
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಏ.23): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ (PSI Recruitment Scam) ‘ಕಪ್ಪು ಕಾಂಚಾಣ’ ಕುಣಿದಿದ್ದು, ಪೊಲೀಸರಿಗೆ ಸಿಕ್ಕಿಬೀಳುವ ಭಯಕ್ಕೆ ತನ್ನ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳಿಂದ ಹಗರಣದ ಕಿಂಗ್‌ಪಿನ್ ಎನ್ನಲಾದ ಕಲಬುರಗಿ (Kalaburagi) ಜಿಲ್ಲೆಯ ನಾಯಕಿ ನಗದು ರೂಪದಲ್ಲಿ ಲಕ್ಷಾಂತರ ರು. ಹಣ ಪಡೆದಿದ್ದಳು ಎಂಬ ಸಂಗತಿ ಸಿಐಡಿ ತನಿಖೆಯಲ್ಲಿ (CID Investigation) ಬೆಳಕಿಗೆ ಬಂದಿದೆ.
ಆನ್‌ಲೈನ್ ಅಥವಾ ಚೆಕ್ ಮೂಲಕ ಹಣ ವರ್ಗಾವಣೆ ಮಾಡಿದರೆ ದಾಖಲೆ ಸಹಿತ ಪೊಲೀಸರಿಗೆ ಸಿಕ್ಕಿಬೀಳಬೇಕಾಗುತ್ತದೆ. ಅಲ್ಲದೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾದರೆ ಆದಾಯ ತೆರಿಗೆ ಸೇರಿದಂತೆ ಇತರೆ ಇಲಾಖೆಗಳ ಕಣ್ಣು ಬೀಳುತ್ತದೆ. ಹೀಗಾಗಿ ಈ ಗೋಡವೆ ಬೇಡ. ನೀವು ನಗದು ರೂಪದಲ್ಲೇ ಹಣ ನೀಡಬೇಕು ಎಂದು ಈ ನಾಯಕಿ ಷರತ್ತು ವಿಧಿಸಿದ್ದಳು. ಕಳೆದ ಅಕ್ಟೋಬರ್ 3ರಂದು ಪಿಎಸ್‌ಐ ಪ್ರವೇಶ ಪರೀಕ್ಷೆಗೂ ಮುನ್ನ ಈ ನಾಯಕಿಗೆ ಅಭ್ಯರ್ಥಿಗಳು ಚೀಲದಲ್ಲಿ ತುಂಬಿ ಹಣ ತಲುಪಿಸಿದ್ದರು. ಪ್ರಕರಣದ ಸಂಬಂಧ ಈಕೆಯ ಮನೆಯ ಮೇಲೆ ಸಿಐಡಿ ದಾಳಿ ನಡೆಸಿದಾಗ 1 ಲಕ್ಷ ರು. ನಗದು ಪತ್ತೆಯಾಗಿದೆ ಎನ್ನಲಾಗಿದೆ.
PSI Recruitment Scam: ಪಿಎಸ್‌ಐ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ
ಅಲ್ಲದೆ ಈಗ ಬಂಧಿತರಾಗಿರುವ ನಾಲ್ವರು ಅಭ್ಯರ್ಥಿಗಳ ಪೈಕಿ ವೀರೇಶ್ ಸೇರಿ ಇಬ್ಬರು ಸರ್ಕಾರಿ ನೌಕರರ ಕುಟುಂಬದ ಸದಸ್ಯರಾಗಿದ್ದಾರೆ. ಕಲುಬುರಗಿ ಜಿಲ್ಲೆಯಲ್ಲಿ ವೀರೇಶ್ ತಂದೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ. ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದರೆ ಹಣ ನೀಡಿದ ಹಾಗೂ ಸ್ವೀಕರಿಸಿದವರಿಬ್ಬರೂ ಕಷ್ಟಕ್ಕೆ ಸಿಲುಕಬಹುದು ಎಂಬ ಲೆಕ್ಕಾಚಾರದಲ್ಲೇ ನಗದು ವ್ಯವಹಾರ ನಡೆಸಿದ್ದಾರೆ. ಕೆಲವರು ಸಾಲ ಮಾಡಿ ನಾಯಕಿಗೆ ಹಣ ನೀಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಸಿಐಡಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷ ಹಾಗೂ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಈ ನಾಯಕಿ ತನ್ನ ಇಮೇಜ್ ಬಳಸಿಕೊಂಡೇ ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಜನರನ್ನು ಸೆಳೆದಿದ್ದಳು. ಅಲ್ಲದೆ ತಾನು ಪಕ್ಷದ ಹಿರಿಯ ನಾಯಕರ ಜೊತೆ ತೆಗೆಸಿಕೊಂಡಿದ್ದ ಪೋಟೋಗಳನ್ನು ಮೊಬೈಲ್‌ನಲ್ಲಿ ತೋರಿಸಿ ಅಭ್ಯರ್ಥಿಗಳಿಗೆ ವಿಶ್ವಾಸ ಮೂಡಿಸಿದ್ದಳು.
‘ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ನನಗೆ ಹಲವು ಸಚಿವರು ಪರಿಚಿತರು. ನಿಮಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ. ಆದರೆ ನಾನು ಕೇಳಿದಷ್ಟುಹಣ ಕೊಡಬೇಕು’ ಎಂದು ನಾಯಕಿ ಹೇಳಿದ್ದಳು. ಈ ಮಾತು ನಂಬಿದ ವೀರೇಶ್ ಸೇರಿದಂತೆ 10ಕ್ಕೂ ಹೆಚ್ಚಿನ ಅಭ್ಯರ್ಥಿಗಳು, ಆಕೆ ಕೇಳಿದಷ್ಟು ಹಣ ಕೊಟ್ಟಿದ್ದರು. ಕೆಲವು ಆರೋಪಿಗಳು ತಾವು ಕೃಷಿ ಜಮೀನು, ನಿವೇಶನ ಹಾಗೂ ಚಿನ್ನ ಮಾರಾಟ ಮಾಡಿ ಹಣ ಹೊಂದಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಆಕೆಯ ಪತಿ, ತನಗೇನೂ ಈ ವ್ಯವಹಾರ ಗೊತ್ತಿಲ್ಲ. ಶಾಲೆ ಹಾಗೂ ರಾಜಕೀಯ ವ್ಯವಹಾರಗಳು ನನ್ನ ಪತ್ನಿಗೆ ಮಾತ್ರ ತಿಳಿದಿದೆ ಎಂದು ಹೇಳುತ್ತಿದ್ದಾನೆ. ಹೀಗಾಗಿ ತಪ್ಪಿಸಿಕೊಂಡಿರುವ ನಾಯಕಿ ಪತ್ತೆಯಾದ ಬಳಿಕ ಹಣದ ವ್ಯವಹಾರದ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಸಿಐಡಿ ಉನ್ನತ ಮೂಲಗಳು ಹೇಳಿವೆ.
PSI Recruitment Scam: ಅಫಜಲ್ಪುರ ಕಾಂಗ್ರೆಸ್ ಶಾಸಕರ ಗನ್ ಮ್ಯಾನ್ ಅರೆಸ್ಟ್!
ಶಿಕ್ಷಕಿಯರಿಗೆ ಸಿಕ್ಕಿದ್ದು ಅಲ್ಪ, ನಾಯಕಿಗೇ ಸಿಂಹಪಾಲು: ಪಿಎಸ್‌ಐ ಹುದ್ದೆಗೆ ತನ್ನ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳಿಂದ 60 ರಿಂದ 80 ಲಕ್ಷದವರೆಗೆ ನಾಯಕಿ ಹಣ ಪಡೆದಿದ್ದಳು. ಆದರೆ ಈ ಹಣದಲ್ಲಿ ಸಿಂಹಪಾಲು ಆಕೆಗೇ ಹೋಗಿದೆ. ಇನ್ನುಳಿದ ಆರೋಪಿಗಳು ಅಲ್ಪ ತೃಪ್ತರಾಗಿದ್ದರು. ಈ ಹಣದಲ್ಲಿ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಾಗಿದ್ದ ತನ್ನ ಶಾಲೆಯ ಶಿಕ್ಷಕಿಯರಿಗೆ ತಲಾ ಒಬ್ಬರಿಗೆ .5 ರಿಂದ 7 ಲಕ್ಷ ಹಾಗೂ ಮುಖ್ಯ ಶಿಕ್ಷಕನಿಗೆ 10 ರಿಂದ 15 ಲಕ್ಷ ರು. ಕೊಟ್ಟಿದ್ದಳು. ಇನ್ನುಳಿದ ಹಣವನ್ನು ಆಕೆಯೇ ಲಪಟಾಯಿಸಿದ್ದಾಳೆ. ವಿಚಾರಣೆ ವೇಳೆ ಎಲ್ಲ ಆರೋಪಿಗಳು ಹಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆದರೆ ಆ ಹೇಳಿಕೆ ಆಧರಿಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಐಡಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ