ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿರುವ ಹೈಕೋರ್ಟ್.
ಬೆಂಗಳೂರು (ಸೆ.03): ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೆ ಪ್ರಾಸಿಕ್ಯೂಷನ್ ಅನುಮತಿ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.
ಅಲ್ಲದೆ, ಸೆ.9ರಂದು ಅಡ್ವೋಕೇಟ್ ಜನರಲ್ ಅವರು ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಬೇಕು. ನಂತರ ರಾಜ್ಯಪಾಲರ ಕಚೇರಿ ಸೇರಿದಂತೆ ಪ್ರಕರಣದ ಇತರೆ ಪ್ರತಿವಾದಿಗಳ ಪರ ವಕೀಲರು ಮಂಡಿಸಿರುವ ಪ್ರತಿವಾದಕ್ಕೆ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು ಸೆ.12ರಂದು ಉತ್ತರ ನೀಡಿ ವಾದ ಮಂಡಿಸಬೇಕು. ಅಂದು ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ಅರ್ಜಿಯ ಪಕ್ಷಕಾರರಿಗೆ ಮೌಖಿಕವಾಗಿ ಸೂಚಿಸಿದೆ.
ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಅದರಂತೆ ಸೆ.12ರಂದು ಅರ್ಜಿ ಕುರಿತ ಎಲ್ಲಾ ಪಕ್ಷಕಾರರ ವಾದ-ಪ್ರತಿವಾದ ಪೂರ್ಣಗೊಂಡರೆ, ನ್ಯಾಯಪೀಠವು ಅಂದೇ ತೀರ್ಪು ಕಾಯ್ದಿಸಿರುವ ಸಾಧ್ಯತೆಯಿದೆ. ಒಟ್ಟಾರೆ ಸೋಮವಾರ ಬೆಳವಣಿಗೆಯ ಪ್ರಕಾರ ಸೆ.9ರವರೆಗೆ ಮುಖ್ಯಮಂತ್ರಿಗಳಿಗೆ ರಿಲೀಫ್ ದೊರಕಿದೆ. ಇದಕ್ಕೂ ಮುನ್ನ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಸೋಮವಾರ ಸುಮಾರು ಎರಡು ಗಂಟೆ ವಾದ ಮಂಡಿಸಿ, ಮುಡಾ ಅಭಿವೃದ್ಧಿಪಡಿಸಿದ 14 ನಿವೇಶನಗಳು ಪತ್ನಿ ಪಾರ್ವತಿ ಅವರಿಗೆ ಮಂಜೂರಾಗುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವವಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಉದ್ದೇಶವೇ ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು. ಸಾರ್ವಜನಿಕರ ಸೇವಕರ ವಿರುದ್ಧ ಸೂಜಿಮೊನೆಯಷ್ಟು ಸಂಶಯ ಹುಟ್ಟಿದರೂ ತನಿಖೆ ನಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಮುಡಾ ಪ್ರಕರಣದ ಅಭಿಯೋಜನೆಗೆ ಅನುಮತಿ ನೀಡಿದ್ದು, ಅದನ್ನು ನ್ಯಾಯಾಲಯ ಸಹ ಬೆಂಬಲಿಸಬೇಕು ಎಂದು ಕೋರಿದರು. ಅಲ್ಲಿಗೆ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯಪಾಲರ ಕಚೇರಿ, ಖಾಸಗಿ ದೂರುದಾರರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್.ಪಿ. ಪ್ರದೀಪ್ ಪರ ವಕೀಲರ ಪ್ರತಿ ವಾದ ಪೂರ್ಣಗೊಂಡಿದೆ. ಪ್ರತಿವಾದಿಗಳ ಪರ ವಕೀಲರ ವಾದಕ್ಕೆ ಮುಖ್ಯಮಂತ್ರಿಗಳ ಪರ ವಕೀಲರ ಪ್ರತ್ಯುತ್ತರ ಮತ್ತು ರಾಜ್ಯ ಸರ್ಕಾರದ ಪರ ಅಡ್ವೋಕೆಟ್ ಜನರಲ್ ಅವರ ವಾದ ಬಾಕಿ ಉಳಿದಿದೆ.
ರಾಘವನ್ ವಾದವೇನು?: ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ ಆ ನಂತರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ವಿಚಾರಣಾ ತನಿಖಾ ಆಯೋಗ ರಚಿಸಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿರುವುದಕ್ಕಾಗಿಯೇ ವಿಚಾರಣಾ ಆಯೋಗ ರಚಿಸಲಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳಬೇಕಿರುವುದರಿಂದ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆದು ಅಂತಿಮವಾಗಿ ಸಿದ್ದರಾಮಯ್ಯ ಕ್ಲೀನ್‌ಚಿಟ್ ಪಡೆಯಬಹುದು. ಆದರೆ, ನ್ಯಾಯಾಲಯಗಳು ಇಂತಹ ಪ್ರಕರಣಗಳ ತನಿಖೆಯನ್ನು ಆರಂಭದಲ್ಲೇ ಮೊಟಕುಗೊಳಿಸದೆ, ರಾಜ್ಯಪಾಲರ ಅನುಮತಿಗೆ ಬೆಂಬಲ ಸೂಚಿಸಬೇಕು ಎಂದು ರಾಘವನ್ ನ್ಯಾಯಾಲಯವನ್ನು ಕೋರಿದರು.
ಮೂಲತಃ ನಿಂಗ ಎಂಬುವರಿಗೆ ಈ ವಿವಾದಿತ 3.16 ಎಕರೆ ಮಂಜೂರಾಗಿತ್ತು. ನಿಂಗ ಅವರಿಗೆ ಮಲ್ಲಯ್ಯ, ಮೈಲಾರಯ್ಯ, ದೇವರಾಜು ಎಂಬ ಮಕ್ಕಳಿದ್ದರು. ಮೈಲಾರಯ್ಯ ಮತ್ತು ದೇವರಾಜು ಅವರು ಮಲ್ಲಯ್ಯಗೆ ಜಮೀನಿನ ಹಕ್ಕು ನೀಡಿದ್ದರು. ಹೀಗಾಗಿ ದೇವರಾಜುವಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. ಮುಡಾ ದೇವನೂರು 5ನೇ ಹಂತದ ಬಡಾವಣೆಗೆ 1997ರ ಆ.20ರಂದು ಈ ಜಮೀನು ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. 1998ರ ಮಾ.30ರಂದು ಜಮೀನು ಮಾಲೀಕರಿಗೆ ಪರಿಹಾರ ಹಣ ಠೇವಣಿ ಇಡಲಾಗಿತ್ತು. ಈ ಪ್ರಕ್ರಿಯೆ ನಂತರ ಬದಲಿ ನಿವೇಶನ ನೀಡುವ ಪ್ರಶ್ನೆಯೇ ಇಲ್ಲ. ಹೀಗಿದ್ದರೂ ಜಮೀನಿನ ಮಾಲೀಕನಲ್ಲದ ದೇವರಾಜು ಸಲ್ಲಿಸಿದ ಅರ್ಜಿ ಮೇರೆಗೆ 1998ರ ಮೇ 18ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯಿತು. ಇದೊಂದೇ ಜಮೀನು ಡಿನೋಟಿಫೈ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ದೇವರಾಜು 2004ರ ಆ.25ರಂದು ಈ ಜಮೀನನ್ನು ಮುಖ್ಯಮಂತ್ರಿಗಳ ಪತ್ನಿ ಸಹೋದರ ಬಿ.ಎಂ.ಮಲ್ಲಿಕಾರ್ಜುನ್ ಗೆ ಮಾರಾಟ ಮಾಡಿದ್ದಾರೆ. ಜಮೀನನ್ನು ಮಲ್ಲಿಕಾರ್ಜುನ್ ಮು ಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದಾರೆ. ಈ ವೇಳೆಗಾಗಲೇ ಮುಡಾ ಸದರಿ ಜಮೀನು ಸ್ವಾಧೀನ ಮಾಡಿಕೊಂಡು ಅಭಿವೃದ್ಧಿಪಡಿಸಿ ನಿವೇಶನ ಹಂಚಿತ್ತು. 2014ರ ಜೂ.23ರಂದು ಬದಲಿ ನಿವೇಶನಕ್ಕೆ ಸಿಎಂ ಪತ್ನಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಒಂದು ನಿವೇಶನವನ್ನೂ ಪಡೆಯಲು ಅರ್ಹತೆ ಇಲ್ಲದ ಸಿಎಂ ಪತ್ನಿ ಅವರಿಗೆ 14 ನಿವೇಶನ ನೀಡಲಾಗಿದೆ. ಸಿಎಂ ಪತ್ನಿ ಪಾರ್ವತಿ ಅವರಲ್ಲದೇ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿ ತಮ್ಮ ಭೂಮಿ ವಶಪಡಿಸಿಕೊಂಡಿರುವುದಕ್ಕೆ ಪರಿಹಾರ ಕೇಳಿದ್ದರೆ ಮುಡಾ ಆ ವ್ಯಕ್ತಿಗೆ ಭೂಮಿ ಮೇಲಿನ ಹಕ್ಕು ತೋರಿಸುವಂತೆ ಕೇಳುತ್ತಿತ್ತು. ಆಗ ಆ ವ್ಯಕ್ತಿಯು ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಪಾರ್ವತಿ ಅವರ ಪ್ರಕರಣಲ್ಲಿ ಅದ್ಯಾವುದೂ ನಡೆದಿಲ್ಲ ಎಂದು ವಿವರಿಸಿದರು.
ಅಲ್ಲದೆ, ಮುಡಾದಲ್ಲಿ 2003-09ರ ನಡುವೆ 60:40 ಅನುಪಾತದ ಯೋಜನೆ ಜಾರಿಯಲ್ಲಿತ್ತು. ಅದರಂತೆ 3.16 ಎಕರೆಗಿಂತ ಹೆಚ್ಚಿನ ಭೂಮಿ ಸ್ವಾಧೀನವಾದರೆ 4,800 ಚದರಡಿ ಪರಿಹಾರ ಸಿಗುತ್ತಿತ್ತು. 1994ರ ನಿಯಮದ ಪ್ರಕಾರ ಎರಡು ಸೈಟು ಮಂಜೂರಾತಿಗಷ್ಟೇ ಅವಕಾಶವಿತ್ತು. ಆದರೆ, ಪಾರ್ವತಿ ಅವರಿಗೆ ನಿವೇಶನ ಹಂಚಲು 2015ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು 50:50 ಅನುಪಾತದ ಯೋಜನೆಯನ್ನು ಮುಡಾ ಅಳವಡಿಸಿಕೊಂಡಿದೆ. ಮುಡಾ ವಿವಾದಿತ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರು. ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು ನೀಡಲಾಗಿದೆ? ಸುಣ್ಣಕ್ಕೆ ಬೆಣ್ಣೆ ವಿನಿಮಯವೇ? ಅದನ್ನೇ ಈ ಪ್ರಕರಣದಲ್ಲಿ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆಲ್ಲವೂ ನಡೆದಿದೆ. 2017ರಲ್ಲಿ ಮುಡಾ ಕೈಗೊಂಡಿರುವ ನಿರ್ಣಯವೇ ಇಡೀ ಪ್ರಕರಣದ ಕೊಂಡಿಯಾಗಿದೆ ಎಂದು ಬಲವಾಗಿ ವಾದಿಸಿದರು.
ತುಂಗಭದ್ರಾ ಡ್ಯಾಂಗೆ ಗೇಟ್ ಇಟ್ಟವರಿಗೆ ಸರ್ಕಾರದಿಂದ ಪ್ರಶಸ್ತಿ ಪ್ರದಾನ: ಡಿ.ಕೆ.ಶಿವಕುಮಾರ್
ಅನುಚಿತ ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೆ ಅಪರಾಧ. ಪಡೆಯುವ ಅನುಕೂಲ ಕಾನೂನುಬಾಹಿರವಾಗಿಲ್ಲದಿದ್ದರೂ ವೈಯಕ್ತಿಕ ಪ್ರಭಾವ ಬಳಸಿದರೂ ಅದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7 ಅಡಿ ಅಪರಾಧ. ಹಾಗಾಗಿ, ಮುಡಾ ನಿರ್ಣಯ ಅಥವಾ ನಿರ್ಧಾರದಲ್ಲಿ ಮುಖ್ಯಮಂತ್ರಿ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಅಲ್ಲಿ ಮುಖ್ಯಮಂತ್ರಿಯ ಸಣ್ಣಮಟ್ಟದ ಪಾತ್ರ ಇದ್ದರೂ ಅದರ ತನಿಖೆಯಾಗಬೇಕು. ಹಗಲಿನಲ್ಲಿ ವಂಚನೆ ನಡೆಸುವುದಿಲ್ಲ. ಕತ್ತಲೆಯಲ್ಲಿ ಅದು ನಡೆಯುತ್ತದೆ. ವಂಚನೆ ನಡೆದಿದೆಯೋ, ಇಲ್ಲವೋ ಎಂಬುದನ್ನು ಅರಿಯಲು ಯಾವ ವಿಧಾನ ಅನುಸರಿಸಬೇಕು ಎಂದು ಹೇಳುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ವಾದಿಸಿದರು.