PSI Scam; ಅಮೃತ್‌ಪಾಲ್‌ ಸ್ನೇಹಿತರ ಮೇಲೆ ಸಿಐಡಿ ದಾಳಿ, ಮಹತ್ವದ ದಾಖಲೆ ವಶ

By Kannadaprabha NewsFirst Published Aug 3, 2022, 6:21 AM IST
Highlights

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಸ್ನೇಹಿತರಿಗೂ ಸಿಐಡಿ ತನಿಖೆ ಬಿಸಿ ತಟ್ಟಿದ್ದು,  ಇಬ್ಬರು ಉದ್ಯಮಿ ಗೆಳೆಯರ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ.

ಬೆಂಗಳೂರು (ಆ.3): ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಸ್ನೇಹಿತರಿಗೂ ಸಿಐಡಿ ತನಿಖೆ ಬಿಸಿ ತಟ್ಟಿದ್ದು, ಮಂಗಳವಾರ ಅವರ ಇಬ್ಬರು ಉದ್ಯಮಿ ಗೆಳೆಯರ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ. ಸಹಕಾರ ನಗರದ ಉದ್ಯಮಿ ಶಂಭುಲಿಂಗಯ್ಯ ಹಾಗೂ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಆನಂದ್‌ ಅವರಿಗೆ ಸಂಕಷ್ಟಎದುರಾಗಿದ್ದು, ಎಡಿಜಿಪಿ ಅಮೃತ್‌ ಪಾಲ್‌ ಜತೆ ಹಣಕಾಸು ವ್ಯವಹಾರ ಹೊಂದಿದ ಶಂಕೆ ಮೇರೆಗೆ ದಾಳಿ ನಡೆದಿದೆ. ಸಹಕಾರ ನಗರದಲ್ಲಿರುವ ಶಂಭುಲಿಂಗಯ್ಯ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಹುಸ್ಕೂರಿನಲ್ಲಿರುವ ಆನಂದ್‌ ಮನೆಗಳಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶೋಧಿಸಿ ಸಿಐಡಿ ದಾಖಲೆಗಳನ್ನು ಜಪ್ತಿ ಮಾಡಿದೆ. ಬಳಿಕ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆ ಇಬ್ಬರಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲದಲ್ಲಿ ಆನಂದ್‌ ಲೇಔಟ್‌ ನಿರ್ಮಿಸಿದ್ದು, ಇದರಲ್ಲಿ ಅಮೃತ್‌ ಪಾಲ್‌ ಹಣ ಹೂಡಿಕೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಕೇಂದ್ರ ವಲಯ ಐಜಿಪಿ ಆಗಿದ್ದಾಗ ಅಮೃತ್‌ ಪಾಲ್‌ ಅವರಿಗೆ ಆನಂದ್‌ ಪರಿಚಯವಾಗಿತ್ತು. ಆನಂತರ ಈ ಗೆಳೆತನದಲ್ಲೇ ಪಾಲುದಾರಿಕೆಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿದ್ದರು. ಅದೇ ರೀತಿ ಶಂಭುಲಿಂಗಯ್ಯ ಜತೆ ಎಡಿಜಿಪಿ ಅವರು ಭೂ ವ್ಯವಹಾರ ನಡೆಸಿರುವ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕಿದೆ ಎಂದು ತಿಳಿದು ಬಂದಿದೆ.

ಎಸ್‌ಐ ಹಗರಣದ ದಿವ್ಯಾ ಹಾಗರಗಿ ಪಿಐಎಲ್‌ ಹೈಕೋರ್ಚ್‌ನಲ್ಲಿ ವಜಾ:  ಕರ್ನಾಟಕ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ವಿಜ್ಞಾನ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರಕ್ಕೆ ವಿಶೇಷಾಧಿಕಾರಿಯಾಗಿ ಡಾ.ಎನ್‌.ರಾಮಕೃಷ್ಣಾರೆಡ್ಡಿ ಅವರನ್ನು ನೇಮಕ ಮಾಡಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು 2020ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹೈಕೋರ್ಚ್‌ ಮಂಗಳವಾರ ವಜಾಗೊಳಿಸಿದೆ.

‘ಅರ್ಜಿದಾರರು ತಾವು ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ ನಾಮನಿರ್ದೇಶಿತ ಸದಸ್ಯೆಯಾಗಿದ್ದು, ನರ್ಸ್‌ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದಾರೆ. ಇನ್ನು ಪ್ರಾಧಿಕಾರದ ವಿಶೇಷಾಧಿಕಾರಿ ಹುದ್ದೆಯಿಂದ ರಾಮಕೃಷ್ಣಾರೆಡ್ಡಿ ಅವರನ್ನು ವಜಾಗೊಳಿಸಲು ಅರ್ಜಿಯಲ್ಲಿ ಕೋರಿಲ್ಲ. ಮೇಲಾಗಿ ಇದು ಸೇವೆಗೆ ಸಂಬಂಧಿಸಿದ ವಿಚಾರ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಚ್‌ ಹೇಳಿದೆ ಎಂದು ಅಭಿಪ್ರಾಯಪಟ್ಟನ್ಯಾಯಪೀಠವು ಅರ್ಜಿ ವಜಾಗೊಳಿಸಿ ಆದೇಶಿಸಿತು.

PSI Recruitment Scam: ಮೆಟಲ್‌ ಡಿಟೆಕ್ಟರ್‌ ಸರಿಯಿಲ್ಲ ಅಂತ ಬುರುಡೆ ಬಿಟ್ರಾ ಸಿಬ್ಬಂದಿ?

ಮಂಗಳವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ದಿವ್ಯಾ ಹಾಗರಗಿ ಪರ ವಕಿಲರು, ಅರ್ಜಿದಾರರನ್ನು ಯಾಕೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಸಿದ್ಧವಾಗಿದೆ. ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

PSI Recruitment Scam ತಲೆ ಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮುಂಬೈನಲ್ಲಿ ಬಂಧನ

ಅದಕ್ಕೆ ಅಸಮಾಧಾನಗೊಂಡ ಪೀಠ, ದಿವ್ಯಾ ಹಾಗರಗಿ ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದಾರೆ. ನ್ಯಾಯಾಲಯದ ಅಧಿಕಾರಿಯಾಗಿ ನೀವು, ನಿಮ್ಮ ಅರ್ಜಿದಾರರ ಬಗ್ಗೆ ಏನು ಹೇಳಬಯಸುತ್ತೀರಿ? ಹಗರಣದಲ್ಲಿ ಸಿಲುಕಿರುವ ಅರ್ಜಿದಾರೆಯ ಮನವಿಯನ್ನು ನ್ಯಾಯಾಲಯ ಏಕೆ ಪರಿಗಣಿಸಬೇಕಿದೆ ಎಂದು ಪ್ರಶ್ನಿಸಿತಲ್ಲದೆ, ಇದು ಸೇವೆಗೆ ಸಂಬಂಧಿಸಿದ ಅರ್ಜಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗದು ಎಂಬುದಾಗಿ ಸುಪ್ರೀಂ ಕೋರ್ಚ್‌ ಹೇಳಿದೆ ಎಂದು ನುಡಿಯಿತು.

click me!