
ಬೆಂಗಳೂರು(ಜ.08): ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಮೇಲ್ಮೈ ಸುಳಿಗಾಳಿಯಿಂದ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ರಾಜ್ಯದ ಕೆಲಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಇದೇ ವೇಳೆ ಅಕಾಲಿಕ ಮಳೆಯಿಂದಾಗಿ ಭತ್ತ, ಹತ್ತಿ, ಮೆಣಸಿನಕಾಯಿ, ಕಡಲೆ, ಕಾಫಿ, ತರಕಾರಿ ಸೇರಿ ಬೆಳೆದು ನಿಂತಿರುವ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ರೈತರಿಗೆ ಭಾರಿ ನಷ್ಟವಾಗಿದೆ.
ಬಳ್ಳಾರಿ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದ್ದರೆ, ಬೆಂಗಳೂರು, ಹಾಸನ, ಗದಗ, ಧಾರವಾಡ, ಉತ್ತರ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಇದೀಗ ಹೆಚ್ಚಿನ ಕಡೆ ಭತ್ತ ಕಟಾವು ನಡೆಯುತ್ತಿದ್ದು ಇದೇ ಸಮಯದಲ್ಲಿ ಮಳೆ ಸುರಿದಿರುವುದರಿಂದ ಹಾವೇರಿ, ಕೊಪ್ಪಳ, ಗದಗ, ಬಳ್ಳಾರಿ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುಯ್ಲಿಗೆ ಬಂದಿರುವ ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಕೊಪ್ಪಳ, ಗದಗ, ಮೈಸೂರು ಜಿಲ್ಲೆಯ ಕೆ.ಆರ್.ನಗರ ಸುತ್ತಮುತ್ತ ರಾಶಿ ಮಾಡಿದ್ದ ಭತ್ತ ಸಹ ತೊಯ್ದು ಹಾಳಾಗುತ್ತಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಬೆಳೆದು ನಿಂತಿರುವ ಹತ್ತಿ, ಟೊಮ್ಯಾಟೋ ಸೇರಿದಂತೆ ಹಲವಾರು ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಸಿರುಗುಪ್ಪ, ಸಂಡೂರು, ಕಂಪ್ಲಿ, ಬಳ್ಳಾರಿ, ಕುರುಗೋಡು ಪ್ರದೇಶದಲ್ಲಿ ಹಸಿ ಮೆಣಸಿನ ಕಾಯಿ ಬೆಳೆದಿದ್ದು, ಅವೆಲ್ಲವೂ ನಾಶವಾಗಿದೆ. ಸಿರುಗುಪ್ಪ ತಾಲೂಕಿನ ಎಚ್. ಹೊಸಹಳ್ಳಿ ಬಳಿ ತುಂಗಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆ(ಎಲ್‌ಎಲ್‌ಸಿ)ಗೆ ತೂಬು ಬಿದ್ದು ಅಪಾರ ಪ್ರಮಾಣದ ನೀರು ಹೊಲ ಗದ್ದೆಗಳಿಗೆ ಹರಿದು ಹೋಗಿರುವ ಘಟನೆ ನಡೆದಿದೆ.
ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಹಿಂಗಾರು ಹಂಗಾಮಿನ ಕಡಲೆ ಒಣ ಮೆಣಸಿನಕಾಯಿ, ಜೋಳ, ಗೋಧಿ ಬೆಳೆಗಳಿಗೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲೂ ಜಿಟಿ ಜಿಟಿ ಮಳೆಯಿಂದಾಗಿ ಜೋಳ, ಹತ್ತಿ, ಕಡಲೆ, ಮೆಣಸಿನ ಬೆಳೆ ನಾಶವಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ.
ಇನ್ನು ಮಲೆನಾಡು ಜಿಲ್ಲೆಗಳಾದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಫಸಲು ಅಪಾರ ಪ್ರಮಾಣದಲ್ಲಿ ನಾಶವಾಗಿದೆ. ಒಣಗಿಸಲು ಕಣದಲ್ಲಿ ಹಾಕಲಾಗಿದ್ದ ಕಾಫಿ ಫಸಲು ಸಂಪೂರ್ಣ ನೀರಿನಲ್ಲಿ ಒದ್ದೆಯಾಗಿದ್ದು, ಒಣಗಿಸಲು ಕಷ್ಟವಾಗಿದೆ. ಎತ್ತರದ ಪ್ರದೇಶದಲ್ಲಿ ಒಣಗಿಸಲು ಹಾಕಿದ್ದ ಕಾಫಿಯ ಹಣ್ಣುಗಳು ಇಳಿಜಾರು ಪ್ರದೇಶಕ್ಕೆ ಹರಿದುಹೋಗುತ್ತಿವೆ. ಹಣ್ಣನ್ನು ಒಟ್ಟು ಮಾಡಲು ಹರಸಾಹಸವಾಗುತ್ತಿದೆ. ಅಕಾಲಿಕ ಮಳೆಯಿಂದ ಕಾಫಿ ಕೊಯ್ಲಿಗೆ ಮುನ್ನವೇ ಹೂ ಅರಳಿ ಮುಂದಿನ ವರ್ಷದ ಇಳುವರಿಯ ಮೇಲೂ ಪರಿಣಾಮ ಬೀರಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿಸಿಲಿಗೆ ಒಣಗಲು ಹಾಕಿದ್ದ ಅಡಕೆ ಒದ್ದೆಯಾಗಿರುವುದರಿಂದ ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ