
ರಾಯಚೂರು (ಫೆ.4): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಜಾಲವಡಗಿ ಮತ್ತು ಬುದ್ದಿನ್ನಿ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿದೆ. ಹಳ್ಳದ ಪಕ್ಕದ ಪಟ್ಟಾ ಜಮೀನಿನಲ್ಲಿ ಮರಳುಗಾರಿಕೆ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಗುತ್ತಿಗೆದಾರರು, ಈಗ ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಮನಬಂದಂತೆ ಮರಳು ಎತ್ತುತ್ತಿದ್ದಾರೆ. ಈ ಅಕ್ರಮ ದಂಧೆಯಿಂದಾಗಿ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಶುರುವಾಗಿದೆ.
ಮಸ್ಕಿ ನಾಲಾದ ಹಳ್ಳದ ನೀರಿನ ದಿಸೆ ಬದಲಾಗುವ ಭೀತಿ ಎದುರಾಗಿದೆ. ಮಸ್ಕಿ ನಾಲಾಗೆ ಅಡ್ಡಲಾಗಿ ಶಿರನಗುಡಿ ಪಿಕ್ ಅಪ್ ನಿರ್ಮಿಸಲಾಗಿದ್ದು, ಇದರ ಮೂಲಕ ದಿದ್ದಗಿ, ರಾಮತ್ನಾಳ, ಬನ್ನಿಗನೂರು, ಯಾಪಲಪರ್ವಿ ಹಾಗೂ ರಾಗಲಪರ್ವಿ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ಪಟ್ಟಾ ಜಮೀನಿನಲ್ಲಿ ಇದೇ ರೀತಿ ಅಕ್ರಮ ಮರಳುಗಾರಿಕೆ ಮುಂದುವರಿದರೆ, ಸುಮಾರು 3 ಸಾವಿರ ಎಕರೆ ಕೃಷಿ ಭೂಮಿಗೆ ನೀರಿನ ಲಭ್ಯತೆ ಕಷ್ಟವಾಗಲಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಸಾರ್ವಜನಿಕರು ಮತ್ತು ರೈತರು ನೀಡಿದ ದೂರಿನ ಮೇರೆಗೆ ಮಸ್ಕಿ ತಹಸೀಲ್ದಾರ್, ಭೂ ವಿಜ್ಞಾನಿಗಳು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಾಲವಾಡಗಿ ಹಳ್ಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮರಳುಗಾರಿಕೆಯಿಂದ ಮಸ್ಕಿ ನಾಲಾದ ನೈಸರ್ಗಿಕ ಮಾರ್ಗ ಬದಲಾಗುವ ಸಾಧ್ಯತೆ ಇದೆ ಎಂದು ನೀರಾವರಿ ಅಧಿಕಾರಿಗಳು ಗಂಭೀರ ವರದಿ ನೀಡಿದ್ದಾರೆ. ಈ ವಿಶೇಷ ವರದಿಯ ಪ್ರತಿ ಈಗ 'ಏಷ್ಯಾನೆಟ್ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ.
ಜಿಲ್ಲಾಧಿಕಾರಿ ನಿತೀಶ್ ಕೆ. ವಾರ್ನಿಂಗ್
ಈ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಎಸ್ಪಿ ನೇತೃತ್ವದಲ್ಲಿ ಹಲವು ಸಭೆಗಳನ್ನು ಮಾಡಿದ್ದೇವೆ. ಜಾಲವಾಡಗಿ ವ್ಯಾಪ್ತಿಯಲ್ಲಿ 30 ಮೀಟರ್ ಬಫರ್ ಜೋನ್ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನೀರಾವರಿ ಇಲಾಖೆಯ ವರದಿ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತಾಂತ್ರಿಕ ತಂಡದಿಂದ ಸಮಗ್ರ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ನಿಯಮ ಉಲ್ಲಂಘನೆಯಾಗಿದ್ದರೆ ಕೂಡಲೇ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ