
ಬೆಂಗಳೂರು(ಜ.08): ರಾಜಧಾನಿಯ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನಗಳನ್ನು ಅಡ್ಡಗಟ್ಟಿದಂಡ ಪ್ರಯೋಗಿಸುವ ಕಾರ್ಯಾಚರಣೆಗೆ ಸಂಚಾರ ವಿಭಾಗದ ಪೊಲೀಸರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ ಎಂಬ ಬಗ್ಗೆ ಆದೇಶದ ಪ್ರತಿಯೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಗೊಂದಲ ಸೃಷ್ಟಿಯಾಗಿತ್ತು. ಆದರೆ ಈ ರೀತಿಯ ಆದೇಶವನ್ನು ನೀಡಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದು, ಕಾನೂನು ಮೀರಿದವರಿಗೆ ರಸ್ತೆಯಲ್ಲಿ ತಡೆದು ದಂಡ ವಿಧಿಸುವ ಕಾರ್ಯಾಚರಣೆಯೊಂದಿಗೆ ಸಿಸಿಟಿವಿ ಹಾಗೂ ಫೋಟೋ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಲು ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೇಶನ ನೀಡಿದ್ದಾಗಿ ಹೇಳಿದ್ದಾರೆ.
ನಗರದ ಸಂಚಾರ ನಿರ್ವಹಣಾ ಕೇಂದ್ರ ಜಂಟಿ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ. ಈ ಸಭೆಯ ನಿರ್ಣಯದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡು ಗುರುವಾರ ವೈರಲ್ ಆಗಿತ್ತು.
ರಸ್ತೆಬದಿ ಅಥವಾ ಮರೆಯಾಗಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ಸವಾರ/ ಚಾಲಕರ ವಾಹನಗಳನ್ನು ಹಠಾತ್ತಾಗಿ ತಡೆದು ಪೊಲೀಸರು ದಂಡ ಪ್ರಯೋಗಿಸುತ್ತಿದ್ದರು. ಈ ದಂಡಾಸ್ತ್ರ ಪ್ರಯೋಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ಕಟುವಾಗಿ ಟೀಕಿಸುತ್ತಿದ್ದರು. ಈ ಕೊರೋನಾ ಕಾಲದಲ್ಲಿ ಸಹ ಸಂಚಾರ ಪೊಲೀಸರ ಕ್ರಮಕ್ಕೆ ಜನರ ಆಕ್ಷೇಪ ವ್ಯಕ್ತವಾಗಿತ್ತು. ಈ ಟೀಕೆಗಳಿಂದ ಎಚ್ಚೆತ್ತ ಜಂಟಿ ಆಯುಕ್ತ (ಸಂಚಾರ) ಡಾ ಬಿ.ಆರ್.ರವಿಕಾಂತೇಗೌಡ ಅವರು, ರಸ್ತೆಯಲ್ಲಿ ಕಾರ್ಯಾಚರಣೆಗೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
ವಾಹನ ತಡೆದು ದಂಡ ವಿಧಿಸುವ ಬದಲಿಗೆ ಡಿಜಿಟಲ್ ಮೂಲಕ ಪ್ರಕರಣ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಅಲ್ಲದೆ ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ಬರುವ ವಾಹನಗಳನ್ನು ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲನೆಗೆ ಸಹ ಮುಂದಾಗಿದ್ದಾರೆ. ಅಲ್ಲದೆ, ಮೊಬೈಲ್, ಕ್ಯಾಮರಾ ಮತ್ತು ವಾಹನ ನಂಬರ್ ಬರೆದುಕೊಂಡು ಡಿಜಿಟಲ್ ಯಂತ್ರದಲ್ಲಿ ಕೇಸ್ ದಾಖಲಿಸಬೇಕು. ಕಡ್ಡಾಯವಾಗಿ ಪ್ರತಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ದಿನಕ್ಕೆ ಕನಿಷ್ಠ 25 ಡಿಜಿಟಲ್ ಯಂತ್ರದಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳು ಕಟ್ಟಪ್ಪಣೆ ಮಾಡಿದ್ದಾರೆ.
ಸೂಚನೆಗಳು ಹೀಗಿವೆ:
ರಸ್ತೆಯಲ್ಲಿ ವಾಹನ ತಡೆದು ದಂಡ ವಿಧಿಸಲು ಕಾನೂನಿನಲ್ಲಿ ಪೊಲೀಸರಿಗೆ ಅವಕಾಶ ನೀಡಲಾಗಿದೆ. ಈ ಕಾರಾರಯಚರಣೆ ಸ್ಥಗಿತಗೊಳಿಸುವಂತೆ ಯಾವುದೇ ಸೂಚನೆ ನೀಡಲಾಗಿಲ್ಲ. ಸಭೆಯಲ್ಲಿ ನಡೆದ ಕೆಲವು ಚರ್ಚೆಯನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಬಾಕಿ ಪ್ರಕರಣ ಸುಮಾರು 190 ಕೋಟಿಯಷ್ಟುಹಳೆ ದಂಡ ವಸೂಲಿ ಆಗಬೇಕಿದೆ. ಈ ಹಳೆ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚು ನಿಗಾ ವಹಿಸುವಂತೆ ಸೂಚಿಸಿದ್ದೇನೆ. ರಸ್ತೆಯಲ್ಲಿ ದಂಡ ವಿಧಿಸುವ ಕ್ರಮ ಮುಂದುವರಿಯಲಿದೆ ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ