
ಸೋಮರಡ್ಡಿ ಅಳವಂಡಿ
ಕೊಪ್ಪಳ (ಡಿ.11): ಲಕ್ಷ ಲಕ್ಷ ಡೊನೇಷನ್ ಹಾವಳಿಯ ಈ ಕಾಲದಲ್ಲಿಯೂ ರೈತರ ಮಕ್ಕಳು, ಬೀದಿ ವ್ಯಾಪಾರಸ್ಥರ ಮಕ್ಕಳು ಮತ್ತು ಆಟೋ ಚಾಲಕರು ಸೇರಿದಂತೆ ಕಡುಬಡವರ ಹೆಣ್ಣು ಮಕ್ಕಳಿಗಾಗಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಿಂದ ಉಚಿತ ವಸತಿ ಸಹಿತ ಹೈಟೆಕ್ ಪಿಯು ಕಾಲೇಜು 48 ಎಕರೆ ವಿಶಾಲ ಪ್ರದೇಶದಲ್ಲಿ ₹60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ. ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮದ ಬಳಿ ಈಗಾಗಲೇ ಕಟ್ಟಡ ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷ ಜಾತ್ರೆಯಲ್ಲಿ ಇದರ ಉದ್ಘಾಟನೆ ನಡೆಯಲಿದ್ದು, ಬರುವ ಜೂನ್ ತಿಂಗಳಿಂದಲೇ ಪ್ರವೇಶ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತದೆ.
ವೀಡಿಯೋ ವೈರಲ್ : ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಈ ಕುರಿತು ಮಠಕ್ಕೆ ಬಂದಿರುವ ಭಕ್ತರೊಂದಿಗೆ ಸಹಜವಾಗಿ ಕುಶಲೋಪರಿ ಮಾತನಾಡುವ ವೇಳೆಯಲ್ಲಿ ಈ ವಿಷಯ ಹೊರಹಾಕಿದ್ದಾರೆ.
ಈಗಾಗಲೇ ಐದು ಸಾವಿರ ಮಕ್ಕಳಿಗೆ ಹಾಸ್ಟೆಲ್ ಮಾಡಿದ್ದೇವೆ, ಅದರಂತೆಯೇ ಹಳ್ಳಿ ಮಕ್ಕಳು, ಬೀದಿ ಬದಿ ವ್ಯಾಪಾರಸ್ಥರು, ಆಟೋದವರ ಮಕ್ಕಳು, ಕಾಯಿಪಲ್ಯೆ ಮಾರುವವರ ಮಕ್ಕಳು, ಕಸ ಹೊಡೆಯುವವರ ಮಕ್ಕಳು, ಇಂಥವರ ಮಕ್ಕಳು ಇರ್ತಾರಲ್ಲ ಅವರಿಗೆ ಪಿಯುಸಿಯನ್ನು ₹2-3 ಲಕ್ಷ ಡೊನೇಷನ್ ಕೊಟ್ಟು ಓದಲು ಆಗುವುದಿಲ್ಲ. ಅಂಥವರ 1500 ಮಕ್ಕಳಿಗೆ (ಹೆಣ್ಣು ಮಕ್ಕಳಿಗೆ) ಸಂಪೂರ್ಣ ಉಚಿತ ಮಾಡಿದ್ದೇನೆ. ಅದು ಬರಿ ಹೆಣ್ಣು ಮಕ್ಕಳಿಗೆ ಮಾತ್ರ. ಅಲ್ಲಿ ಅವರಿಗೆ ನೀಟ್, ಸಿಇಟಿ, ಐಎಎಸ್, ಐಪಿಎಸ್ ಕೋಚಿಂಗ್ ಸೇರಿದಂತೆ ಎಲ್ಲವನ್ನು ಉಚಿತವಾಗಿಯೇ ಕೊಡುತ್ತೇವೆ.
ಸುಮಾರು ₹60 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದ್ದು, ಫುಲ್ ಹೈಟೆಕ್ ಇದೆ. 48 ಎಕರೆ ಕ್ಯಾಂಪಸ್ ಇದೆ. ಕಾಲೇಜು ನಿರ್ಮಾಣ ಆಗಿದೆ. ಹಾಸ್ಟೆಲ್ ಕೆಲಸ ಮುಗಿದಿದೆ. ಡೈನಿಂಗ್ ಹಾಲ್ ನಿರ್ಮಾಣ ಮಾಡುತ್ತಿದ್ದಾರೆ. 20 ಸಾವಿರ ಗಿಡ ನೆಟ್ಟಿದ್ದೇವೆ. ಮಿಯಾ ವಾಕಿ ಮಾದರಿಯಲ್ಲಿ ಗಿಡ ನೆಟ್ಟಿದ್ದೇವೆ. ಹೋಗಿ ನೋಡಿಕೊಂಡು ಬರ್ರಿ... ಎಂದು ಹೇಳುವ ಮೂಲಕ ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮದ ಬಳಿ ನಿರ್ಮಾಣವಾಗಿರುವ ವಿದ್ಯಾರ್ಥಿಯನಿರ ಉಚಿತ ಹಾಸ್ಟೆಲ್ ಮತ್ತು ಪಿಯು ಕಾಲೇಜು ಕುರಿತು ವಿವರಣೆಯನ್ನು ಖುದ್ದು ಸ್ವಾಮೀಜಿಗಳೇ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ