ಫೆ.27ರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಮಸ್ಯೆ?: ಸೇವೆ ಬಹಿಷ್ಕರಿಸಿ ಸಬ್‌ ರಿಜಿಸ್ಟ್ರಾರ್‌ಗಳ ಮುಷ್ಕರ

Published : Feb 23, 2025, 05:50 PM IST
ಫೆ.27ರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಮಸ್ಯೆ?: ಸೇವೆ ಬಹಿಷ್ಕರಿಸಿ ಸಬ್‌ ರಿಜಿಸ್ಟ್ರಾರ್‌ಗಳ ಮುಷ್ಕರ

ಸಾರಾಂಶ

ರಾಜ್ಯ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.27 ರಿಂದ ರಾಜ್ಯಾದ್ಯಂತ ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಿದ್ದಾರೆ.   

ಬೆಂಗಳೂರು (ಫೆ.23): ರಾಜ್ಯ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.27 ರಿಂದ ರಾಜ್ಯಾದ್ಯಂತ ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಸಲ್ಲಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆ.27 ರಿಂದ ಮುಷ್ಕರ ಹೂಡುವುದಾಗಿ ಹೇಳಿದೆ.

ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆ, ಫೇಸ್‌ಲೆಸ್‌ ರಿಜಿಸ್ಟ್ರೇಷನ್‌, ಇಸಿ, ಸಿಸಿ ವಿತರಿಸಲು ಉಂಟಾಗುತ್ತಿರುವ ಸರ್ವರ್‌ ಸಮಸ್ಯೆ, ಐಟಿ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಹಾಗೂ ಉಪ ನೋಂದಣಾಧಿಕಾರಿಗಳ ವರ್ಗಾವಣೆಗಳೂ ಪ್ರತ್ಯೇಕ ನಿಯಮಗಳನ್ನು ರೂಪಿಸಲು ಆಗ್ರಹಿಸಿ ಮುಷ್ಕರ ಹೂಡಲಾಗುತ್ತಿದೆ. ಇನ್ನು ಕರ್ನಾಟಕ ನೋಂದಣಿ ಕಾಯ್ದೆಗೆ 22 ಬಿ ಕಲಂ ಸೇರಿಸಿ ನೋಂದಣಿಯಾದ ದಸ್ತಾವೇಜುಗಳಲ್ಲಿನ ತಪ್ಪುಗಳಿಗೆ ಉಪ ನೋಂದಣಾದಿಕಾರಿಗಳೇ ಹೊಣೆ ಮಾಡಲಾಗುತ್ತಿದೆ. ಇದು ಅಮಾನವೀಯವಾದ ನಿರ್ಣಯ. ಈ ಅಂಶ ಹಿಂಪಡೆಯಬೇಕು. 

ಮುಡಾ ಫೈಲ್‌ ಏನು ಕಡ್ಲೆಪುರಿನಾ: ಬಿಜೆಪಿ ಆರೋಪಕ್ಕೆ ಸಚಿವ ಬೈರತಿ ಸುರೇಶ್ ಕಿಡಿ

ಜತೆಗೆ ಐಟಿ ಇಲಾಖೆ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಿ ಯಾವುದೇ ಮಾಹಿತಿ ಇದ್ದರೂ ಕೇಂದ್ರ ಕಚೇರಿಯಲ್ಲಿ ಪಡೆಯುವಂತೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಉಪ ನೋಂದಣಾಧಿಕಾರಿಗಳು ನೋಂದಣಿ ಕಾಯ್ದೆ 1908ರ ಕಲಂ ಹಾಗೂ ಕರ್ನಾಟಕ ನೋಂದಣಿ ನಿಯಮಗಳು-1965ರ ನಿಯಮಗಳ ಅನ್ವಯ ಕಾರ್ಯನಿರ್ವಹಿಸಬೇಕು. ಆದರೆ, ಈ ನಿಯಮಗಳನ್ನು ಮೀರಿ ಕಾವೇರಿ-2 ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಲ್ಲಿ ಉಂಟಾಗುವ ಸಮಸ್ಯೆಗಳಿಗೆ ಉಪ ನೋಂದಣಾಧಿಕಾರಿಗಳು ತಮ್ಮ ಪ್ರಮೇಯವೇ ಇಲ್ಲದೆ ನ್ಯಾಯಾಲಯಗಳಲ್ಲಿ ನಿಲ್ಲುವಂತಾಗಿದೆ. 

ಪದೇ ಪದೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುತ್ತಿದೆ ಎಂದು ಆರೋಪಿಸಲಾಗಿದೆ. ವರ್ಗಾವಣೆ ನೀತಿ ಜಾರಿ ಮಾಡಿ: ವೈದ್ಯಕೀಯ ಅಧಿಕಾರಿಗಳು, ಪೊಲೀಸರು, ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಸಿಬ್ಬಂದಿ ವರ್ಗಾವಣೆ ಕಾಯ್ದೆಗಳಿವೆ. ಆದರೆ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಯಾವುದೇ ನಿಯಮಗಳಿಲ್ಲ. ಹೀಗಾಗಿ ಪ್ರತ್ಯೇಕ ನಿಯಮ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಗುವ ವಿಶ್ವಾಸ: ಸಂಸದ ಡಾ.ಮಂಜುನಾಥ್

ಅಧಿಕಾರಿಗಳಿಂದ ಅಹೋರಾತ್ರಿ ಧರಣಿ: ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶವಿದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಹಾಗೂ ಲಾಗಿನ್‌ ಐಡಿ ನೀಡದ ಹಿನ್ನೆಲೆಯಲ್ಲಿ ಹಲವು ಹಿರಿಯ ಉಪ ನೋಂದಣಾಧಿಕಾರಿಗಳು ಗುರುವಾರ ರಾತ್ರಿ ನೋಂದಣಿ ಇಲಾಖೆ ಕೇಂದ್ರ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಕಂದಾಯ ಭವನದಲ್ಲಿರುವ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಅವರು, ಡಿ.10 ರಂದು ಹೊರಡಿಸಿರುವ ವರ್ಗಾವಣೆ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಹೀಗಿದ್ದರೂ ವಾಪಸ್‌ ತಮ್ಮ ತಮ್ಮ ಸ್ಥಾನಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವರ್ಗಾವಣೆಗೊಂಡಿದ್ದ ನೋಂದಣಾಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಆಯುಕ್ತ ಕೆ.ದಯಾನಂದ್‌ ದ್ವೇಷ ಸಾಧಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಅಧಿಕಾರಿಗಳು ದೂರಿದರು. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡಿ ಶುಕ್ರವಾರ ಸಂಜೆ ಧರಣಿ ಹಿಂಪಡೆದಿದ್ದು, ಫೆ.27ರಿಂದ ಮುಷ್ಕರದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?
ಕೆಪಿಎಸ್ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ-ಜ್ಯೋತಿ!