- ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ನಕಲಿಗೆ ನಾನಾ ತಂತ್ರ ಬಳಕೆ
- ಎಕ್ಸಾಂ ರೂಂ ಪಕ್ಕದ ಹೂಕುಂಡದಲ್ಲಿ ಬಚ್ಚಿಟ್ಟಿದ್ದ ಬ್ಲೂಟೂತ್
- ಬಂಧಿತ ಅಭ್ಯರ್ಥಿ ಪ್ರಭು ಶರಣಪ್ಪನಿಂದ ಸಿಐಡಿಗೆ ಮಾಹಿತಿ
ಕಲಬುರಗಿ(ಮೇ.04): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಬ್ಲೂಟೂತ್ ಅನ್ನು ತಪಾಸಣಾ ಸಿಬ್ಬಂದಿಯ ಕಣ್ತಪ್ಪಿಸಿ ಪರೀಕ್ಷಾ ಕೇಂದ್ರಕ್ಕೆ ಯಾವ ರೀತಿ ಕೊಂಡೊಯ್ಯಲಾಗುತ್ತಿತ್ತು ಎಂಬ ಮತ್ತೊಂದು ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪರೀಕ್ಷೆಗೂ ಮುನ್ನಾದಿನ ಪರೀಕ್ಷಾ ಕೇಂದ್ರದ ಮುಂದಿರುವ ಹೂಕುಂಡದಲ್ಲಿ ಬ್ಲೂಟೂತ್ ಬಚ್ಚಿಟ್ಟು, ಪರೀಕ್ಷೆ ದಿನ ಅದನ್ನು ಒಳಉಡುಪಲ್ಲಿ ಇಟ್ಟುಕೊಂಡು ಕೋಣೆಯೊಳಗೆ ಕೊಂಡೊಯ್ದಿದ್ದಾಗಿ ಆರೋಪಿಯೊಬ್ಬ ಇದೀಗ ಸಿಐಡಿ ಮುಂದೆ ಬಾಯ್ಬಿಟ್ಟಿದ್ದಾನೆ.
ಕಲಬುರಗಿಯ ಎಂ.ಎಸ್.ಇರಾನಿ ಪದವಿ ಕಾಲೇಜಿನಲ್ಲಿ ಪಿಎಸ್‌ಐ ಪರೀಕ್ಷೆ ವೇಳೆ ಅಕ್ರಮ ನಡೆಸಿ ಬಂಧಿತನಾಗಿರುವ ಅಭ್ಯರ್ಥಿ ಪ್ರಭು ಶರಣಪ್ಪ ಈ ವಿಚಾರ ಬಹಿರಂಗಪಡಿಸಿದ್ದಾನೆ. ಮಂಗಳವಾರ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಈತನನ್ನು ಪರೀಕ್ಷೆ ನಡೆದ ಎಂ.ಎಸ್.ಇರಾನಿ ಪದವಿ ಕಾಲೇಜಿನೊಳಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಈ ಅಕ್ರಮದ ಕುರಿತು ಮಾಹಿತಿ ಪಡೆದಿದ್ದಾರೆ.
ಕಲಬುರಗಿ ಆಯ್ತು, ಯಾದಗಿರಿಯಲ್ಲೂ ಅಕ್ರಮ ನೇಮಕ..?
1 ದಿನ ಮೊದಲೇ ಹೋಗಿದ್ದ: ಪರೀಕ್ಷೆಗೂ ಒಂದು ದಿನ ಮೊದಲೇ ಪ್ರಭು ಶರಣಪ್ಪ ಪರೀಕ್ಷಾ ಕೇಂದ್ರದತ್ತ ಹೋಗಿ ಬಂದಿದ್ದ. ಅ.3ರಂದು ಪರೀಕ್ಷೆ ಇತ್ತು. ಹೀಗಾಗಿ ಅ.2ರಂದೇ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಲು ಎಂ.ಎಸ್.ಇರಾನಿ ಕಾಲೇಜಿಗೆ ಹೋಗಿದ್ದ. ಆತನ ಹಾಲ್‌ಟಿಕೆಟ್ ಅನುಸಾರ ಯಾವ ಕೋಣೆಯಲ್ಲಿ ಪರೀಕ್ಷೆ ಬರೆಯಬೇಕಿತ್ತೋ ಆ ಕೋಣೆಯ 20 ಮೀಟರ್ ಅಂತರದಲ್ಲಿರುವ ಹೂಕುಂಡದಲ್ಲಿ ಬ್ಲೂಟೂತ್ ಉಪಕರಣ ಬಚ್ಚಿಟ್ಟು ಬಂದಿದ್ದ. ಪರೀಕ್ಷೆ ದಿನ ಆ ಬ್ಲೂಟೂತ್ ಅನ್ನು ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಒಳಉಡುಪಿನಲ್ಲಿ ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಗಿ ಸ್ಥಳ ಮಹಜರು ವೇಳೆ ಆರೋಪಿ ಹೇಳಿಕೊಂಡಿದ್ದಾನೆ.
ಎಂ.ಎಸ್.ಇರಾನಿ ಪದವಿ ಕಾಲೇಜಿನ ಕಂಪ್ಯೂಟರ್ ಕೋಣೆ ಪ್ರಭುವಿನ ಪರೀಕ್ಷಾ ಕೇಂದ್ರವಾಗಿತ್ತು. ಪರೀಕ್ಷೆ ದಿನ ಮೆಟಲ್ ಡಿಟೆಕ್ಟರ್ ಸೇರಿ ವಿವಿಧ ರೀತಿಯಲ್ಲಿ ಅಭ್ಯರ್ಥಿಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗುತ್ತದೆ. ಆ ಸಂದರ್ಭದಲ್ಲಿ ಬ್ಲೂಟೂತ್ ಪತ್ತೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ತಂತ್ರ ಅನುಸರಿಸಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.
ಪರೀಕ್ಷೆ ಅಕ್ರಮದ ಕಿಂಗ್ಪಿನ್ ಆಗಿರುವ ಆರ್.ಡಿ.ಪಾಟೀಲನಿಗೆ ಹಣ ಕೊಟ್ಟೇ ಪ್ರಭು ಶರಣಪ್ಪ ಎಕ್ಸಾಂಗೆ ಕೂತಿದ್ದ. ಹೀಗಾಗಿ ಈತನಿಗೂ ಬ್ಲೂಟೂತ್ ಅನ್ನು ಹೇಗೆ ಬಳಸಬೇಕು ಎಂಬ ಕುರಿತು ಆರ್.ಡಿ.ಪಾಟೀಲ ಗ್ಯಾಂಗ್ ತರಬೇತಿ ನೀಡಿತ್ತು ಎಂದು ಹೇಳಲಾಗಿದೆ.
ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್
ಕಾಶೀನಾಥ್ರಿಂದ ಅಕ್ರಮ ಹೇಗೆ?
ದಿವ್ಯಾ ಹಾಗರಗಿಗೆ ಪರೀಕ್ಷೆ ಮೇಲ್ವಿಚಾರಕರಿಂದಲೇ ಓಎಂಆರ್ಶೀಟ್ನಲ್ಲಿ ಉತ್ತರ ಬರೆಸುವ ಪ್ಲ್ಯಾನ್ ಕೊಟ್ಟಿದ್ದೇ ಕಾಶೀನಾಥ್ ಎನ್ನಲಾಗಿದೆ. ಅಕ್ರಮ ನಡೆದ ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಈತನೇ ಆಗಿದ್ದ. ಡೀಲ್ ಮಾಡಿಕೊಂಡ ಅಭ್ಯರ್ಥಿಗಳು ಯಾವ ಕೊಠಡಿಯಲ್ಲಿ ಕೂತಿದ್ದಾರೆಂದು ಸ್ಪಷ್ಟವಾಗಿ ತಿಳಿದುಕೊಂಡಿದ್ದ ಕಾಶೀನಾಥ್, ಆ ಕೊಠಡಿಗಳಿಗೆ ತನಗೆ ಬೇಕಾದ ಶಿಕ್ಷಕಿಯರನ್ನು ಮೇಲ್ವಿಚಾರಕರನ್ನಾಗಿ ಹಾಕಿದ್ದ. ಅವರಿಗೆ ಅಭ್ಯರ್ಥಿಗಳ ಓಎಂಆರ್ ಶೀಟ್ ನಂಬರ್ ಕೂಡ ನೀಡಿದ್ದ. ಪರೀಕ್ಷೆ ಬರೆದು ಹೋದ ವಿದ್ಯಾರ್ಥಿಗಳ ಓಎಂಆರ್‌ಶೀಟ್ ಅನ್ನು ಮೇಲ್ವಿಚಾರಕರೇ ತಿದ್ದುತ್ತಿದ್ದರು. ಈ ಮೂಲಕ ಹಣ ಕೊಟ್ಟವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ನೆರವಾಗುತ್ತಿದ್ದರು ಎಂದು ಹೇಳಲಾಗಿದೆ.