ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರವಾಗಿದ್ದು, 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಸೆ.03): ತುಂಗಭದ್ರಾ ಅಣೆಕಟ್ಟು ಮತ್ತೆ ತುಂಬುತ್ತಿರುವುದು ಸಂತಸದ ವಿಚಾರವಾಗಿದ್ದು, 105.79 ಸಾಮರ್ಥ್ಯದ ಅಣೆಕಟ್ಟಿನಲ್ಲಿ ಪ್ರಸ್ತುತ ಸುಮಾರು 98 ಟಿಎಂಸಿ ನೀರು ಸಂಗ್ರಹಗೊಂಡಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಹಗಲು-ರಾತ್ರಿ ಸುಮಾರು 108 ಅಧಿಕಾರಿಗಳು ಮತ್ತು ಕಾರ್ಮಿಕರು ಕೆಲಸ ಮಾಡಿ ತಾತ್ಕಾಲಿಕ ಗೇಟ್ ಅಳವಡಿಸಿ ಪೋಲಾಗುತ್ತಿದ್ದ ನೀರು ತಡೆದಿದ್ದಾರೆ. ಅವರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ಪತ್ರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಅ.2ರಂದು ಸ್ವಚ್ಛತಾ ದಿನ: ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡು 100 ವರ್ಷಗಳು ಸಂದಿರುವ ನೆನಪಿಗಾಗಿ ನಗರದಾದ್ಯಂತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅ.2ರಂದು ಗಾಂಧಿ ಜಯಂತಿ ದಿನದಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಒಂದು ಸಾವಿರ ಶಾಲಾ ಮಕ್ಕಳು ಆನ್ ಲೈನ್ ಮೂಲಕ ಪತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ ಎಂದರು. ರಸ್ತೆ ಬದಿ ಹಾಗೂ ರಸ್ತೆಗಳಲ್ಲಿ ಕಸ ಎಸೆಯುವುದರ ವಿರುದ್ಧ ಜಾಗೃತಿ ಮೂಡಿಲಾಗುವುದು. ಮಕ್ಕಳಿಂದ ಕಸ ಎಸೆಯುವವರಿಗೆ ತಿಳಿಹೇಳುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಗೌರ್ನರ್ ಬಳಿಯ ಕಡತ ಏನಾಗಿವೆ: ‘ಪ್ರತಿಪಕ್ಷಗಳ ನಾಯಕರ ಮೇಲಿನ ಯಾವುದೇ ಪ್ರಾಸಿಕ್ಯೂಷನ್ ಅರ್ಜಿ ರಾಜಭವನದಲ್ಲಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಹಾಗಾದರೆ ಕಡತಗಳು ಏನಾಗಿವೆ ಎಂಬುದು ನಮಗೂ ಯಕ್ಷಪ್ರಶ್ನೆಯಾಗಿದೆ. ಸೋಮವಾರ ಈ ಬಗ್ಗೆ ವಿಚಾರಿಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ತಮ್ಮ ಬಳಿ ಅರ್ಜಿಗಳಿಲ್ಲ ಎಂದು ಹೇಳಿದ್ದಾರೆ. ನಾವು ನಮಗೆ ಬಂದಿರುವ ಮಾಹಿತಿಗಳ ಮೇರೆಗೆ 4 ಪ್ರತಿಪಕ್ಷಗಳ ನಾಯಕರ ಮೇಲಿನ ಪ್ರಾಸಿಕ್ಯೂಷನ್ ಅರ್ಜಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ತಮ್ಮ ಬಳಿ ಅರ್ಜಿ ಇಲ್ಲ ಎಂದಿರುವುದರಿಂದ ಸೋಮವಾರ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.
ಕಾಂಗ್ರೆಸ್ ವಿರುದ್ಧ ಆರೋಪ ಬಂದ್ರೆ ಗೌರ್ನರ್ ಬೆಳಕಿನ ವೇಗ: ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ
ನನ್ನ ವಿರುದ್ಧ ದೂರು ಕೊಡಲು ಸಿದ್ಧತೆ: ಕಾಂಗ್ರೆಸ್ ನಾಯಕರ ವಿರುದ್ಧದ 2 ಅರ್ಜಿಗಳು ಮಾತ್ರ ರಾಜ್ಯಪಾಲರ ಬಳಿ ಬಾಕಿಯಿದೆ ಎಂಬ ಪ್ರಶ್ನೆಗೆ, ‘ಆ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮವರ ವಿರುದ್ಧ ಕೆಲವರು ಅರ್ಜಿ ಕೊಡುತ್ತಿರುತ್ತಾರೆ. ಮತ್ತೆ ಕೆಲವರು ನನ್ನ ವಿರುದ್ಧವೇ ದೂರು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ದೂರು ನೀಡಲಿ’ ಎಂದು ತಿಳಿಸಿದರು. ಕೊರೋನಾ ಅಕ್ರಮದ ಬಗೆಗಿನ ಮಧ್ಯಂತರ ತನಿಖಾ ವರದಿ ಬಗ್ಗೆ ಮಾತನಾಡಿದ ಅವರು, ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕಲ್ ಕುನ್ಹ ಅವರು ವರದಿ ಸಲ್ಲಿಸಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ತಿಳಿದ ಬಳಿಕವಷ್ಟೇ ಮಾತನಾಡುತ್ತೇನೆ ಎಂದು ಹೇಳಿದರು.