ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ

Kannadaprabha News   | Kannada Prabha
Published : Dec 11, 2025, 06:24 AM IST
Madhu bangarappa

ಸಾರಾಂಶ

ಎಚ್‌.ಡಿ.ಕುಮಾರಸ್ವಾಮಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಪ್ರಶ್ನೆಗಳಿಗೆ ಉತ್ತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಮಧು ಬಂಗಾರಪ್ಪ,

ಶಾಲಾ ಶಿಕ್ಷಣ ಸಚಿವ

--

ಸಂದರ್ಶನ : ಲಿಂಗರಾಜು ಕೋರಾ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧರ್ಮಾಧಾರಿತ ವಿಚಾರಗಳನ್ನು ಪಠ್ಯದಲ್ಲಿ ಅಳ‍ಡಿಸುವ ಚಿಂತನೆಗೆ ಕೆಲ ಶಿಕ್ಷಣ ತಜ್ಞರು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೆ, ಮತ್ತೊಂದು ವರ್ಗ ಭಗವದ್ಗೀತೆಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡಬಾರದು. ಅದರಲ್ಲಿ ಮಕ್ಕಳ ಜೀವನ ರೂಪಿಸುವ ಸಾಕಷ್ಟು ಮಹತ್ವದ ಅಂಶಗಳಿವೆ. ಹಾಗಾಗಿ ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯನ್ನು ಶಾಲೆಗಳಲ್ಲಿ ಬೋಧಿಸುವ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು? ಕುಮಾರಸ್ವಾಮಿ ಹೇಳಿಕೆ ಬಗ್ಗೆ ರಾಜ್ಯದ ಶಾಲಾ ಶಿಕ್ಷಣ ಸಚಿವರ ಅಭಿಪ್ರಾಯವೇನು? ಈ ಸಲಹೆಯನ್ನು ಸಕಾರಾತ್ಮಕವಾಗಿ ನೋಡುವ ಸಾಧ್ಯತೆಯಿದೆಯೇ ಎಂಬುದು ಸೇರಿ ಶಿಕ್ಷಣ ಇಲಾಖೆಯ ಶಿಕ್ಷಕರ ಕೊರತೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕ ಇಳಿಕೆ, ವೆಬ್‌ಕಾಸ್ಟಿಂಗ್‌ ನಂಥ ಸುಧಾರಣಾ ಕ್ರಮಗಳ ಬಗ್ಗೆ ಕೇಳಿಬರುತ್ತಿರುವ ಟೀಕೆಗಳು, ಕೆಪಿಎಸ್‌ ಶಾಲೆಗಳ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಆರೋಪ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಬೇಕು ಅಂದಿದ್ದಾರೆ? ಅಳ‍ಡಿಸುತ್ತೀರಾ?

ಕುಮಾರಸ್ವಾಮಿ ಅವರು ಭಗವದ್ಗೀತೆ ಮಾತ್ರವಲ್ಲದೆ, ಕುರಾನ್‌, ಬೈಬಲ್‌ ಮೂರನ್ನೂ ಬೋಧಿಸಬೇಕು ಎಂದು ಹೇಳಿದ್ದರೆ ಅದು ಜಾತ್ಯತೀತ ಪರಿಕಲ್ಪನೆ ಆಗುತ್ತಿತ್ತು. ರಾಜಕೀಯಕ್ಕಾಗಿ ಮಾಡಿರುವ ಇಂಥ ಪ್ರಸ್ತಾವನೆಗಳಿಗೆ ನಾನು ಉತ್ತರ ಕೊಡಲು ಹೋಗಲ್ಲ. ಅಲ್ಲದೆ, ಅವರು ಕೇಂದ್ರ ಶಿಕ್ಷಣ ಸಚಿವರಿಗೆ ಬರೆದಿರುವ ಪತ್ರಕ್ಕೆ ನಾನು ಅಭಿಪ್ರಾಯ ವ್ಯಕ್ತಪಡಿಸುವ ಅಗತ್ಯವಿಲ್ಲ. ನನ್ನ ದೃಷ್ಟಿಯಲ್ಲಿ ಯಾವುದೇ ಸೈದ್ಧಾಂತಿಕ ಆಧಾರಿತ ಶಿಕ್ಷಣ ಒಳ್ಳೆಯದಲ್ಲ. ಮಕ್ಕಳಿಗೆ ಅವಶ್ಯಕತೆ ಇರುವ ಮೌಲ್ಯಗಳನ್ನು ನೀಡಬೇಕು. ಆ ಕೆಲಸ ನಾವು ಮಾಡುತ್ತೇವೆ.

- ಹಾಗಾದರೆ, ಕುಮಾರಸ್ವಾಮಿ ಅವರ ಪ್ರಸ್ತಾವನೆ ರಾಜಕೀಯ ಅಜೆಂಡಾನಾ?

ಮತ್ತಿನ್ನೇನು? ತಾವು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಭಗವದ್ಗೀತೆಯನ್ನು ಶಾಲೆಗಳಲ್ಲಿ ಬೋಧಿಸುವ ಕೆಲಸ ಮಾಡಲಿಲ್ಲ. ಅಧಿಕಾರ ಇದ್ದಾಗ ಸುಮ್ಮನಿದ್ದು, ಈಗ ಭಗವದ್ಗೀತೆ ವಿಷಯ ಪ್ರಸ್ತಾಪಿಸುತ್ತಿರುವುದರಲ್ಲಿ ರಾಜಕೀಯ ಅಜೆಂಡಾ ಇದ್ದೇ ಇದೆ. ಅದನ್ನು ನೀವೇ ವಿಶ್ಲೇಷಣೆ ಮಾಡಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಕ್ಕಳಿಗೆ ಅಗತ್ಯವಿರುವ ಮೌಲ್ಯಾಧಾರಿತ ಅಂಶಗಳು ಜಗತ್ತಿನಲ್ಲಿ ಎಲ್ಲೇ ಇದ್ದರೂ ಕೊಡಬೇಕು. ಆದರೆ, ಮಕ್ಕಳು, ಸಮಾಜದ ಹಿತಕ್ಕೆ ಧಕ್ಕೆ ಆಗುವ ವಿಚಾರಗಳನ್ನು ನಾವು ಮುಟ್ಟಲು ಹೋಗಲ್ಲ.

- ಭಗವದ್ಗೀತೆಯಲ್ಲಿ ಮೌಲ್ಯಶಿಕ್ಷಣದ ಅಂಶಗಳಿಲ್ಲವಾ? ಬೇಡ ಎಂದರೆ ಸರ್ಕಾರದ ಬಗ್ಗೆ ಹಿಂದೂ ವಿರೋಧಿ ಅಭಿಪ್ರಾಯ ಮೂಡಲ್ವಾ?

ನೋಡಿ, ಭಗವದ್ಗೀತೆಯಲ್ಲಿ ಮೌಲ್ಯ ಶಿಕ್ಷಣ ಇಲ್ಲ, ಬೇಡ ಎಂದು ನಾನು ಹೇಳುತ್ತಿಲ್ಲ. ಅದನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಅಂತಿಟ್ಟುಕೊಳ್ಳಿ. ಆಗ ಏನಾಗುತ್ತದೆ? ಬೈಬಲ್‌, ಕುರಾನ್‌ ಹೀಗೆ ಬೇರೆ ಎಲ್ಲಾ ಕಡೆಯಿಂದಲೂ ಅಂತಹ ಅಂಶಗಳನ್ನು ಸೇರಿಸಬೇಕೆಂಬ ಒತ್ತಡ ಬರುವುದಿಲ್ಲವೇ? ಅದನ್ನೂ ತೆಗೆದುಕೊಂಡರೆ ಓಲೈಕೆ ಅಂತ ಆಪಾದನೆ ಮಾಡುತ್ತಾರೆ. ಅದೆಲ್ಲ ಏಕೆ ಬೇಕು? ಈಗಾಗಲೇ ನಮ್ಮ ಶಾಲಾ ಪಠ್ಯಗಳಲ್ಲಿ ಎಲ್ಲೋ ಒಂದು ಕಡೆ ಕೃಷ್ಣ, ರಾಮನ ನೀತಿಗಳು ಇದ್ದೇ ಇರುತ್ತದೆ. ಇರುವುದನ್ನೇ ಉದ್ದೇಶಪೂರ್ವಕವಾಗಿ ಇನ್ನಷ್ಟು ತುರುಕುವ ಪ್ರಯತ್ನ ಮಾಡಬಾರದು.

-ನಿಮ್ಮ ಇಲಾಖೆಯಲ್ಲೇ ಅತಿ ಹಚ್ಚು 73 ಸಾವಿರ ಹುದ್ದೆಗಳು ಖಾಲಿ ಇವೆ?

ಇದಕ್ಕೆ ಕಾರಣ ಯಾರು? ನಮ್ಮ ಸರ್ಕಾರ ಒಂದೇ ಅಲ್ಲ. ಹಿಂದಿನಿಂದ ಅಧಿಕಾರ ನಡೆಸಿಕೊಂಡು ಬಂದವರ ಪಾಲೂ ಇದೆ. ಒಂದೇ ಬಾರಿ ಅಷ್ಟೂ ಹುದ್ದೆಗಳನ್ನು ಭರ್ತಿ ಮಾಡಲು ಆಗುವುದಿಲ್ಲ. ಅದಕ್ಕೆ, ನಮ್ಮ ಮುಖ್ಯಮಂತ್ರಿ ಶಾಲೆ ಆರಂಭವಾದ ದಿನವೇ ತಾತ್ಕಾಲಿಕವಾಗಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದರು. ಜೊತೆಗೆ ಹಿಂದಿನ ಸರ್ಕಾರ ಅಧಿಸೂಚನೆ ಮಾಡಿ ನಿಲ್ಲಿಸಿದ್ದ 13 ಸಾವಿರ ಶಿಕ್ಷಕರ ನೇಮಕಾತಿ ಪೂರೈಸಿದ್ದೇವೆ. ಈಗ ಮತ್ತೆ 13 ಸಾವಿರ ಸರ್ಕಾರಿ ಶಾಲೆ, ಪಿಯು ಕಾಲೇಜು ಶಿಕ್ಷಕರು, ಉಪನ್ಯಾಸಕ ಹುದ್ದೆಗಳು, 5000 ಅನುದಾನಿತ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಖ್ಯಮಂತ್ರಿ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಮುಂದಿನ ವರ್ಷದ ವೇಳೆಗೆ ಸರ್ಕಾರಿ ಶಾಲೆ, ಪಿಯು ಕಾಲೇಜಿಗೆ ಒಟ್ಟು 18 ಸಾವಿರ ಶಿಕ್ಷಕರು, ಉಪನ್ಯಾಸಕರ ನೇಮಕಾತಿ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಇನ್ನೂ 15 ಸಾವಿರ ಶಿಕ್ಷಕರ ನೇಮಕಾತಿಗೆ ಅವಕಾಶ ಕೇಳಿದ್ದೇವೆ.

-ಎಸ್ಸೆಸ್ಸೆಲ್ಸಿಯಲ್ಲಿ ಪಾರದರ್ಶಕತೆ ಹೆಚ್ಚಿಸೋಕೆ ಹೋಗಿ ಫಲಿತಾಂಶ ಕುಸಿಯಿತಲ್ಲ?

ಕಾಪಿ ಹೊಡೆದು ಪಾಸು ಮಾಡಿ ಹೆಚ್ಚು ಫಲಿತಾಂಶ ಬಂತು ಅಂತ ಶೋಕಿ ಮಾಡುತ್ತಿದ್ದ ವ್ಯವಸ್ಥೆ ಸರಿಪಡಿಸಲು ವೆಬ್‌ಕಾಸ್ಟಿಂಗ್‌ ಜಾರಿಗೆ ತಂದೆ. ಇದರಿಂದ ಮೊದಲ ವರ್ಷ ಶೇ.20ರಷ್ಟು ಫಲಿತಾಂಶ ಬಿತ್ತು ನಿಜ. ಅದಕ್ಕೆ ಶೇ.20 ಗ್ರೇಸ್‌ ಅಂಕ ಕೊಟ್ಟಿದ್ದೂ ನಿಜ. ಇದಕ್ಕೆ ಮುಖ್ಯಮಂತ್ರಿ ಅವರಿಂದ ಬೈಸಿಕೊಂಡಿದ್ದೂ ಆಯಿತು. ಅಷ್ಟೊಂದು ಗ್ರೇಸ್‌ ಅಂಕ ಕೊಡುವುದು ಕಾಪಿ ಹೊಡೆಯುವುದಕ್ಕಿಂತ ಕೆಟ್ಟದಲ್ವಾ ಅಂದ್ರು. ಆದರೆ, ಒಂದು ಹೊಸ ಪಾರದರ್ಶಕತೆ ವ್ಯವಸ್ಥೆ ಜಾರಿಯಾಗುವಾಗ ಇದೆಲ್ಲ ಆಗುತ್ತದೆ. ನಂತರದ ವರ್ಷಗಳಲ್ಲಿ ಪಾರದರ್ಶಕತೆಯೂ ಬಂತು, ಜಟ್ಟುಗಟ್ಟಿದ್ದ ಶಿಕ್ಷಕರು ಎಚ್ಚೆತ್ತು ಮಕ್ಕಳನ್ನು ಉತ್ತಮವಾಗಿ ಪರೀಕ್ಷೆಗೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರೇಸ್‌ ಅಂಕ ಇಲ್ಲದೆಯೇ ಫಲಿತಾಂಶವೂ ಈ ಬಾರಿ ಹೆಚ್ಚಾಗಿದೆ. ಮುಂದೆ ಇನ್ನಷ್ಟು ಫಲಿತಾಂಶ ಹೆಚ್ಚಾಗಲಿದೆ.

-ಎಸ್ಸೆಸ್ಸೆಲ್ಸಿ ತೇರ್ಗಡೆ ಅಂಕವನ್ನು ಕಡಿಮೆ ಮಾಡಿರುವುದರಿಂದ ಶಿಕ್ಷಣ ಗುಣಮಟ್ಟ ಕುಸಿಯುತ್ತೆ ಎಂಬ ಟೀಕೆಯಿದೆಯಲ್ವಾ?

ಫೇಲಾಗಿ ಎಲ್ಲೋ ದಾರಿ ತಪ್ಪುವ ಸಾಕಷ್ಟು ಮಕ್ಕಳಿಗೆ ಕನಿಷ್ಠ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ದೊರಕಿ ಅವರ ಔದ್ಯೋಗಿಕ ಜೀವನಕ್ಕೆ ದಾರಿಯಾಗುತ್ತದೆ. ಹೆಚ್ಚು ಸಾಕ್ಷರತೆ ಇರುವ ರಾಜ್ಯ ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಪಾಸ್‌ ಅಂಕ ಶೇ.30. ಅಲ್ಲಿ ಎಸ್ಸೆಸ್ಸೆಲ್ಸಿ ನಂತರ ನರ್ಸಿಂಗ್‌ ಓದಿ ಬಂದವರಿಗೆ ಕರ್ನಾಟಕದಲ್ಲಿ ಕೆಲಸ ಸಿಗುತ್ತದೆ. ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಎಷ್ಟು ಜನ ಕನ್ನಡಿಗರು ಕನಿಷ್ಠ ಲಿಫ್ಟ್‌ ಆಪರೇಟರ್‌ಗಳಾಗಿದ್ದಾರೆ? ಈ ರೀತಿ ಪಾಸ್‌ ಅಂಕ ಕಡಿಮೆ ಇದ್ದು ಉತ್ತೀರ್ಣರಾದ ಬೇರೆ ರಾಜ್ಯದವರು ಅದೇ ವಿದ್ಯಾರ್ಹತೆ ಮೇಲೆ ನಮ್ಮ ರಾಜ್ಯದಲ್ಲಿ ಬಂದು ಉದ್ಯೋಗ ಪಡೆಯುತ್ತಾರೆ. ಪಾಸ್ ಅಂಕ ಹೆಚ್ಚಿದ್ದರೆ ನಮ್ಮ ಮಕ್ಕಳು ಅವಕಾಶ ವಂಚಿತರಾಗುತ್ತಾರೆ. ಸಾರ್ವಜನಿಕ ವೇದಿಕೆಯಲ್ಲಿ ಅಭಿಪ್ರಾಯ ಪಡೆದೇ ಈ ನಿಯಮ ಜಾರಿ ಮಾಡಿದೆ.

- ಕರ್ನಾಟಕ ಪಬ್ಲಿಕ್‌ ಶಾಲೆಗಳ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆಯಲ್ವಾ?

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣ ಎಲ್‌ಕೆಜಿ, ಯುಕೆಜಿ ಇಲ್ಲದಿರುವುದು. ನಂತರ ಪ್ರೌಢ ಶಾಲೆ, ಪಿಯು ಕಾಲೇಜಿಗೆ ಬೇರೆಡೆ ಹೋಗಬೇಕಾಗಿ ಬರುತ್ತಿರುವುದು. ಹಾಗಾಗಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಒಂದೇ ಶಾಲೆಯಲ್ಲಿ ಮಕ್ಕಳು ಓದಲು ಅನುಕೂಲವಾಗುವಂತೆ ಪ್ರತಿ ಗ್ರಾಪಂ ಮಟ್ಟದಲ್ಲಿ ಒಂದು ಕೆಪಿಎಸ್‌ ಶಾಲೆಗಳನ್ನು ಆರಂಭಿಸುವ ಗುರಿ ಸರ್ಕಾರ ಹೊಂದಿದೆ. ಈಗಾಗಲೇ 309 ಶಾಲೆಗಳಿವೆ, ಈಗ ಮತ್ತೆ 900ಕ್ಕೂ ಹೆಚ್ಚು ಕೆಪಿಎಸ್‌ ಶಾಲೆಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ (ಕನ್ನಡ ಮತ್ತು ಇಂಗ್ಲಿಷ್‌) ಶಿಕ್ಷಣ ಇರುತ್ತದೆ.

-24 ಸಾವಿರ ಶಾಲೆಗಳನ್ನು ಕೆಪಿಎಸ್‌ಗಳಲ್ಲಿ ವಿಲೀನದ ಮೂಲಕ ಮುಚ್ಚಲು ಸರ್ಕಾರ ಹೊರಟಿದೆ ಎನ್ನುವ ಆರೋಪವಿದೆಯಲ್ವಾ?

ಯಾರು ಆರೋಪ ಮಾಡಿದ್ದಾರೆ ಹೇಳಿ... ಈ ಬಗ್ಗೆ ಯಾರೋ ಆರೋಪ ಮಾಡುತ್ತಾರೆ ಅಂತ ಹೇಳಿಕೆ ನೀಡಲು ಸಾಧ್ಯವಿಲ್ಲ.

- ಕೆಲ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳೇ ಆರೋಪಿಸುತ್ತಿವೆ, ಪ್ರತಿಭಟನೆ ನಡೆಸಿವೆ?

ಅಂತಹ ಕೆಲ ಶಿಕ್ಷಣ ತಜ್ಞರು, ಸಂಘಟನೆಗಳ ಹಿತಾಸಕ್ತಿ ಏನು? ಸರ್ಕಾರಿ ಶಾಲೆ ಉತ್ತಮವಾದರೆ ಯಾರಿಗೆ ಸಮಸ್ಯೆ ಆಗುತ್ತದೆ. ಸರ್ಕಾರಿ ಶಾಲೆಗಳಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕರೆ ಬೇರೆ ಕಡೆ ಏಕೆ ಹೋಗುತ್ತಾರೆ? ಈ ಎಲ್ಲಾ ಕಾರಣಗಳಿಂದ ಕೆಲವರು ಕೆಪಿಎಸ್‌ ಶಾಲೆಗಳು ಆರಂಭವಾಗಬಾರದು ಎಂದು ಲಾಬಿ ನಡೆಯುತ್ತಿದ್ದಾರೆ. ನಮ್ಮ ರಾಜ್ಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯಲ್ಲಿರುವವರೇ ಇದರಲ್ಲಿದ್ದಾರೆ. ಯಾರು ಎನ್ನುವುದೂ ಗೊತ್ತಿದೆ. ಯಾರೇ ತಿಪ್ಪರಲಾಗ ಹಾಕಿದ್ರೂ ನಾನು ಮಕ್ಕಳಿಗೆ ದ್ರೋಹ ಮಾಡಲು ಬಿಡುವುದಿಲ್ಲ. ಮುಂದಿನ ವರ್ಷ ಇನ್ನೂ 1000 ಕೆಪಿಎಸ್‌ ಶಾಲೆಗಳನ್ನು ಆರಂಭಿಸುತ್ತೇವೆ.

- ಹಾಗಾದರೆ ಯಾವುದೇ ಶಾಲೆಗಳನ್ನೂ ವಿಲೀನ ಮಾಡಲ್ವಾ?

25ಕ್ಕಿಂತ ಕಡಿಮೆ ಮಕ್ಕಳಿರುವ 17 ಸಾವಿರ ಶಾಲೆಗಳು, 50 ಕ್ಕಿಂತ ಕಡಿಮೆ ಮಕ್ಕಳಿರುವ 28 ಸಾವಿರ ಶಾಲೆಗಳಿವೆ. ಅಂಥ ಕಡೆಯೂ ಶಿಕ್ಷಕರು, ಸೌಲಭ್ಯ ಕೊಟ್ಟು ಹೇಗೆ ಪಾಠ ಮಾಡುವುದು? 46 ಸಾವಿರ ಶಾಲೆಗಳನ್ನೂ ಕೆಪಿಎಸ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದಾ? ಹಾಗಾಗಿ ಗ್ರಾಪಂಗೊಂದು ಶಾಲೆಯನ್ನು ಕೆಪಿಎಸ್‌ ಆಗಿ ಮೇಲ್ಜರ್ಜೆಗೇರಿಸಲಾಗುತ್ತಿದೆ. ಅಂತಹ ಶಾಲೆಗಳಿಗೆ ಯಾವ ಶಾಲೆಯನ್ನೂ ನಾವಾಗಿಯೇ ವಿಲೀನ ಮಾಡಲ್ಲ. ಆದೇಶವನ್ನೂ ಮಾಡಲ್ಲ. ಆದರೆ, ಸುತ್ತಮುತ್ತಲ ಗ್ರಾಮಗಳಿಂದ ಮಕ್ಕಳನ್ನು ಕರೆತರಲು ಸರ್ಕಾರವೇ ಉಚಿತ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಸುತ್ತಮುತ್ತಲ ಶಾಲೆಗಳ ಮಕ್ಕಳ ಪೋಷಕರು, ಎಸ್‌ಡಿಎಂಸಿ ಸದಸ್ಯರು, ಮಕ್ಕಳು ತಾವಾಗಿಯೇ ಒಪ್ಪಿ ಕೆಪಿಎಸ್‌ ಶಾಲೆಗಳಿಗೆ ಬಂದರೆ ಹೊಟ್ಟೆ ಉರಿ ಯಾಕೆ? ಖಾಸಗಿ ಶಾಲೆಗಳಿಂದಲೂ ಮಕ್ಕಳು ಬರುವ ನಿರೀಕ್ಷೆ ಇದೆ. ಕೆಪಿಎಸ್‌ನಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಕುಸಿಯುತ್ತಿರುವ ದಾಖಲಾತಿ ಹೆಚ್ಚಾಗುವ ದೊಡ್ಡ ನಿರೀಕ್ಷೆ ಇದೆ. ಇದಕ್ಕೆ ಈಗಾಗಲೇ ಇರುವ 309 ಕೆಪಿಎಸ್‌ ಶಾಲೆಗಳೇ ಉತ್ತರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ