
ಬೆಂಗಳೂರು (ಮೇ. 8): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ (PSI recruitment Scam) ಹಗರಣದ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿ ವಿಭಾಗದಲ್ಲಿ (Police recruitment Section) ‘ಸ್ವಚ್ಛತಾ ಅಭಿಯಾನ’ ಬಿರುಸುಗೊಂಡಿದ್ದು, ಈ ವಿಭಾಗದ 12 ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ (DGP Paveen Sood) ಆದೇಶಿಸಿದ್ದಾರೆ.
ನೇಮಕಾತಿ ವಿಭಾಗದ ಆಡಳಿತಾಧಿಕಾರಿ, ಕಚೇರಿ ಅಧೀಕ್ಷಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕರು, ತಾಂತ್ರಿಕ ವಿಭಾಗದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 12 ವರ್ಗವಾಗಿದ್ದು, ಈ ಅಧಿಕಾರಿಗಳು ಕಳೆದ ಐದಾರು ವರ್ಷಗಳಿಂದ ನೇಮಕಾತಿ ವಿಭಾಗದಲ್ಲೇ ಠಿಕಾಣಿ ಹೂಡಿದ್ದರು ಎನ್ನಲಾಗಿದೆ.
ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ನಂತರ ನೇಮಕಾತಿ ವಿಭಾಗದಲ್ಲಿ ‘ಸ್ವಚ್ಛತಾ ಅಭಿಯಾನ’ ಆರಂಭವಾಯಿತು. ಮೊದಲ ಹಂತದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ (Amruth Paul), ಡಿವೈಎಸ್ಪಿ ಶಾಂತಕುಮಾರ್ (DYSP ShantaKumar) ಅವರನ್ನು ಸರ್ಕಾರ ಎತ್ತಂಗಡಿ ಮಾಡಿತ್ತು. ತರುವಾಯ ನೇಮಕಾತಿ ವಿಭಾಗದ ಎಡಿಜಿಪಿ ಮತ್ತು ಡಿಐಜಿ ಕಚೇರಿಯ ನಾಲ್ವರು ಸಿಬ್ಬಂದಿ ವರ್ಗವಾಗಿದ್ದರು.
ಎಎಸ್‌ಐಗಳಿಗೆ ಎಸ್‌ಐ ಆಗಿ ತಾತ್ಕಾಲಿಕ ಬಡ್ತಿ: ಡಿಜಿಪಿ
ಬೆಂಗಳೂರು: ಪರೀಕ್ಷಾ ಅಕ್ರಮದಿಂದ ಪಿಎಸ್‌ಐ ನೇಮಕಾತಿ ವಿಳಂಬ ಹಿನ್ನೆಲೆಯಲ್ಲಿ, ಸೇವಾ ಹಿರಿತನ ಆಧಾರದಡಿ ಪಿಎಸ್‌ಐ ಹುದ್ದೆಗಳಿಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ)ಗಳಿಗೆ ತಾತ್ಕಾಲಿಕ ಮುಂಬಡ್ತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ.
ಈ ಮುಂಬಡ್ತಿ ಪ್ರಕ್ರಿಯೆಯನ್ನು ಆಯುಕ್ತರು ಹಾಗೂ ಐಜಿಪಿಗಳು (IGP) ನಡೆಸಲಿದ್ದು, ಮುಂಬಡ್ತಿಗೆ 1 ವರ್ಷದ ಅವಧಿಯಲ್ಲಿ ನಿವೃತ್ತಿ ಹೊಂದಲಿರುವ ಎಎಸ್‌ಐಗಳನ್ನು ( ASI ) ಮೊದಲು ಪರಿಗಣಿಸುವಂತೆ ಡಿಜಿಪಿ ಸೂಚಿಸಿದ್ದಾರೆ. ಈ ಮುಂಬಡ್ತಿ ನೀಡುವ ಮುನ್ನ ಯಾವುದೇ ಜ್ಯೇಷ್ಠತೆ ಮುಂದಿಟ್ಟು ಹಕ್ಕೊತ್ತಾಯ ಮಂಡಿಸುವಂತಿಲ್ಲ ಹಾಗೂ ನೇರ ನೇಮಕಾತಿ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಪ್ರಭಾರದ ಮುಂಬಡ್ತಿ ರದ್ದುಗೊಳ್ಳಲಿದೆ ಎಂದು ಮುಚ್ಚಳಿಕೆ ಬರೆಸಿಕೊಳ್ಳುವಂತೆ ಸಹ ಡಿಜಿಪಿ ಹೇಳಿದ್ದಾರೆ.
ಬಂಧಿತ ಡಿವೈಎಸ್ಪಿ, ಸಿಪಿಐ ಅಮಾನತು
ಕಲಬುರಗಿ (ಮೇ. 8): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪದಡಿ ಸದ್ಯ ಸಿಐಡಿ ಬಂಧನಲ್ಲಿರುವ ರಾಯಚೂರು ಜಿಲ್ಲೆ (Raichur ) ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ( DYSP Mallikarjun Sali ), ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರಿ (CPI Anand Metri) ಇವರಿಬ್ಬರು ಸೇವೆಯಿಂದ ಅಮಾನತುಗೊಡಿದ್ದಾರೆ.
ಅಕ್ರಮದ ಡೀಲ್ ಮಾಡಿರುವ, ಬ್ಲ್ಯಾಕ್‌ಮೇಲ್ ಮಾಡಿರುವ ಹಾಗೂ ಭದ್ರತೆಯಲ್ಲಿ ಸಡಿಲಿಕೆ ನೀಡಿ ಅಕ್ರಮ ನಡೆಯಲು ಅವಕಾಶ ನೀಡಿರುವ ಹಲವು ಆರೋಪಗಳು ಇವರಿಬ್ಬರ ಮೇಲಿವೆ. ಇವರಿಬ್ಬರನ್ನು ಕೋರ್ಚ್ 8 ದಿನಗಳವರೆಗೂ ಸಿಐಡಿ ವಶಕ್ಕೆ ನೀಡಲಾಗಿದೆ. ಈ ಮಧ್ಯೆ, ಎಸ್ಪಿ ಕಚೇರಿ ಹಿರಿಯ ಅಧಿಕಾರಿಗಳು ಇಲ್ಲಿನ ಸಿಐಡಿ ಕಚೇರಿಗೆ ಬಂದು ಇಬ್ಬರ ಮೇಲಿನ ಆರೋಪಗಳ ಕುರಿತು ವಿವರಣೆ ಇರುವ ಸಿಐಡಿ ವರದಿ ಪಡೆದುಕೊಂಡಿದ್ದಾರೆ.
ಆರ್.ಡಿ.ಪಾಟೀಲ್ ಆಸ್ತಿಪಾಸ್ತಿ ಮೇಲೆ ಕಣ್ಣು: ಪಿಎಸ್‌ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಅಕ್ರಮದಿಂದ ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ಆರೋಪ ಕೇಳಿಬಂದಿರುವ ಕಾರಣ ಆತನ ಅಕೌಂಟ್‌ಗಳನ್ನು ಸಿಐಡಿ ಶುಕ್ರವಾರವೇ ಮುಟ್ಟುಗೋಲು ಹಾಕಿದೆ. ಹಗರಣದಲ್ಲಿ ಗಳಿಸಿದ ಹಣವನ್ನೆಲ್ಲ ಈತ ವಿವಿಧ ಆಸ್ತಿ-ಪಾಸ್ತಿಗಳಲ್ಲಿ ಹೂಡಿರುವ ಶಂಕೆಯೂ ಸಿಐಡಿಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ