
ಬೆಂಗಳೂರು(ಸೆ.26):ನಗರದ ಮಲ್ಲೇಶ್ವರದ ‘ದಿ ಮೈಸೂರು ಲ್ಯಾಂಫ್ಸ್ ವರ್ಕ್ಸ್ ಲಿಮಿಟೆಡ್’ ಕಾರ್ಖಾನೆ ಹಾಗೂ ಈ ಕಾರ್ಖಾನೆಗೆ ಸೇರಿದ ಸ್ವತ್ತುಗಳನ್ನು ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಪರಭಾರೆ ಮಾಡದೆ ಸರ್ಕಾರವೇ ಉಳಿಸಿಕೊಂಡು ಸಾರ್ವಜನಿಕ ಉದ್ದೇಶಗಳಿಗೆ ಬಳಸಬೇಕೆಂದು ವಿರೋಧ ಪಕ್ಷದ ಸದಸ್ಯರು ವಿಧಾನ ಪರಿಷತ್‌ನಲ್ಲಿ ಖಾಸಗಿ ನಿರ್ಣಯ ಮಂಡಿಸಿದರು.
ಕಾಂಗ್ರೆಸ್‌ನ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ, ಮೈಸೂರು ಮಹಾರಾಜರು ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರು 1934ರಲ್ಲಿ ಸುಮಾರು 24 ಎಕರೆ ಪ್ರದೇಶದಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಿದ್ದರು. ಕಳೆದ ಹಲವು ವರ್ಷಗಳಿಂದ ಈ ಕಾರ್ಖಾನೆ ಹಾಗೂ ಅದರ ಸ್ವತ್ತುಗಳನ್ನು ಖಾಸಗಿಯವರಿಗೆ ವಹಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಇದನ್ನು ಖಾಸಗಿಯವರಿಗೆ ವಹಿಸಬಾರದು. ಸರ್ಕಾರವೇ ನೇರವಾಗಿ ಸ್ವಾಧೀನಕ್ಕೆ ಪಡೆದು ಈ ಜಾಗದಲ್ಲಿ ಆಸ್ಪತ್ರೆ, ಮಕ್ಕಳ ಪಾರ್ಕ್, ಉದ್ಯಾನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸಂಕಷ್ಟ: 4008 ಕೋಟಿ ಪೂರಕ ಅಂದಾಜಿಗೆ ಒಪ್ಪಿಗೆ
ಸರ್ಕಾರಕ್ಕೆ ಕಮಾಂಡ್ ಮಾಡಬೇಡಿ:
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಈ ಕಾರ್ಖಾನೆ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಮಾತನಾಡಿದ್ದು, ಅನ್ಯರಿಗೆ ಪರಭಾರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದರೂ ಖಾಸಗಿ ನಿರ್ಣಯ ಮಂಡಿಸಿ, ಸರ್ಕಾರಕ್ಕೆ ಕಮಾಂಡ್ ಮಾಡುವುದು ಸರಿಯಲ್ಲ ಎಂದರು.
ಬಳಿಕ ಮಾತನಾಡಿ ಬಿ.ಕೆ.ಹರಿಪ್ರಸಾದ್ ಅವರು, ಈ ಹಿಂದೆ ಸರ್ಕಾರದ ಅಧೀನದಲ್ಲೇ ಇದ್ದ ಎಚ್‌ಎಂಟಿ, ಎನ್‌ಜಿಎಫ್, ಅಶೋಕ ಹೋಟೆಲ್ ಸೇರಿದಂತೆ ಹಲವು ಸ್ವತ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಮಲ್ಲೇಶ್ವರ ಭಾಗದಲ್ಲಿ ಹಸಿರು ಪರಿಸರ ಕಡಿಮೆಯಿದೆ. ಈ ಕಾರ್ಖಾನೆಯ ಜಾಗವನ್ನೂ ಖಾಸಗಿಯವರಿಗೆ ವಹಿಸಿದರೆ ಆ ಭಾಗದಲ್ಲಿ ಹಸಿರು ಪರಿಸರವೇ ಇಲ್ಲದಂತಾಗುತ್ತದೆ. ಹೀಗಾಗಿ ಸರ್ಕಾರವೇ ಸದರಿ ಜಾಗ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಮಾಧುಸ್ವಾಮಿ ಮತ್ತೊಮ್ಮೆ ಈ ಕಾರ್ಖಾನೆ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಸರ್ಕಾರದ ಬಳಿಯೇ ಈ ಜಾಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದೇವೆ ಎಂದು ಚರ್ಚೆಗೆ ಅಂತ್ಯ ಹಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ