ ಪೈಕಿ ಶೇ.30ರಷ್ಟುಮಂದಿ ಕೋರ್ಚ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ತಡೆಯಾಜ್ಞೆ ತೆರವಾದ ಕೂಡಲೇ ಒತ್ತುವರಿ ತೆರವು ಮಾಡುತ್ತೇವೆ. ಆದರೂ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಇರುವ ತಡೆಗಳನ್ನು ಮೊದಲು ತೆರವು ಮಾಡುತ್ತಿದ್ದೇವೆ. ಜೊತೆಗೆ 125ಕ್ಕೂ ಹೆಚ್ಚು ಕಡೆಗಳಲ್ಲಿ ನೋಟಿಸ್‌ ನೀಡಲಾಗಿದೆ ಎಂದು ಮಹದೇವಪುರ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು ಮಾಹಿತಿ ನೀಡಿದ್ದಾರೆ.

click me!