
ಬೆಂಗಳೂರು (ಸೆ.14): ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಜರಿಯುವುದು ಕ್ರಿಮಿನಲ್ ಕೇಸ್ ದಾಖಲಿಸಲು ಮಾನದಂಡವಾಗದು. ಅದು ಸಂವಿಧಾನದ ಸೆಕ್ಷನ್ 19(1)ರ ಪ್ರಕಾರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ಅಕ್ಕಿ ಕಳ್ಳ’ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದೆ.
ಉದ್ದೇಶಪೂರ್ವಕವಾಗಿ ಅವಮಾನಿಸುವುದು ಮತ್ತು ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಕಾರ್ಯಕರ್ತರೊಬ್ಬರು ಕಲಬುರಗಿಯ ಚಿತ್ತಾಪುರ ಠಾಣೆಯಲ್ಲಿ ದಾಖಲಿಸಿದ್ದ ದೂರು ಆಧರಿಸಿ ಎಫ್‌ಐಆರ್ ಮತ್ತು ನ್ಯಾಯಾಂಗ ಪ್ರಕ್ರಿಯೆ ರದ್ದುಪಡಿಸುವಂತೆ ಮಣಿಕಂಠ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ಪೀಠ, ಮೇಲ್ನೋಟಕ್ಕೆ ಈ ಪ್ರಕರಣವೂ ರಾಜಕೀಯ ಪ್ರೇರಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಿಯಾಂಕ್ ಖರ್ಗೆ ಮತ್ತು ಮಣಿಕಂಠ ಅವರು ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದಾರೆ. ನಿಂದನೆ ಸಂಬಂಧಿಸಿ ಪ್ರಿಯಾಂಕ್ ಅವರು ನೇರವಾಗಿ ಠಾಣೆಗೆ ದೂರು ದಾಖಲಿಸಿಲ್ಲ. ತಮ್ಮ ಅನುಕೂಲಕ್ಕಾಗಿ ದೂರುದಾರರು ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ, ಮಣಿಕಂಠ ವಿರುದ್ಧದ ಕೇಸ್ ಕಾನೂನಿನ ದುರ್ಬಳಕೆಯಲ್ಲದೆ ಬೇರೇನೂ ಅಲ್ಲ ಎಂದು ನ್ಯಾಯಪೀಠ ಹೇಳಿದೆ.
ಸಕ್ಕರೆಯ ಒಟ್ಟು ಉತ್ಪಾದನೆ ಪೈಕಿ ಶೇ.20ರಷ್ಟನ್ನು ಭಾರತದಲ್ಲಿ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಜವಳಿ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈ ಕುರಿತು ಕೇಂದ್ರ ಜವಳಿ ಸಚಿವಾಲಯ 2023ರ ಡಿ.26 ಹಾಗೂ 2024ರ ಜೂ.28ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ, ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ಅರ್ಜಿ ವಜಾಗೊಳಿಸಿದೆ. ಕಚ್ಚಾ ಸೆಣಬಿನ ಬೆಳಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ನೀತಿ ತರಲಾಗಿದೆ.
ಶೇ.100ರಷ್ಟು ಸಕ್ಕರೆ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲ ಬಳಕೆ ಕ್ರಮವನ್ನು ಸುಪ್ರೀಂ ಎತ್ತಿಹಿಡಿದಿತ್ತು. ಈಗ ಶೇ.20ರಷ್ಟು ಬಳಸಲು ಅಧಿಸೂಚನೆ ಹೊರಡಿಸಿದ್ದು, ಅದನ್ನು ಪ್ರಶ್ನಿಸುವುದಾದರೆ ಪರಿಗಣಿಸಲ್ಲ ಎಂದು ಪೀಠ ತಿಳಿಸಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯು ಸೆಣಬಿನ ಉದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದೆ. ಆದರೆ, ಈ ಚೀಲಗಳು ಆರೋಗ್ಯಕ್ಕೆ ಅಪಾಯಕಾರಿ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗಲಿದೆ ಹಾಗೂ ಸಕ್ಕರೆ ಕಲುಷಿತಗೊಳ್ಳುತ್ತದೆ. ಆದ್ದರಿಂದ ಕೇಂದ್ರ ಜವಳಿ ಸಚಿವಾಲಯದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರ ಸಂಘ ಕೋರಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ