
ರಾಯಚೂರು (ಸೆ.7): ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದ್ದು, ರಾಯಚೂರು-ಹೈದರಾಬಾದ್ ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕೃಷ್ಣಾ ನದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುವ ವೇಳೆ, ಮೂರ್ತಿಯ ಕೈಗೆ ರಸ್ತೆ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಸಿಲುಕಿಕೊಂಡಿದ್ದರಿಂದ ಬೃಹತ್ ಗಣಪತಿಯ ಮೆರವಣಿಗೆ ರಸ್ತೆಯ ಮಧ್ಯದಲ್ಲೇ ನಿಂತುಹೋಗಿದೆ.
ಈ ಘಟನೆಯಿಂದಾಗಿ ಶಕ್ತಿನಗರದ ಬಳಿ ವಾಹನಗಳು ಸಂಚರಿಸಲಾಗದೆ ಸಾಲಾಗಿ ನಿಂತ ನೂರಾರು ವಾಹನಗಳಿಂದ ರಸ್ತೆ ಸಂಪೂರ್ಣ ಸ್ಥಗಿತಗೊಂಡಿತು. ಗಣೇಶ ಚತುರ್ಥಿಯ ಐದನೇ ದಿನದಂದು ನಡೆದ ಈ ಘಟನೆಯಿಂದ ಸ್ಥಳೀಯ ಭಕ್ತರು ಮತ್ತು ಪ್ರಯಾಣಿಕರು ತೀವ್ರ ತೊಂದರೆಗೊಳಗಾದರು. ಮಾಹಿತಿ ತಿಳಿದ ಕೂಡಲೇ ಶಕ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಸ್ಥಳೀಯರ ಸಹಕಾರದಿಂದ ಟಿಪ್ಪರ್ ವಾಹನವನ್ನು ಬಳಸಿ, ಗಣೇಶ ಮೂರ್ತಿಗೆ ಸಿಲುಕಿದ ವಿದ್ಯುತ್ ತಂತಿಯನ್ನು ಎಚ್ಚರಿಕೆಯಿಂದ ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯಿಂದಾಗಿ ಗಣೇಶ ಮೂರ್ತಿಯ ಮೆರವಣಿಗೆ ಮುಂದುವರಿಯಲು ಸಾಧ್ಯವಾಯಿತಾದರೂ, ಟ್ರಾಫಿಕ್ ಜಾಮ್‌ನಿಂದಾಗಿ ಗಂಟೆಗಟ್ಟಲೇ ಪ್ರಯಾಣಿಕರು ರಸ್ತೆಯಲ್ಲೇ ಕಾಯುವಂತಾಯಿತು.
ಶಕ್ತಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಈ ಘಟನೆಯಿಂದಾಗಿ ಭಕ್ತರಲ್ಲಿ ಕ್ಷಣಿಕ ಆತಂಕ ಉಂಟಾದರೂ, ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮಗಳಿಂದ ಅನಾಹುತ ಸಂಭವಿಸಲಿಲ್ಲ. ಈ ಘಟನೆಯಿಂದಾಗಿ ಭವಿಷ್ಯದಲ್ಲಿ ಇಂತಹ ಮೆರವಣಿಗೆಗಳಿಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳ ಅಗತ್ಯವಿದೆ ಎಂಬುದು ತೋರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ