ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕಿಡಿ

Kannadaprabha News, Ravi Janekal |   | Kannada Prabha
Published : Feb 08, 2026, 07:48 AM IST
V Somanna on siddaramaiah

ಸಾರಾಂಶ

ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಲವು ರೈಲ್ವೆ ಯೋಜನೆಗಳನ್ನು ನೀಡಿದ್ದರೂ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ. ಹಲವು ಯೋಜನೆಗಳು ಕುಂಠಿತಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ (ಫೆ.8): ರೈಲ್ವೆ ಸೇರಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರೆ, ರಾಜ್ಯ ಸರ್ಕಾರ ನಿಗದಿತ ಭೂಮಿ ಸ್ವಾಧೀನ ಮಾಡಿ ಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಇದರಿಂದ ಯೋಜನೆಗಳು ಕುಂಟುತ್ತ ಸಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ರಾಜ ಆಗಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಆರೋಪಿಸಿದರು.

ಭೂಮಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ:

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗ, ಶಿವಮೊಗ್ಗ-ರಾಣೆಬೆನ್ನೂರ, ಶಿವಮೊಗ್ಗ- ಹರಿಹರ, ವೈಟ್‌ಫೀಲ್ಡ್‌-ಕೀಲಾರ, ಹಾಸನ-ಬೇಲೂರು, ತುಮಕೂರು- ದಾವಣಗೆರೆ, ಹುಬ್ಬಳ್ಳಿ-ಅಂಕೋಲಾ ಮಾರ್ಗ, ರಾಮದುರ್ಗ-ಲೋಕಾಪುರ ಮಾರ್ಗ ಹೀಗೆ ಹಲವು ಯೋಜನೆಗಳಿಗೆ ಕೇಂದ್ರ ಮಂಜೂರಾತಿ ನೀಡಿದೆ. ಆದರೆ, ಬೇಕಾದ ಭೂಮಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎನ್ನವುದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಟೀಕಿಸಿದರು.

ತಮ್ಮ ತಪ್ಪನ್ನು ಒಮ್ಮೆಯಾದರೂ ಒಪ್ಪಿಕೊಂಡಿದ್ದಾರಾ?

ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ತಮ್ಮ ತಪ್ಪನ್ನು ಒಮ್ಮೆಯಾದರೂ ಒಪ್ಪಿಕೊಂಡಿದ್ದಾರಾ? ಯಾವಾಗಲೂ ಕೇಂದ್ರದ್ದೇ ತಪ್ಪು ಎನ್ನುತ್ತಾರೆ. ಅರುಣಾಚಲ ಪ್ರದೇಶ, ಛತ್ತೀಸಗಡ, ತ್ರಿಪುರಾ, ಜಾರ್ಖಂಡ್‌ ಮುಂತಾದ ರಾಜ್ಯಗಳನ್ನು ಗಮನಿಸಬೇಕು. ಕೇಂದ್ರದ ಯೋಜನೆಗಳನ್ನು ಅವರು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ಅಂಥವರನ್ನು ನೋಡಿ ಸಿದ್ದರಾಮಯ್ಯ ಕಲಿಯಬೇಕು. ರೈಲ್ವೆ ಇಲಾಖೆ ನೇಮಕಾತಿಗಳಲ್ಲಿ ಆಯಾ ರಾಜ್ಯದ ಭಾಷೆಗಳಲ್ಲೇ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಬಡ್ತಿ ಪರೀಕ್ಷೆಗಳಿಗೆ ಪ್ರಾದೇಶಿಕ ಭಾಷೆ ಬಳಸಿಲ್ಲ. ಇದರಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

₹15 ಸಾವಿರ ಕೋಟಿ ರಾಜ್ಯ ಸರ್ಕಾರ ಕೇಂದ್ರದಿಂದ ಬಡ್ಡಿ ರಹಿತ ಸಾಲ ಪಡೆದಿದೆ

ಮಹದಾಯಿ ಯೋಜನೆಯಲ್ಲೂ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರಾಜ್ಯಗಳಿಗೆ ಅನುಕೂಲ ಮಾಡಿದ್ದೇವೆ. ನಮ್ಮ ಸಿಎಂ ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಕೇಂದ್ರದ ವಿರುದ್ಧ ಎತ್ತಿಕಟ್ಟುವುದಕ್ಕೇ ತಮ್ಮ ಅಧಿಕಾರ ಬಳಸಿಕೊಳ್ಳುತ್ತಿದ್ದಾರೆ. ₹15 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಕೇಂದ್ರದಿಂದ ಬಡ್ಡಿ ರಹಿತ ಸಾಲ ಪಡೆದಿದೆ. ಭಾರತ್‌ ಮಾಲಾ ಯೋಜನೆಯಲ್ಲಿ ರಾಜ್ಯದಲ್ಲಿ ₹63,304 ಕೋಟಿ ಬಂಡವಾಳ ಹಾಕಿದ್ದು, 2059 ಕಿ.ಮೀ ಹೆದ್ದಾರಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ₹8 ಸಾವಿರ ಕೋಟಿಯಲ್ಲಿ ಬೆಳಗಾವಿ-ಹುಣಗುಂದ ರಾಷ್ಟ್ರೀಯ ಹೆದ್ದಾರಿಗೂ ಶಂಕುಸ್ಥಾಪನೆ ಮಾಡಲಾಗಿದೆ. ದಾಬಸಪೇಟೆ- ಹೊಸಕೋಟೆ ಲೋಕಾರ್ಪಣೆ ಆಗಿದೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ₹8,480 ಕೋಟಿ ವೆಚ್ಚ ಮಾಡಿ ಲೋಕಾರ್ಪಣೆ ಮಾಡಿದ್ದೇವೆ. ₹4130 ಕೋಟಿಯಲ್ಲಿ 92 ಕಿ,ಮೀ ಉದ್ದದ ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆ, ಕೈಗಾರಿಕಾ ಕಾರಿಡಾರ್‌ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ವಿಮಾನ ನಿಲ್ದಾಣಗಳಿಗೆ ಹೊಸ ಟರ್ಮಿನಲ್‌ ಕಟ್ಟಡಗಳು ಮಂಜೂರಾಗಿವೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ₹5 ಸಾವಿರ ಕೋಟಿ ಮಂಜೂರು ಮಾಡಿದ್ದೇವೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಳಿತಪ್ಪಿದ್ದು, ಸಿದ್ದರಾಮಯ್ಯ ನಡವಳಿಕೆ, ಕಾರ್ಯವೈಖರಿ, ಭ್ರಷ್ಟಾಚಾರ ಎಲ್ಲವೂ ಶೀಘ್ರ ಆಚೆಗೆ ಬರಲಿದೆ. ರಸ್ತೆ- ರಸ್ತೆಗಳಲ್ಲಿ ಕಾಂಗ್ರೆಸಗರು ಹೊಡೆದಾಡುವ ಸ್ಥಿತಿ ಬರುತ್ತದೆ. ಸಿದ್ದರಾಮಯ್ಯರ ಮಗ ನೀಡುತ್ತಿರುವ ಹೇಳಿಕೆಗಳೇ ಇದರ ಮುನ್ಸೂಚನೆಗಳು ಎಂದು ಲೇವಡಿ ಮಾಡಿದರು.

ಏಳು ಹೊಸ ಹೈಸ್ಪೀಡ್ ರೈಲು ಘೋಷಣೆಯಲ್ಲಿ ಬೆಂಗಳೂರು-ಹೈದ್ರಾಬಾದ್, ಬೆಂಗಳೂರು-ಪುಣೆ ಸೇರಿವೆ. ಪುಣೆ-ಬೆಂಗಳೂರು ಕೆಲ ದಿನಗಳಲ್ಲಿ ಕೆಲಸ ಆರಂಭಿಸುತ್ತೇವೆ. ವರ್ಷದ 51 ವಾರವು ಹೊಸ ಯೋಜನೆ ಆರಂಭ ಮಾಡುತ್ತೇವೆ. ನಮ್ಮ ಮೆಟ್ರೋದಲ್ಲಿ 6 ಲಕ್ಷ ಜನರು ಓಡಾಡುತ್ತಿದ್ದಾರೆ. ನಮ್ಮ ಮೆಟ್ರೋ ಆಡಳಿತ ನಡೆಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು, ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ತಲೆ ಹಾಕಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ.

ವಿ.ಸೋಮಣ್ಣ, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ ಹಾಗೂ ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ ರೈಲ್ವೆಗೆ ಬಹಿಷ್ಕಾರ: ಹೊರಟ್ಟಿ ಎಚ್ಚರಿಕೆ
ಪೊಲೀಸರು ಕೇಸ್ ಹಾಕದಿದ್ರೆ ನಮಗೆ ಅರ್ಜಿ ಸಲ್ಲಿಸಿ: ಹೈಕೋರ್ಟ್ | ಏನಿದು ಪ್ರಕರಣ?