ಕೊರೋನಾ ಚಿಕಿತ್ಸೆಗೆ 7 ಲಕ್ಷ ಬಿಲ್‌: ಕಂಗಾಲಾದ ರೋಗಿ..!

By Kannadaprabha NewsFirst Published Aug 2, 2020, 8:50 AM IST
Highlights

ಕೊರೋನಾ ವರದಿಗಾಗಿ ನಿತ್ಯವೂ ಗರ್ಭಿಣಿ 60 ಕಿ.ಮೀ. ಪ್ರಯಾಣ| ಕೊರೋನಾ ಪರೀಕ್ಷೆಗಾಗಿ ಸ್ವ್ಯಾಬ್‌ ನೀಡಿ ಒಂದು ವಾರ ಕಳೆದರೂ ಈವರೆಗೂ ವರದಿ ನೀಡದ ಆಸ್ಪತ್ರೆ| ವರದಿಗಾಗಿ ಕಳೆದ ಎರಡು ದಿನಗಳಿಂದ ಹೊಸಕೋಟೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ವಾಪಸ್‌ ಹೋದ ಗರ್ಭಿಣಿ| ಕೊರೋನಾ ಪರೀಕ್ಷಾ ವರದಿ ಬಂದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದ ವೈದ್ಯರು| 

ಬೆಂಗಳೂರು(ಆ.02): ಕೊರೋನಾ ಪರೀಕ್ಷಾ ವರದಿ ಲಭ್ಯವಾಗದ ಕಾರಣ ಕಳೆದ ಎರಡು ದಿನಗಳಿಂದ ತುಂಬು ಗರ್ಭಿಣಿಯೊಬ್ಬರು ಪ್ರತಿದಿನ ಸುಮಾರು 60 ಕಿ.ಮೀ ಪ್ರಯಾಣಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. 

ಈ ಮಹಿಳೆ ಕೊರೋನಾ ಪರೀಕ್ಷೆಗಾಗಿ ಸ್ವ್ಯಾಬ್‌ ನೀಡಿ ಒಂದು ವಾರ ಕಳೆದರೂ ಈವರೆಗೂ ವರದಿ ನೀಡಿಲ್ಲ. ವರದಿಗಾಗಿ ಕಳೆದ ಎರಡು ದಿನಗಳಿಂದ ಹೊಸಕೋಟೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ವಾಪಸ್‌ ಹೋಗುವಂತಾಗಿದೆ. ಕೊರೋನಾ ಪರೀಕ್ಷಾ ವರದಿ ಬಂದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗುವುದು ಎಂದು ವೈದ್ಯರು ತಿಳಿಸುತ್ತಿದ್ದಾರೆ. ವರದಿ ನೀಡುವಂತೆ ಪ್ರಯೋಗಾಲಯ ಮತ್ತು ವೈದ್ಯಕೀಯ ಸಿಬ್ಬಂದಿಯಲ್ಲಿ ಮನವಿ ಮಾಡಿದರೂ ವರದಿ ಮಾತ್ರ ಸಿಗುತ್ತಿಲ್ಲ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.

ಕೊರೋನಾ ಚಿಕಿತ್ಸೆಗೆ 7 ಲಕ್ಷ ಬಿಲ್‌!

ಕೊರೋನಾ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ ಬಳಿಕ 7 ಲಕ್ಷ ಬಿಲ್‌ ಮಾಡಿರುವ ನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆ ವಿರುದ್ಧ ರೋಗಿಯ ಸಂಬಂಧಿಕರು ಮತ್ತು ಮಾನವ ಹಕ್ಕುಗಳ ಸಂಘಟನೆಯ ಸದಸ್ಯರು ಪ್ರತಿಭಟಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಗರದ ಪಾಟ್ರಿಟೌನ್‌ ನಿವಾಸಿ ಸುಮಾರು 33 ವರ್ಷದ ಮಹಿಳೆಯನ್ನು ಜುಲೈ 9ರಂದು ಸೆಂಟ್‌ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದ್ದರು. 23 ದಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ 7 ಲಕ್ಷ ಬಿಲ್‌ ಪಾವತಿಸುವಂತೆ ಆಸ್ಪತ್ರೆ ತಿಳಿಸಿದೆ.

ಆಗಸ್ಟ್‌ ಅಂತ್ಯಕ್ಕೆ ರಾಜ್ಯದಲ್ಲಿ 3 ಲಕ್ಷ ಜನರಿಗೆ ಸೋಂಕು..!

ನಿಯಮ ಉಲ್ಲಂಘನೆ ಆಗಿಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಸಿಬ್ಬಂದಿ, ಬಿಬಿಎಂಪಿ, ಆರೋಗ್ಯ ಇಲಾಖೆಯ ಸೂಚನೆ ಇಲ್ಲದೆ ಸಾಮಾನ್ಯ ರೋಗಿಯಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಸಾಮಾನ್ಯ ರೋಗಿಗೆ ನೀಡುವ ರೀತಿಯಲ್ಲಿ ಚಿಕಿತ್ಸೆ ಹಾಗೂ ಬಿಲ್‌ ನೀಡಿದ್ದೇವೆ. ನಿಯಮ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಸ್ವ್ಯಾಬ್‌ ಸಂಗ್ರಹದಲ್ಲಿ ಬಿಬಿಎಂಪಿ ದಾಖಲೆ

ಬೆಂಗಳೂರಿನಲ್ಲಿ ಶನಿವಾರ ದಾಖಲೆಯ 11 ಸಾವಿರ ಮಂದಿಯ ಗಂಟಲ ದ್ರವ ಮತ್ತು ಮೂಗಿನ ದ್ರವದ ಮಾದರಿ (ಸ್ವ್ಯಾಬ್‌) ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ನಗರದಲ್ಲಿ ಕೊರೋನಾ ಸೋಂಕಿತರನ್ನು ತ್ವರಿತವಾಗಿ ಪತ್ತೆ ಮಾಡುವ ಉದ್ದೇಶದಿಂದ ನಗರದ 150 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 62 ಮೊಬೈಲ್‌ ಘಟಕದಲ್ಲಿ ಸಾರ್ವಜನಿಕ ಪ್ರದೇಶಗಳಾದ ಮಾರುಕಟ್ಟೆ, ಬಸ್‌ ನಿಲ್ದಾಣ, ಮಾಲ್‌ ಸೇರಿದಂತೆ ಇನ್ನಿತರ ಕಡೆ ಆರ್‌ಟಿಪಿಸಿಆರ್‌ ಮತ್ತು ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲಾಗುತ್ತಿದೆ.

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಒಂದೇ ದಿನ ದಾಖಲೆಯ 10 ಸಾವಿರಕ್ಕೂ ಅಧಿಕ ಮಂದಿಯ ಗಂಟಲ ದ್ರವ ಮಾದರಿ ಪಡೆಯಲಾಗಿದೆ. ಶನಿವಾರ ಆರ್‌ಟಿಪಿಸಿಆರ್‌ ಮಾದರಿಯಲ್ಲಿ ಒಟ್ಟು 765 ಮಂದಿಗೆ ಪರೀಕ್ಷೆ ನಡೆಸಿದರೆ, 6,299 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ 4,081 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಹಿಂದೆ ಸೋಂಕು ದೃಢಪಟ್ಟ 106 ಮಂದಿಗೆ ಆರ್‌ಟಿಪಿಸಿಆರ್‌ ಮೂಲಕ ಮರು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರ ಸಂಪರ್ಕ ಹೊಂದಿದ 820 ಪ್ರಾಥಮಿಕ ಸಂಪರ್ಕಿತರಿಗೆ, ಪರೋಕ್ಷ ಸಂಪರ್ಕ ಹೊಂದಿದ 91 ಸೇರಿದಂತೆ ಒಟ್ಟು 11,397ಯನ್ನು ಶನಿವಾರ ಪರೀಕ್ಷೆಗೆ ಒಳಪಡಿಸಲಾಗಿದೆ.
 

click me!