
ಬೆಂಗಳೂರು (ಡಿ.02): ರಾಜ್ಯದಲ್ಲಿನ ಕಳಪೆ ರಸ್ತೆಗಳ ದುಸ್ಥಿತಿ ಮತ್ತು ಅವುಗಳಿಂದ ಸಂಭವಿಸುತ್ತಿರುವ ಸಾವುಗಳ ಕುರಿತು ಆತಂಕಕಾರಿ ಅಂಕಿ-ಅಂಶಗಳು ಬೆಳಕಿಗೆ ಬಂದ ಬೆನ್ನಲ್ಲೇ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ 5 ಮಹಾನಗರಗಳಲ್ಲಿ ಕಳೆದ 11 ತಿಂಗಳಲ್ಲಿ ಬರೀ ರಸ್ತೆಗುಂಡಿಗಳಿಂದಲೇ '558 ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿರುವ' ಸಂಗತಿಯು ಸರ್ಕಾರದ ದುರಾಡಳಿತ ಮತ್ತು ಅಸಮರ್ಥತೆಗೆ ಕನ್ನಡಿ ಹಿಡಿದಿದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಉಲ್ಲೇಖಿಸಿರುವ ಅಶೋಕ್, 'ರಾಜ್ಯದ ಉದ್ದಗಲಕ್ಕೂ ಯಮಸ್ವರೂಪಿ ಗಂಡಾ ಗುಂಡಿಗಳದ್ದೇ ಹಾವಳಿಯಾಗಿದೆ. ಇಡೀ ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ 'ಛೀ ಥೂ' ಎಂದು ಸರ್ಕಾರಕ್ಕೆ ಉಗಿಯುತ್ತಿದ್ದರೂ ನಿಮ್ಮ 'ದಪ್ಪ ಚರ್ಮದ ಸರ್ಕಾರ' ಮಾತ್ರ ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ ಸ್ವಾರ್ಥ ಸಾಧನೆಯಲ್ಲೇ ಮುಳುಗಿರುವುದು ನಾಚಿಕೆಗೇಡಿನ ಸಂಗತಿ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಗಳ ಸಮಸ್ಯೆಯ ಜೊತೆಗೆ ರೈತರ ಕಡೆಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆಯೂ ಆರ್. ಅಶೋಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಭರವಸೆ ನೀಡಿ 10 ದಿನಗಳು ಕಳೆದರೂ, ರಾಜ್ಯದಲ್ಲಿ ಇದುವರೆಗೂ ಒಂದೇ ಒಂದು ಖರೀದಿ ಕೇಂದ್ರವೂ ಆರಂಭವಾಗಿಲ್ಲ ಎಂದು ದೂರಿದ್ದಾರೆ. 'ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಇನ್ನೂ ಎಷ್ಟು ದಿನ ಬೇಕು ಸ್ವಾಮಿ? ಹೈಕಮಾಂಡ್ ಏಜೆಂಟ್ ಕೆ.ವಿ. ವೇಣುಗೋಪಾಲ್ ಆದೇಶಕ್ಕೆ ಕಾಯ್ತಾ ಇದೀರಾ? ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಯಲಿ ಅಂತಾ ವೇಟ್ ಮಾಡ್ತಾ ಇದೀರಾ? ಎಂದು ವ್ಯಂಗ್ಯಭರಿತ ಪ್ರಶ್ನೆಗಳನ್ನು ಎಸೆದಿದ್ದಾರೆ.
ರೈತರ ಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅಶೋಕ್, 'ರೈತರ ಕಷ್ಟಕ್ಕೆ ಸ್ಪಂದಿಸದ ನಿಮ್ಮಂಥವರಿಗೆ ಯಾಕೆ ಸ್ವಾಮಿ ಅಧಿಕಾರ, ಕುರ್ಚಿ? ಜನ ಈ 'ನಾಲಾಯಕ್ ಸರ್ಕಾರವನ್ನ' ಹಾದಿ ಬೀದಿಯಲ್ಲಿ ಛೀ ಥೂ ಅಂತ ಉಗಿಯುತ್ತಿದ್ದಾರೆ, ಶಾಪ ಹಾಕುತ್ತಿದ್ದಾರೆ. ಅನ್ನದಾತರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಅವರ ನೋವಿನ ಶಾಪ ತಟ್ಟದೇ ಇರದು' ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಟ್ವೀಟ್ ಮೂಲಕ ಆರ್. ಅಶೋಕ್ ಅವರು #CongressFailsKarnataka ಎಂಬ ಹ್ಯಾಷ್‌ಟ್ಯಾಗ್ ಬಳಸಿ, ರಸ್ತೆ ಸುರಕ್ಷತೆ ಮತ್ತು ರೈತರ ಸಮಸ್ಯೆಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ